ನವದೆಹಲಿ, ಅಕ್ಟೋಬರ್ 4: ಪ್ರಖ್ಯಾತ ಮೆಸೇಜಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ನ ಮಾಲಕ ಸಂಸ್ಥೆ ಮೆಟಾ (Meta platforms) ಮತ್ತೊಂದು ಸುತ್ತಿನ ಲೇ ಆಫ್ (layoffs) ನಡೆಸುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಪ್ರಕಾರ ಮೆಟಾದ ವರ್ಚುವಲ್ ರಿಯಾಲಿಟಿ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ತಂಡದಲ್ಲಿ ಈ ಲೇ ಆಫ್ ನಡೆಯಬಹುದು ಎನ್ನಲಾಗಿದೆ. ಮೆಟಾ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಮಾರ್ಕ್ ಜುಕರ್ಬರ್ಗ್ ಮಾಲಕತ್ವದ ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಯಾರಿಸುವತ್ತ ಸಾಕಷ್ಟು ಗಮನ ಮತ್ತು ಸಂಪನ್ಮೂಲ ವ್ಯಯಿಸುತ್ತಿದೆ. ಈ ಉತ್ಪನ್ನಗಳನ್ನು ತಯಾರಿಸುವ ಅದರ ಒಂದು ಘಟಕ ಫೇಸ್ಬುಕ್ ಎಜೈಲ್ ಸಿಲಿಕಾನ್ ಟೀಮ್ (FAST- facebook agile silicon team). ಈ ತಂಡದಲ್ಲಿ 600 ಉದ್ಯೋಗಿಗಳಿದ್ದು, ಅವರಲ್ಲಿ ಹೆಚ್ಚಿನ ಮಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಅಮೆರಿಕದ ಕ್ರಿಪ್ಟಾನ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಇಆರ್ಪಿ ಲಾಜಿಕ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ಸಾಧ್ಯತೆ
ಮೆಟಾದ ಸಾಧನಗಳ ಕ್ಷಮತೆ ಹೆಚ್ಚಿಸಲು ಚಿಪ್ಗಳನ್ನು ಡಿಸೈನ್ ಮಾಡಿಕೊಡುವುದು ಈ ಫಾಸ್ಟ್ ಟೀಮ್ನ ಕೆಲಸವಾಗಿದೆ. ಆದರೆ, ನಿರೀಕ್ಷಿತ ರೀತಿಯಲ್ಲಿ ಉತ್ತಮ ಚಿಪ್ಗಳನ್ನು ತಯಾರಿಸಲು ಈ ತಂಡ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್ಕಾಮ್ ಎಂಬ ಕಂಪನಿಯಿಂದ ಮೆಟಾ ತನಗೆ ಬೇಕಾದ ಚಿಪ್ಗಳನ್ನು ಮಾಡಿಸುತ್ತಿದೆ. ತನ್ನ ಫಾಸ್ಟ್ ಟೀಮ್ನಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ಪನ್ನ ಬರದೇ ಇರುವುದು ಮೆಟಾವನ್ನು ಒತ್ತಡಕ್ಕೆ ಸಿಲುಕಿಸಿದೆ. ಇತ್ತೀಚೆಗಷ್ಟೇ ಈ ವಿಭಾಗಕ್ಕೆ ಹೊಸ ಎಕ್ಸಿಕ್ಯೂಟಿವ್ ಅವರನ್ನು ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ: ಐಟಿ ಉದ್ಯೋಗಿಗಳ ವರ್ಕ್ ಫ್ರಂ ಹೋಮ್ ಸವಲತ್ತು ಪೂರ್ಣ ನಿಲ್ಲುತ್ತಾ? ಕಚೇರಿ ಹೋಗಿ ಕೆಲಸ ಮಾಡುವುದು ಕಡ್ಡಾಯ?
ಮೆಟಾ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ವರ್ಚುವಲ್ ರಿಯಾಲಿಟಿ (VR), ಆಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮಾಮೂಲಿಯ ಕನ್ನಡಕ (ಸನ್ ಗ್ಲಾಸ್) ರೀತಿಯ ಸರಳ ವಿನ್ಯಾಸ ಹೊಂದಿರುವ ಎಆರ್ ಗ್ಲಾಸ್ಗಳನ್ನು ಮೆಟಾ ಅಭಿವೃದ್ಧಿಪಡಿಸುತ್ತಿದೆ. ಸ್ಮಾರ್ಟ್ವಾಚ್ಗಳ ಜೊತೆ ಬರುವ ಎಆರ್ ಗ್ಲಾಸ್ಗಳು ಮುಂದಿನ ವರ್ಷ ಸಿದ್ಧಗೊಳ್ಳುವ ನಿರೀಕ್ಷೆ ಇದ್ದು, ಒಂದೆರಡು ವರ್ಷದಲ್ಲಿ ಮಾರುಕಟ್ಟೆಗೆ ಅಡಿ ಇಡುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ