Amazon Layoffs: ಭಾರತದಲ್ಲಿ ಕೆಲವರ ರಾಜೀನಾಮೆಗೆ ಸೂಚಿಸಿದ ಅಮೆಜಾನ್; ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್

ಉದ್ಯೋಗಿಗಳ ವಜಾ ವಿಚಾರಕ್ಕೆ ಸಂಬಂಧಿಸಿ ಅಮೆಜಾನ್​ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್ ನೀಡಿದ್ದು, ಬೆಂಗಳೂರಿನಲ್ಲಿರುವ ಕಾರ್ಮಿಕ ಉಪ ಆಯುಕ್ತರ ಬಳಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ.

Amazon Layoffs: ಭಾರತದಲ್ಲಿ ಕೆಲವರ ರಾಜೀನಾಮೆಗೆ ಸೂಚಿಸಿದ ಅಮೆಜಾನ್; ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್
ಅಮೆಜಾನ್
Image Credit source: PTI
TV9kannada Web Team

| Edited By: Ganapathi Sharma

Nov 23, 2022 | 2:36 PM

ನವದೆಹಲಿ: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ (Layoffs) ಮುಂದಾಗಿರುವ ಅಮೆಜಾನ್ (Amazon), ಸ್ವಯಂಪ್ರೇರಿತರಾಗಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಭಾರತದಲ್ಲಿ ಹಲವು ಮಂದಿ ಉದ್ಯೋಗಿಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಈ ಮಧ್ಯೆ, ಉದ್ಯೋಗಿಗಳ ವಜಾ ವಿಚಾರಕ್ಕೆ ಸಂಬಂಧಿಸಿ ಕಂಪನಿಗೆ ಕೇಂದ್ರ ಕಾರ್ಮಿಕ ಸಚಿವಾಲಯ (Union Labour Ministry) ಸಮನ್ಸ್ ನೀಡಿದ್ದು, ಬೆಂಗಳೂರಿನಲ್ಲಿರುವ ಕಾರ್ಮಿಕ ಉಪ ಆಯುಕ್ತರ ಬಳಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಕಂಪನಿಯ ಲಾಭದಲ್ಲಿ ಗಣನೀಯ ಕುಸಿತವಾಗಿರುವುದರಿಂದ ಅಮೆಜಾನ್ ಜಾಗತಿಕವಾಗಿ 10 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ.

ಅಮೆಜಾನ್ ಭಾರತದಲ್ಲಿ ಕೆಲವು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ರಾಜೀನಾಮೆಗೆ ಸೂಚಿಸಿದೆ. ಇದಕ್ಕಾಗಿ ಕಂಪನಿಯು ಸ್ವಯಂಪ್ರೇರಿತ ಪ್ರತ್ಯೇಕತೆಯ ಕಾರ್ಯಕ್ರಮ (Voluntary Separation Program) ಹಮ್ಮಿಕೊಂಡಿದ್ದು, ಕೆಲವು ಪರಿಹಾರಗಳನ್ನು ನೀಡುವ ಭರವಸೆ ನೀಡಿದೆ. ಕಂಪನಿಯು ನಿಮ್ಮನ್ನು ವಜಾಗೊಳಿಸುವ ಬದಲು ನೀವಾಗಿಯೇ ರಾಜೀನಾಮೆ ನೀಡಿ ಎಂದು ಅಮೆಜಾನ್ ಭಾರತದ ಕೆಲವು ಉದ್ಯೋಗಿಗಳಿಗೆ ಸೂಚಿಸಿರುವುದಾಗಿ ‘ಬ್ಯುಸಿನೆಸ್​ ಟುಡೇ’ ವರದಿ ಮಾಡಿದೆ.

ಅಮೆಜಾನ್​ನ ಎಲ್​1 ಹಾಗೂ ಎಲ್​7 ಬ್ಯಾಂಡ್​ಗಳ ತಂತ್ರಜ್ಞಾನ ತಂಡದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಪ್ರತ್ಯೇಕತೆಯ ಕಾರ್ಯಕ್ರಮಕ್ಕೆ ಅರ್ಹರೆಂದು ನೋಟಿಸ್ ನೀಡಲಾಗಿದೆ. ನವೆಂಬರ್ 30ರ ಒಳಗೆ ರಾಜೀನಾಮೆ ನೀಡಿದರೆ ಅಂಥ ಉದ್ಯೋಗಿಗಳಿಗೆ ಕೆಲವೊಂದು ಪರಿಹಾರಗಳನ್ನು ನೀಡುವುದಾಗಿ ಕಂಪನಿ ತಿಳಿಸಿದೆ.

ಕಾರ್ಮಿಕ ನಿಯಮ ಉಲ್ಲಂಘನೆ ಆರೋಪ; ಅಮೆಜಾನ್​ಗೆ ಸಮನ್ಸ್

ಈ ಮಧ್ಯೆ, ಕಾರ್ಮಿಕ ನಿಯಮ ಉಲ್ಲಂಘನೆ ಬಗ್ಗೆ ದೂರಗಳು ದಾಖಲಾದ ಕಾರಣ ಅಮೆಜಾನ್​ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸಮನ್ಸ್ ನೀಡಿದೆ. ಸೂಚಿಸಿದ ದಿನಾಂಕದಂದು ಬೆಂಗಳೂರಿನಲ್ಲಿರುವ ಕಾರ್ಮಿಕ ಉಪ ಆಯುಕ್ತರ ಬಳಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

‘ಎಲ್ಲ ಸಂಬಂಧಪಟ್ಟ ದಾಖಲೆಗಳೊಂದಿಗೆ ನೀವು (ಅಮೆಜಾನ್) ವೈಯಕ್ತಿಕವಾಗಿ ಕಾರ್ಮಿಕ ಉಪ ಆಯುಕ್ತರ ಮುಂದೆ ಹಾಜರಾಗಬೇಕು. ಅಥವಾ ಅಧಿಕೃತ ಪ್ರತಿನಿಧಿಯನ್ನು ಕಳುಹಿಸಿಕೊಡಬೇಕು. ಇದನ್ನು ತಪ್ಪಿಸುವಂತಿಲ್ಲ’ ಎಂದು ಸಚಿವಾಲಯ ಮಂಗಳವಾರ ಸಮನ್ಸ್ ನೀಡಿದೆ. ಅಮೆಜಾನ್ ಕಂಪನಿ ಕಾರ್ಮಿಕ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಉದ್ಯೋಗಿಗಳ ಒಕ್ಕೂಟ ಎನ್​ಐಟಿಇಎಸ್​ ದೂರು ನೀಡಿದ ಬೆನ್ನಲ್ಲೇ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ‘ಐಎಎನ್​ಎಸ್’ ವರದಿ ಮಾಡಿದೆ. ಸಿಬ್ಬಂದಿಯನ್ನು ಬಲವಂತವಾಗಿ ಅಮೆಜಾನ್ ವಜಾಗೊಳಿಸುತ್ತಿದೆ ಎಂದು ಎನ್​ಐಟಿಇಎಸ್ ಆರೋಪಿಸಿತ್ತು.

ಹೆಚ್ಚುತ್ತಿರುವ ಉದ್ಯೋಗ ಕಡಿತ

ಜಾಗತಿಕ ಆರ್ಥಿಕ ಅನಿಶ್ಚಿತತೆ, ಕಂಪನಿಗಳ ಲಾಭ, ಆದಾಯದ ಪ್ರಮಾಣದಲ್ಲಿ ಕುಸಿತವಾಗುತ್ತಿರುವ ಕಾರಣ ಅನೇಕ ಬಹುರಾಷ್ಟ್ರೀಯ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿವೆ. ಗೂಗಲ್​ನ ಮಾತೃಸಂಸ್ಥೆ ಅಲ್ಫಾಬೆಟ್ ಸದ್ಯದಲ್ಲೇ 10,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮಂಗಳವಾರವಷ್ಟೇ ವರದಿಯಾಗಿತ್ತು. ಅದಕ್ಕೂ ಮುನ್ನ ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್, ಅಮೆಜಾನ್ ಇತ್ತೀಚೆಗೆ ಉದ್ಯೋಗ ಕಡಿತ ಘೋಷಿಸಿದ್ದವು. ಮೆಟಾ ಇತ್ತೀಚೆಗೆ 11,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಮೈಕ್ರೋಸಾಫ್ಟ್​ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಟ್ವಿಟರ್ 3,500ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಿತ್ತು. ಅಮೆಜಾನ್ ಸಹ 2023ರ ವರೆಗೂ ಉದ್ಯೋಗ ಕಡಿತ ಮುಂದುವರಿಸುವುದಾಗಿ ಇತ್ತೀಚೆಗೆ ಹೇಳಿತ್ತು. ಈ ಮಧ್ಯೆ, ಎಚ್​ಪಿ ಕೂಡ ಮುಂದಿನ ಮೂರು ವರ್ಷಗಳಲ್ಲಿ 6000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

ಇದನ್ನೂ ಓದಿ

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada