Layoffs: ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸ್ವಿಗ್ಗಿ, ವೇದಾಂತು, ಅಡೋಬ್
ಅಡೋಬ್ ಸುಮಾರು 100 ಉದ್ಯೋಗಗಳ ವಜಾಕ್ಕೆ ಮುಂದಾಗಿದೆ. ಆಹಾರ, ದಿನಸಿ ವಿತರಣಾ ಆನ್ಲೈನ್ ತಾಣ ಸ್ವಿಗ್ಗಿ ಹಾಗೂ ಎಜುಟೆಕ್ ಸಂಸ್ಥೆ ವೇದಾಂತು ಸಹ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿವೆ ಎನ್ನಲಾಗಿದೆ.
ನವದೆಹಲಿ: ಜಾಗತಿಕವಾಗಿ 20,000 ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಜಾನ್ (Amazon) ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಸ್ವಿಗ್ಗಿ (Swiggy), ವೇದಾಂತು (Vedantu) ಹಾಗೂ ಅಡೋಬ್ (Adobe) ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಅಡೋಬ್ ಸುಮಾರು 100 ಉದ್ಯೋಗಗಳ ವಜಾಕ್ಕೆ ಮುಂದಾಗಿದೆ. ಆಹಾರ, ದಿನಸಿ ವಿತರಣಾ ಆನ್ಲೈನ್ ತಾಣ ಸ್ವಿಗ್ಗಿ ಹಾಗೂ ಎಜುಟೆಕ್ ಸಂಸ್ಥೆ ವೇದಾಂತು ಸಹ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿವೆ ಎನ್ನಲಾಗಿದೆ.
ಉದ್ಯೋಗಿಗಳ ವಜಾ; ಈಗ ಸ್ವಿಗ್ಗಿ ಸರದಿ
ಸ್ವಿಗ್ಗಿ ಸುಮಾರು 250 ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಚಿಂತನೆ ನಡೆಸಿದೆ ಎಂದು ಖಚಿತ ಮೂಲಗಳನ್ನು ಉಲ್ಲೇಖಿಸಿ ‘ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. ಈ ಕುರಿತು ಸ್ವಿಗ್ಗಿ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಉದ್ಯೋಗ ಕಡಿತದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Amazon Layoffs: ದೊಡ್ಡ ಪ್ರಮಾಣದ ಉದ್ಯೋಗ ಕಡಿತಕ್ಕೆ ಅಮೆಜಾನ್ ಚಿಂತನೆ; 20,000 ಮಂದಿ ವಜಾ ಸಾಧ್ಯತೆ
ಅಕ್ಟೋಬರ್ನಲ್ಲೇ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಿದ್ದು, ಇದರ ಆಧಾರದಲ್ಲಿ ರೇಟಿಂಗ್ಸ್, ಬಡ್ತಿ ಘೋಷಿಸಿದ್ದೇವೆ ಎಂದು ಇತ್ತೀಚೆಗೆ ಕಂಪನಿ ಹೇಳಿತ್ತು. ಉತ್ತಮ ಕಾರ್ಯಕ್ಷಮತೆ ಹೊಂದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಹಲವು ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸುವ ಬಗ್ಗೆ ಸ್ವಿಗ್ಗಿ ಈಗಾಗಲೇ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ನೂರಾರು ಮಂದಿಯನ್ನು ಮನೆಗೆ ಕಳುಹಿಸಿದ ವೇದಾಂತು
ಎಜುಟೆಕ್ ಕಂಪನಿ ವೇದಾಂತು ಇತ್ತೀಚೆಗೆ ಸುಮಾರು 385 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವರದಿ ಮಾಡಿದೆ. ಸಂಸ್ಥೆಯು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 11.6ರಷ್ಟು ಕಡಿತ ಮಾಡಿದೆ. ಈ ವರ್ಷ ಸುಮಾರು 1,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಸದ್ಯ ಸಂಸ್ಥೆಯಲ್ಲಿ 3,300 ಉದ್ಯೋಗಿಗಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನೂರು ಮಂದಿಯ ವಜಾಗೊಳಿಸಿದ ಅಡೋಬ್
ಕೆಲವು ದಿನಗಳ ಹಿಂದಷ್ಟೇ ಅಡೋಬ್ ಕಂಪನಿ ಸುಮಾರು 100 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ‘ಬ್ಲೂಮ್ಬರ್ಗ್’ ವರದಿ ತಿಳಿಸಿದೆ. ವೆಚ್ಚ ಕಡಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತರ ಕಂಪನಿಗಳಂತೆ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತ ಮಾಡುತ್ತಿಲ್ಲ ಎಂದು ಅಡೋಬ್ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್
ಜಾಗತಿಕವಾಗಿ ಸುಮಾರು 16 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, 20,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಬುಧವಾರ ವರದಿಯಾಗಿತ್ತು. ಇದಕ್ಕೂ ಮುನ್ನ ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಭಾರತದಲ್ಲಿ ಎಜುಟೆಕ್ ಕಂಪನಿ ಬೈಜೂಸ್ ಸಹ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಜುಟೆಕ್ ಕಂಪನಿ ಅಮೆಜಾನ್ ಅಕಾಡೆಮಿಯನ್ನು ಹಂತಹಂತವಾಗಿ ಮುಚ್ಚುವುದಾಗಿ ಇತ್ತೀಚೆಗೆ ಅಮೆಜಾನ್ ಇಂಡಿಯಾ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Thu, 8 December 22