Amazon Academy: ಬೈಜೂಸ್ ಬೆನ್ನಲ್ಲೇ ಅಮೆಜಾನ್ ಅಕಾಡೆಮಿಗೂ ಸಂಕಷ್ಟ; ಆನ್ಲೈನ್ ಕಲಿಕಾ ತಾಣ ಮುಚ್ಚುವುದಾಗಿ ಘೋಷಣೆ
ಅಮೆಜಾನ್ ಅಕಾಡೆಮಿಯನ್ನು ಹಂತಹಂತವಾಗಿ ಮುಚ್ಚಲಾಗುವುದು. ಈಗಿರುವ ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಅಮೆಜಾನ್ ಹೇಳಿದೆ.
ಬೆಂಗಳೂರು: ದೇಶದ ಪ್ರಮುಖ ಎಜುಟೆಕ್ ಕಂಪನಿ ಬೈಜೂಸ್ (BYJU’S) ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ಕಡಿತ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆಯ ಕಾವು ಆರುವ ಮುನ್ನವೇ ಅಮೆಜಾನ್ ಅಕಾಡೆಮಿಯೂ (Amazon Academy) ಮುಚ್ಚುವ ಹಂತಕ್ಕೆ ಬಂದಿದೆ. ಆನ್ಲೈನ್ ಕಲಿಕಾ ತಾಣ ಅಮೆಜಾನ್ ಅಕಾಡೆಮಿಯನ್ನು ಮುಚ್ಚುವುದಾಗಿ ಅಮೆಜಾನ್ ಡಾಟ್ಕಾಂ (Amazon.com) ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ ಕಾರ್ಯಾರಂಭ ಮಾಡಿದ ಎರಡು ವರ್ಷಗಳ ಒಳಗಾಗಿ ತಾಣ ಸ್ಥಗಿತಗೊಂಡಂತಾಗಲಿದೆ. ಅಮೆಜಾನ್ ಅಕಾಡೆಮಿನ್ನು ಮುಚ್ಚಲು ಕಾರಣ ಏನು ಎಂಬುದನ್ನು ಅಮೆಜಾನ್ ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಆರಂಭದಲ್ಲಿ ಅಮೆಜಾನ್ ಅಕಾಡೆಮಿಯನ್ನು ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವರ್ಚುವಲ್ ಕಲಿಕೆಗಾಗಿ ಅಕಾಡೆಮಿಯನ್ನು ಶುರುಮಾಡಲಾಗಿತ್ತು. ಜೆಇಇ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುತ್ತಿತ್ತು. ದೇಶದ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿತ್ತು.
ಇದನ್ನೂ ಓದಿ: Amazon Layoffs: ಭಾರತದಲ್ಲಿ ಕೆಲವರ ರಾಜೀನಾಮೆಗೆ ಸೂಚಿಸಿದ ಅಮೆಜಾನ್; ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್
ಅಮೆಜಾನ್ ಅಕಾಡೆಮಿಯನ್ನು ಹಂತಹಂತವಾಗಿ ಮುಚ್ಚಲಾಗುವುದು. ಈಗಿರುವ ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಅಮೆಜಾನ್ ಹೇಳಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಮುಚ್ಚಿದ್ದ ಮತ್ತು ವರ್ಚುವಲ್ ಕಲಿಕೆಗೆ ಅವಕಾಶ ನೀಡುತ್ತಿದ್ದ ಸಂಸ್ಥೆಗಳೆಲ್ಲ ಈಗ ಪುನರಾರಂಭಗೊಂಡಿರುವುದು ಸಂಸ್ಥೆಯ ಹಿನ್ನಡೆಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಕಳೆದ ತಿಂಗಳು ಬೈಜೂಸ್ ಸುಮಾರು 2,500 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬೈಜೂಸ್ ಉದ್ಯೋಗಿಗಳಿಂದ ಬಲವಂತದ ರಾಜೀನಾಮೆ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಅಮೆಜಾನ್ಗೆ ಜಾಗತಿಕ ಮಟ್ಟದಲ್ಲಿ ಸಂಕಷ್ಟ
ಜಾಗತಿಕ ಮಟ್ಟದಲ್ಲಿ ಸುಮಾರು 10 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಚಿಂತನೆ ನಡೆಸಿರುವುದಾಗಿ ಅಮೆಜಾನ್ ಕಂಪನಿ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ, ಸ್ವಯಂಪ್ರೇರಿತರಾಗಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಭಾರತದಲ್ಲಿ ಹಲವು ಮಂದಿ ಉದ್ಯೋಗಿಗಳಿಗೆ ಅಮೆಜಾನ್ ಸೂಚಿಸಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ಕಂಪನಿಯು ಸ್ವಯಂಪ್ರೇರಿತ ಪ್ರತ್ಯೇಕತೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜೀನಾಮೆ ನೀಡುವ ಉದ್ಯೋಗಿಗಳಿಗೆ ಕೆಲವು ಪರಿಹಾರಗಳನ್ನು ನೀಡುವ ಭರವಸೆ ನೀಡಿದೆ ಎನ್ನಲಾಗಿತ್ತು.
ಈ ಮಧ್ಯೆ, ಕಾರ್ಮಿಕ ನಿಯಮ ಉಲ್ಲಂಘನೆ ಬಗ್ಗೆ ದೂರಗಳು ದಾಖಲಾದ ಕಾರಣ ಅಮೆಜಾನ್ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್ ನೀಡಿತ್ತು. ಬೆಂಗಳೂರಿನಲ್ಲಿರುವ ಕಾರ್ಮಿಕ ಉಪ ಆಯುಕ್ತರ ಬಳಿ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ