ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ಬೆಂಜ್ ಕಾರುಗಳ ಮಾರಾಟ; 20 ಹೊಸ ಮಳಿಗೆ ತೆರೆಯಲು ಕಂಪನಿ ನಿರ್ಧಾರ

|

Updated on: Jan 12, 2025 | 7:59 AM

Mercedes Benz cars sale in India: ಜರ್ಮನಿ ಮೂಲದ ಮರ್ಸಿಡಸ್ ಬೆಂಜ್ ಸಂಸ್ಥೆ 202ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 19,500ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಅದರಲ್ಲೂ ಅದರ ಟಾಪ್ ಎಂಡ್ ಮಾಡಲ್ ಕಾರುಗಳ ಮಾರಾಟದಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ. ಅಮೋಘ ಕಾರು ಮಾರಾಟ ಕಂಡ ಬೆಂಜ್ ಸಂಸ್ಥೆ ಭಾರತದಲ್ಲಿ 20 ಹೊಸ ಸರ್ವಿಸ್ ಮತ್ತು ಡೀಲರ್​ಶಿಪ್ ಔಟ್​ಲೆಟ್​ಗಳನ್ನು ತೆರೆಯಲು ನಿರ್ಧರಿಸಿದೆ.

ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ಬೆಂಜ್ ಕಾರುಗಳ ಮಾರಾಟ; 20 ಹೊಸ ಮಳಿಗೆ ತೆರೆಯಲು ಕಂಪನಿ ನಿರ್ಧಾರ
ಮರ್ಸಿಡೆಸ್ ಬೆಂಜ್
Follow us on

ನವದೆಹಲಿ, ಜನವರಿ 12: ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಜರ್ಮನಿ ಮೂಲದ ಮರ್ಸಿಡೆಸ್ ಬೆಂಜ್ ಭಾರತದಲ್ಲಿ 2024ರಲ್ಲಿ ಭರ್ಜರಿ ಕಾರು ಮಾರಾಟ ಕಂಡಿದೆ. ವರದಿಯೊಂದರ ಪ್ರಕಾರ 2024ರ ಕ್ಯಾಲಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್​ವರೆಗೆ) ಅದರ 19,565 ಕಾರುಗಳು ಮಾರಾಟವಾಗಿವೆ. ಮೂರು ದಶಕಗಳ ಹಿಂದೆ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಮರ್ಸಿಡೆಸ್ ಬೆಂಜ್ ಸಂಸ್ಥೆ ಯಾವ ವರ್ಷವೂ ಇಷ್ಟು ಪ್ರಮಾಣದಲ್ಲಿ ಕಾರು ಮಾರಾಟ ಮಾಡಿದ್ದಿಲ್ಲ. 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ. 12.4ರಷ್ಟು ಹೆಚ್ಚು ಕಾರುಗಳ ಮಾರಾಟವಾಗಿದೆ. 2024ರ ದ್ವಿತೀಯಾರ್ಧದಲ್ಲಿ ಶೇ. 16ರಷ್ಟು ಹೆಚ್ಚು ಕಾರು ಸೇಲ್ ಆಗಿವೆ.

ಲಕ್ಷುರಿ ಕಾರುಗಳನ್ನು ತಯಾರಿಸುವ ಮರ್ಸಿಡೆಸ್ ಬೆಂಜ್ 2024ರಲ್ಲಿ 14 ಹೊಸ ಉತ್ಪನ್ನಗಳನ್ನು ಪರಿಚಯಿಸಿತ್ತು. ಅದರ ಟಾಪ್ ಎಂಡ್ ಮಾಡಲ್​ಗಳು ಕಳೆದ ವರ್ಷ ಅತಿಹೆಚ್ಚು ಮಾರಾಟ ಹೆಚ್ಚಳ ಕಂಡಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಮರ್ಸಿಡೆಜ್ ಬೆಂಜ್​ನ ಟಾಪ್ ಎಂಡ್ ಕಾರುಗಳ ಮಾರಾಟದಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ. ಸೇಲ್ ಆಗಿರುವ ಅದರ ಪ್ರತೀ ನಾಲ್ಕು ಕಾರಲ್ಲಿ ಒಂದು ಟಾಪ್ ಎಂಡ್ ಮಾಡಲ್ ಇರುವುದು ಗಮನಾರ್ಹ.

ಇದನ್ನೂ ಓದಿ: 2024 ರಲ್ಲಿ ಭಾರತದಲ್ಲಿ ಸೇಲ್ ಆಗಿದ್ದು ಬರೋಬ್ಬರಿ 2.61 ಕೋಟಿ ವಾಹನಗಳು: ಯಾವುದೆಲ್ಲ?, ಇಲ್ಲಿದೆ ಲಿಸ್ಟ್

1994ರಿಂದ ಈಚೆಗೆ ಮರ್ಸಿಡೆಜ್ ಬೆಂಜ್ ಭಾರತದಲ್ಲಿ ಮಾರಿರುವ ಕಾರುಗಳ ಸಂಖ್ಯೆ ಎರಡು ಲಕ್ಷ ಗಡಿ ಮುಟ್ಟಿದೆ. ಇದರಲ್ಲಿ ಅರ್ಧದಷ್ಟು ಭಾಗವು ಕಳೆದ 6 ವರ್ಷದಲ್ಲೇ ಸೇಲ್ ಆಗಿದೆ. ಮೊದಲ 50,000 ಕಾರುಗಳನ್ನು ಮಾರಲು ಅದಕ್ಕೆ 20 ವರ್ಷ ಬೇಕಾಗಿತ್ತು. ಮುಂದಿನ 50,000 ವಾಹನಗಳು ಐದು ವರ್ಷದಲ್ಲಿ ಮಾರಾಟವಾಗಿದ್ದವು. ಕಳೆದ ಒಂದು ದಶಕದಲ್ಲಿ ಒಂದೂವರೆ ಲಕ್ಷ ಬೆಂಜ್ ವಾಹನಗಳು ಭಾರತದಲ್ಲಿ ಸೇಲ್ ಆಗಿವೆ.

20 ಹೊಸ ಔಟ್​ಲೆಟ್​ಗಳ ಸ್ಥಾಪನೆಗೆ ಬೆಂಜ್ ನಿರ್ಧಾರ

2024ರಲ್ಲಿ ದಾಖಲೆ ಪ್ರಮಾಣದಲ್ಲಿ ಕಾರು ಮಾರಾಟ ಮಾಡಿದ ಮರ್ಸಿಡೆಸ್ ಬೆಂಜ್, ಭಾರತದಲ್ಲಿ ಈ ವರ್ಷ (2025) 20 ಹೊಸ ಸರ್ವಿಸ್ ಔಟ್​ಲೆಟ್ ಅಥವಾ ಡೀಲರ್​ಶಿಪ್​ಗಳನ್ನು ಸೇರಿಸಲು ಯೋಜಿಸಿದೆ. ಈ ಬಾರಿ ಬಿಸಿನೆಸ್ ವಿಸ್ತರಣೆಗೆ ದೊಡ್ಡ ನಗರ ಬದಲು ಸಣ್ಣ ನಗರಗಳತ್ತ ಕಂಪನಿ ಹೆಚ್ಚು ಆಸಕ್ತಿ ತೋರುತ್ತಿದೆ. ಸಣ್ಣ ನಗರಗಳಲ್ಲಿ ಬಿಸಿನೆಸ್​ಮ್ಯಾನ್​ಗಳು ಐಷಾರಾಮಿ ವಸ್ತುಗಳಿಗೆ ಬೇಡಿಕೆ ಹೊಂದಿರುವುದು ಮರ್ಸಿಡೆಸ್ ಬೆಂಜ್​ನ ಗಮನ ಸೆಳೆದಿದೆ. ಹೀಗಾಗಿ, ಅದರ ಔಟ್​ಲೆಟ್​ಗಳನ್ನು ಸಣ್ಣ ನಗರಗಳಲ್ಲಿ ಆರಂಭಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ದಾಖಲೆಯ ಸೌರವಿದ್ಯುತ್ ಮತ್ತು ವಾಯುವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತ

ಜರ್ಮನಿ ಮೂಲದ ಮರ್ಸಿಡೆಸ್ ಬೆಂಜ್ ಸದ್ಯ ಭಾರತದಲ್ಲಿ 125 ಔಟ್​ಲೆಟ್​ಗಲನ್ನು ಹೊಂದಿದೆ. ನವದೆಹಲಿ ಮತ್ತು ಮುಂಬೈ ಇತ್ಯಾದಿ ದೊಡ್ಡ ನಗರಗಳಲ್ಲಿ ಅದರ ಹೆಚ್ಚಿನ ಸರ್ವಿಸ್ ಸೆಂಟರ್ ಮತ್ತು ಶೋರೂಮ್​ಗಳಿವೆ. ಕಾನಪುರ್, ಪಾಟ್ನಾ ಇತ್ಯಾದಿ 50 ಲಕ್ಷದೊಳಗೆ ಜನಸಂಖ್ಯೆ ಇರುವ ಸಣ್ಣ ನಗರಗಳಲ್ಲಿ ಮಳಿಗೆಗೆಳನ್ನು ತೆರೆಯುವ ಆಲೋಚನೆಯಲ್ಲಿದೆ. ಈ ನಗರಗಳಲ್ಲಿ ಮೊದಲಿಗೆ ಸರ್ವಿಸ್ ಸೆಂಟರ್ ತೆರೆಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ