Layoffs: ಡೈಲಿಹಂಟ್, ಜೋಶ್ನಿಂದ 150 ಉದ್ಯೋಗಿಗಳ ವಜಾ; ವೇತನ ಕಡಿತ ಘೋಷಣೆ
ಮುಂದಿನ ವರ್ಷ ಬಹಳ ಕಠಿಣವಾಗಿರಲಿದೆ. ಕಂಪನಿಯನ್ನು ಸುಸ್ಥಿರವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರ್ಸೆ ಇನೋವೇಷನ್ ತಿಳಿಸಿದೆ.
ನವದೆಹಲಿ: ಸುದ್ದಿ ಸಂಗ್ರಹಾಕ (Dailyhunt) ಡೈಲಿಹಂಟ್ ಹಾಗೂ ವಿಡಿಯೊ ತಾಣ ಜೋಶ್ (Josh) ಒಡೆತನ ಹೊಂದಿರುವ ವರ್ಸೆ ಇನೋವೇಷನ್ (VerSe Innovation) 150 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದು, ವೇತನ ಕಡಿತ ಮಾಡುವುದಾಗಿ ಘೋಷಿಸಿದೆ. ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚು ವೇತನ ಪಡೆಯುತ್ತಿರುವವರ ಸಂಬಳದಲ್ಲಿ ಶೇಕಡಾ 11ರಷ್ಟು ಕಡಿತ ಮಾಡುವುದಾಗಿ ತಿಳಿಸಿದೆ ಎಂದು ‘ಮನಿ ಕಂಟ್ರೋಲ್’ ವರದಿ ತಿಳಿಸಿದೆ. 150 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದರೊಂದಿಗೆ, ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 5ರಷ್ಟು ಮಂದಿಯನ್ನು ವಜಾಗೊಳಿಸಿದಂತಾಗಿದೆ.
ಕಂಪನಿಯ ಸ್ಥಾಪಕರಾದ ವೀರೇಂದ್ರ ಗುಪ್ತಾ ಹಾಗೂ ಉಮಂಗ್ ಬೇಡಿ ಟೌನ್ಹಾಲ್ ಮೀಟಿಂಗ್ನಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ. ಮುಂದಿನ ವರ್ಷ ಬಹಳ ಕಠಿಣವಾಗಿರಲಿದೆ. ಕಂಪನಿಯನ್ನು ಸುಸ್ಥಿರವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಈ ವಿಚಾರವನ್ನು ಉಮಂಗ್ ಬೇಡಿ ದೃಢಪಡಿಸಿದ್ದು, ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇತರ ಉದ್ಯಮಗಳಂತೆಯೇ ನಾವೂ ಸಹ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಉದ್ಯಮ ಮತ್ತು ನಮ್ಮ ಜನರ ದೀರ್ಘಾವಧಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ವೆಚ್ಚ ನಿಯಂತ್ರಣ ಮತ್ತು ತಂಡಗಳ ಕಾರ್ಯಕ್ಷಮತೆ ಸುಗಮಗೊಳಿಸಲು ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್
ವರ್ಸೆ ಇನೋವೇಷನ್ನ ಡೈಲಿಹಂಟ್, ಪಬ್ಲಿಕ್ ವೈಬ್, ಜೋಶ್ ಸೇವೆಗಳ ಬದ್ಧತೆಯನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಉದ್ಯೋಗ ಕಡಿತ ಆರಂಭಿಸಿದ್ದ ಅಮೆಜಾನ್
ಅಮೆಜಾನ್ ಕೂಡ ಇತ್ತೀಚೆಗೆ ಭಾರತದಲ್ಲಿ ಉದ್ಯೋಗಿಗಳಿಗೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಲು ಸೂಚಿಸಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಕಂಪನಿ ಕಾರ್ಮಿಕ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಕಾರ್ಮಿಕ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಕಂಪನಿಗೆ ಸಚಿವಾಲಯ ಸಮನ್ಸ್ ನೀಡಿತ್ತು. ಆದರೆ, ಸಚಿವಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದ ಅಮೆಜಾನ್ ಪ್ರತಿನಿಧಿ, ಕಂಪನಿಯ ನಡೆಯಮನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಬಲವಂತವಾಗಿ ಯಾರಿಂದಲೂ ರಾಜೀನಾಮೆ ಪಡೆದಿಲ್ಲ, ಯಾರನ್ನೂ ವಜಾಗೊಳಿಸಿಲ್ಲ ಎಂದು ಹೇಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ