ನವದೆಹಲಿ: ಐಟಿ ಕಂಪನಿಗಳು (IT Companies) ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ (Layoffs) ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್ (Bhupender Yadav) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಗಳ ವಜಾ ಮತ್ತು ಹಿಂಬಡ್ತಿಯು ‘ಕೈಗಾರಿಕಾ ವಿವಾದ ಕಾಯ್ದೆ (Industrial Disputes Act)’ಗೆ ಅನುಗುಣವಾಗಿ ಇಲ್ಲದಿದ್ದರೆ ಅದು ಕಾನೂನುಬಾಹಿರವಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಭಾರತದ ಐಟಿ ಕಂಪನಿಗಳಲ್ಲಿ, ಸಾಮಾಜಿಕ ಮಾಧ್ಯಮ, ಎಜುಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಅವರು ಉತ್ತರಿಸಿದರು.
ಉದ್ಯೋಗಿಗಳ ವಜಾ ಮತ್ತು ಹಿಂಬಡ್ತಿಗೆ ಸಂಬಂಧಿಸಿ 1947ರ ಕೈಗಾರಿಕಾ ವಿವಾದ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಕಾಯ್ದೆಯ ಪ್ರಕಾರ, 100 ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಉದ್ಯೋಗ ನೀಡಿರುವ ಸಂಸ್ಥೆಯು ಉದ್ಯೋಗಿಗಳ ವಜಾ, ಹಿಂಬಡ್ತಿ ಮಾಡಬೇಕಿದ್ದರೆ ಸರ್ಕಾರದಿಂದ ಮುಂಚಿತವಾಗಿ ಅನುಮತಿ ಪಡೆದಿರಬೇಕು. ಕಾಯ್ದೆಯ ಪ್ರಕಾರವಲ್ಲದೆ ಮಾಡಿದ ವಜಾ, ಹಿಂಬಡ್ತಿ ಕಾನೂನುಬಾಹಿರ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: Layoffs: ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸ್ವಿಗ್ಗಿ, ವೇದಾಂತು, ಅಡೋಬ್
ಉದ್ಯೋಗದಿಂದ ವಜಾಗೊಳ್ಳುವ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕು. ಉದ್ಯೋಗದಿಂದ ವಜಾಗೊಂಡ ವ್ಯಕ್ತಿಗೆ ಭವಿಷ್ಯದಲ್ಲಿ ಮತ್ತೆ ಕೆಲಸ ನೀಡುವುದಕ್ಕೆ ಸಂಬಂಧಿಸಿದ ಉಲ್ಲೇಖವೂ ಕಾಯ್ದೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಐಟಿ, ಸಾಮಾಜಿಕ ಮಾಧ್ಯಮ, ಎಜುಟೆಕ್ ಸಂಸ್ಥೆಗಳು, ಬಹುರಾಷ್ಟ್ರೀಯ ಹಾಗೂ ಭಾರತೀಯ ಕಂಪನಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯವ್ಯಾಪ್ತಿಯು ಆಯಾ ರಾಜ್ಯ ಸರ್ಕಾರಗಳ ಬಳಿ ಇರುತ್ತದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ದತ್ತಾಂಶವನ್ನು ನಿರ್ವಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ದೇಶದಲ್ಲಿ ಎಜುಟೆಕ್ ಕಂಪನಿ ಬೈಜೂಸ್ ಸಹ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಎಜುಟೆಕ್ ಕಂಪನಿ ‘ಅಮೆಜಾನ್ ಅಕಾಡೆಮಿ’ಯನ್ನು ಹಂತಹಂತವಾಗಿ ಮುಚ್ಚುವುದಾಗಿ ಇತ್ತೀಚೆಗೆ ಅಮೆಜಾನ್ ಇಂಡಿಯಾ ತಿಳಿಸಿತ್ತು. ಇದಕ್ಕೂ ಮುನ್ನ ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಅಮೆಜಾನ್, 20,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಬುಧವಾರ ವರದಿಯಾಗಿತ್ತು. ಭಾರತದಲ್ಲಿ ಅಮೆಜಾನ್ ಬಲವಂತವಾಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆಯುತ್ತಿದೆ ಎಂಬ ದೂರುಗಳು ಇತ್ತೀಚೆಗೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಕೇಂದ್ರ ಕಾರ್ಮಿಕ ಸಚಿವಾಲಯ ಅಮೆಜಾನ್ಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಉದ್ಯೋಗಿಗಳ ವಜಾ ವಿಚಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ