Amazon Layoffs: ದೊಡ್ಡ ಪ್ರಮಾಣದ ಉದ್ಯೋಗ ಕಡಿತಕ್ಕೆ ಅಮೆಜಾನ್ ಚಿಂತನೆ; 20,000 ಮಂದಿ ವಜಾ ಸಾಧ್ಯತೆ
ಅಮೆಜಾನ್ ಜಾಗತಿಕವಾಗಿ ಸುಮಾರು 16 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ವಿತರಣೆ ಸಿಬ್ಬಂದಿ, ಕಾರ್ಪೊರೇಟ್ ಕಾರ್ಯನಿರ್ವಾಹಕರು, ತಂತ್ರಜ್ಞಾನ ಉದ್ಯೋಗಿಗಳು ಸೇರಿದಂತೆ ವಿವಿಧ ವಿಭಾಗಗಳಿಂದ ಉದ್ಯೋಗಿಗಳ ವಜಾಕ್ಕೆ ಕಂಪನಿ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ನವದೆಹಲಿ: ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲು ಅಮೆಜಾನ್ (Amazon) ಕಂಪನಿ ಮುಂದಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ 20,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ (Layoffs) ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಅಮೆಜಾನ್ ಜಾಗತಿಕವಾಗಿ ಸುಮಾರು 16 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ವಿತರಣೆ ಸಿಬ್ಬಂದಿ, ಕಾರ್ಪೊರೇಟ್ ಕಾರ್ಯನಿರ್ವಾಹಕರು, ತಂತ್ರಜ್ಞಾನ ಉದ್ಯೋಗಿಗಳು ಸೇರಿದಂತೆ ವಿವಿಧ ವಿಭಾಗಗಳಿಂದ ಉದ್ಯೋಗಿಗಳ ವಜಾಕ್ಕೆ ಕಂಪನಿ ಮುಂದಾಗಿದೆ ಎಂದು ‘ಕಂಪ್ಯೂಟರ್ವರ್ಲ್ಡ್’ ವರದಿ ಮಾಡಿದೆ.
ಕಂಪನಿಯ ಎಲ್ಲ ಹಂತಗಳ ಉದ್ಯೋಗಿಗಳ ಮೇಲೆಯೂ ಉದ್ಯೋಗ ಕಡಿತದ ಭೀತಿ ಇದೆ ಎಂದು ಮೂಲಗಳು ಹೇಳಿವೆ. ಅಮೆಜಾನ್ 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಕೆಲವು ದಿನಗಳ ಹಿಂದೆ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು. ಅಮೆಜಾನ್ನ ಇತಿಹಾಸದಲ್ಲಿಯೇ ಇದು ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಎಂದು ವರದಿ ಹೇಳಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಇನ್ನೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ವಜಾ ಮಾಡುವ ಸಾಧ್ಯತೆ ಇದೆ.
ಉದ್ಯೋಗಿಗಳ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವಂತೆ ಅಮೆಜಾನ್ ತನ್ನ ಮ್ಯಾನೇಜರ್‌ಗಳಿಗೆ ಕೆಲವು ದಿನಗಳ ಹಿಂದೆ ಸೂಚನೆ ನೀಡಿತ್ತು. ಕಾರ್ಪೊರೇಟ್ ಉದ್ಯೋಗಿಗಳಿಗೆ ವಜಾಗೊಳಿಸುವ ಬಗ್ಗೆ 24 ಗಂಟೆಗಳ ಮೊದಲು ನೋಟಿಸ್ ನೀಡಿ, ಪರಿಹಾರ ಪಾವತಿ ಮಾಡಿ ವಜಾಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಮೆಜಾನ್ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಂಡಿತ್ತು. ಹೆಚ್ಚುವರಿಯಾಗಿ ಮಾಡಿಕೊಂಡಿದ್ದ ನೇಮಕಾತಿಯನ್ನು ಈಗ ಕಡಿತ ಮಾಡಲು ಮುಂದಾಗಿದೆ ಎನ್ನಲಾಗಿದೆ. ಅಕ್ಟೋಬರ್ನಲ್ಲಿ ಕಂಪನಿ ಮಾರಾಟ ಕುಸಿತ ಮತ್ತು ಲಾಭದ ಪ್ರಮಾಣದಲ್ಲಿ ಇಳಿಕೆ ದಾಖಲಿಸಿತ್ತು. ಪರಿಣಾಮವಾಗಿ ಉದ್ಯೋಗ ಕಡಿತ ಹಾಗೂ ವೆಚ್ಚವನ್ನು ನಿಯಂತ್ರಣಕ್ಕೆ ತರಲು ಮುಂದಾಗಿದೆ.
ವಿರೋಧಕ್ಕೆ ಗುರಿಯಾಗಿದ್ದ ಬಲವಂತದ ರಾಜೀನಾಮೆ
ಭಾರತದಲ್ಲಿ ಬಲವಂತವಾಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಈ ವಿಚಾರವಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ಕಂಪನಿಗೆ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಸರ್ಕಾರಕ್ಕೆ ಉತ್ತರ ನೀಡಿದ್ದ ಅಮೆಜಾನ್, ಬಲವಂತವಾಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆದಿಲ್ಲ. ಸ್ವಯಂಪ್ರೇರಿತ ಬೆರ್ಪಡುವಿಕೆ ಕಾರ್ಯಕ್ರಮದ ಅನ್ವಯ ಉದ್ಯೋಗಿಗಳ ರಾಜೀನಾಮೆಯು ಅವರ ಇಚ್ಛೆಗೆ ಬಿಟ್ಟ ವಿಚಾರ ಎಂದು ಹೇಳಿತ್ತು.
ಸಂಕಷ್ಟದಲ್ಲಿ ಅಮೆಜಾನ್ ಆನ್ಲೈನ್ ಉದ್ಯಮ
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆರಂಭಿಸಿದ ಕೆಲವು ಉದ್ಯಮಗಳನ್ನು ಅಮೆಜಾನ್ ಒಂದೊಂದಾಗಿ ಸ್ಥಗಿತಗೊಳಿಸುತ್ತಿದೆ. 2020ರ ಮೇ ತಿಂಗಳಲ್ಲಿ, ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾ ಆಹಾರ ವಿತರಣೆ ಉದ್ಯಮವನ್ನು ಆರಂಭಿಸಿತ್ತು. ಈ ಉದ್ಯಮವನ್ನು ಸ್ಥಗಿತಗೊಳಿಸುವುದಾಗಿ ಇತ್ತೀಚೆಗೆ ಅಮೆಜಾನ್ ತಿಳಿಸಿದೆ. ಎಜುಟೆಕ್ ತಾಣ ಅಮೆಜಾನ್ ಅಕಾಡೆಮಿಯನ್ನೂ ಹಂತ ಹಂತವಾಗಿ ಮುಚ್ಚುವುದಾಗಿ ಇತ್ತೀಚೆಗೆ ಅಮೆಜಾನ್ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ