World’s Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್

|

Updated on: Jan 12, 2024 | 10:50 AM

Microsoft: ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳ ಪಟ್ಟಿಯಲ್ಲಿ ಆ್ಯಪಲ್ ಅನ್ನು ಮೈಕ್ರೋಸಾಫ್ಟ್ ಸಂಕ್ಷಿಪ್ತ ಅವಧಿಗೆ ಹಿಂದಿಕ್ಕಿದೆ. ಜನವರಿ 11ರಂದು ಆ್ಯಪಲ್ ಷೇರುಸಂಪತ್ತು 2.887 ಟ್ರಿಲಿಯನ್ ಡಾಲರ್​ಗೆ ಇಳಿದಿದ್ದರೆ, ಮೈಕ್ರೋಸಾಫ್ಟ್ ಷೇರುಸಂಪತ್ತು 2.888 ಟ್ರಿಲಿಯನ್ ಡಾಲರ್​ಗೆ ಹೆಚ್ಚಿತ್ತು. ಚೀನಾದಲ್ಲಿ ಆಗಿರುವ ವ್ಯಾವಹಾರಿಕ ಹಿನ್ನಡೆ ಮತ್ತಿತರ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಆ್ಯಪಲ್ ಷೇರುಸಂಪತ್ತು ಕಡಿಮೆ ಆಗುತ್ತಾ ಬಂದಿದೆ.

Worlds Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
Follow us on

ನವದೆಹಲಿ, ಜನವರಿ 12: ಟೆಕ್ ಜಗತ್ತಿನಲ್ಲಿ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳ ನಡುವಿನ ರೇಸ್ ದಶಕಗಳಷ್ಟು ಸುದೀರ್ಘದ್ದು. ವಿಶ್ವದ ಕಂಪ್ಯೂಟರ್ ಜಗತ್ತಿನ ಬಹುಪಾಲು ಪ್ರಾಬಲ್ಯ ಇವೆರಡು ಕಂಪನಿಗಳದ್ದು. ಪರಸ್ಪರ ಮೀರಿಸಲು ಇವೆರಡು ನಡೆಸುವ ಪೈಪೋಟಿ ದಂತಕಥೆಯ ರೀತಿಯದ್ದು. ಸತತವಾಗಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ (Most valuable company) ಎನಿಸಿರುವ ಆ್ಯಪಲ್ ಸಂಸ್ಥೆಯನ್ನು ಹಿಂದಿಕ್ಕಲು ಮೈಕ್ರೋಸಾಫ್ಟ್ ಮಾಡುವ ಪ್ರಯತ್ನ ಕೆಲವೊಮ್ಮೆ ಯಶಸ್ವಿಯಾಗಿದೆ. 2021ರ ಬಳಿಕ ಮೊದಲ ಬಾರಿಗೆ ಮೈಕ್ರೋಸಾಫ್ಟ್ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯ ಪಟ್ಟ ಗಿಟ್ಟಿಸಿದೆ.

ಒಟ್ಟಾರೆ ಷೇರುಸಂಪತ್ತಿನ (Market capitalization) ಆಧಾರದ ಮೇಲೆ ಒಂದು ಕಂಪನಿಯ ಮೌಲ್ಯ ನಿರ್ಧರಿಸಲಾಗುತ್ತದೆ. ಅತಿಮೌಲ್ಯಯುತ ಕಂಪನಿ ಎಂದರೆ ಅತಿಹೆಚ್ಚು ಷೇರು ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲೈಸೇಶನ್ ಇರುವ ಕಂಪನಿ. ನಿನ್ನೆ ಗುರುವಾರ (ಜ. 11) ಮೈಕ್ರೋಸಾಫ್ಟ್​ನ ಷೇರುಸಂಪತ್ತು ಶೇ. 1.5ರಷ್ಟು ಹೆಚ್ಚಿದೆ. ಅದೇ ವೇಳೆ, ಆ್ಯಪಲ್ ಸಂಸ್ಥೆಯ ಷೇರುಸಂಪತ್ತು 0.3 ಪ್ರತಿಶತದಷ್ಟು ಕಡಿಮೆ ಆಗಿದೆ. ಈ ಮೂಲಕ ಸಂಕ್ಷಿಪ್ತ ಅವಧಿಗೆ ಆ್ಯಪಲ್ ಸಂಸ್ಥೆಯನ್ನು ಹಿಂದಿಕ್ಕಿ ಮೈಕ್ರೋಸಾಫ್ಟ್ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಗೌರವಕ್ಕೆ ಪಾತ್ರವಾಯಿತು.

ಇದನ್ನೂ ಓದಿ: ಭಾರತದ ಈಗಿನ ಪಠ್ಯಕ್ರಮದಿಂದ ಚಿಪ್ ಎಂಜಿನಿಯರ್​ಗಳ ನಿರ್ಮಾಣ ಸಾಧ್ಯವಿಲ್ಲವಾ? ಮೈಕ್ರೋನ್ ಸಿಇಒ ಬಿಚ್ಚಿಟ್ಟಿದ್ದಾರೆ ವಾಸ್ತವ ಸ್ಥಿತಿ

ಈ ಗೌರವ ಸಂಕ್ಷಿಪ್ತ ಅವಧಿಗೆ ಮಾತ್ರ. 2.888 ಟ್ರಿಲಿಯನ್ ಡಾಲರ್​ಗೆ ಏರಿದ್ದ ಮೈಕ್ರೋಸಾಫ್ಟ್ ಷೇರುಸಂಪತ್ತು 2.858 ಟ್ರಿಲಿಯನ್ ಡಾಲರ್​ಗೆ ಇಳಿದು ಮತ್ತೆ ಎರಡನೇ ಸ್ಥಾನಕ್ಕೆ ಬಂದಿತು. ಆ್ಯಪಲ್ ಸಂಸ್ಥೆಯ ಷೇರುಸಂಪತ್ತು 2.886ರಷ್ಟಿದ್ದು ಮತ್ತೆ ಅಗ್ರಸ್ಥಾನ ಪಡೆಯಿತು.

ಆ್ಯಪಲ್ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಹಿನ್ನಡೆ ಹೊಂದಿದೆ. ಈ ತಿಂಗಳು ಮೊದಲ 11 ದಿನದಲ್ಲಿ ಆ್ಯಪಲ್ ಷೇರುಮೌಲ್ಯ ಶೇ. 3.3ರಷ್ಟು ಕಡಿಮೆ ಆಗಿದೆ. ಚೀನಾದಲ್ಲಿ ಅದರ ಬಿಸಿನೆಸ್ ಇಳಿಮುಖವಾಗಿರುವುದು, ಚೀನಾದ ಹುವಾವೇ ಪ್ರಾಬಲ್ಯ ಹೆಚ್ಚಿರುವುದು ಹಾಗೂ ಅಮೆರಿಕ ಚೀನಾ ನಡುವಿನ ಸಂಬಂಧ ಹಳಸುತ್ತಿರುವುದು ಇವೆಲ್ಲವೂ ಆ್ಯಪಲ್ ಸಂಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿರಬಹುದು. ಅಂತೆಯೇ ಹಲವು ಬ್ರೋಕರೇಜ್ ಕಂಪನಿಗಳು ಆ್ಯಪಲ್​ಗೆ ರೇಟಿಂಗ್ ಡೌನ್​ಗ್ರೇಡ್ ಮಾಡಿವೆ. ಪರಿಣಾಮವಾಗಿ ಆ್ಯಪಲ್ ಷೇರುಬೆಲೆ ಇಳಿಮುಖವಾಗುತ್ತಿರಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ