ವಾಷಿಂಗ್ಟನ್: ಪೋಷಕರ ಅನುಮತಿ ಪಡೆಯದೆಯೇ ಮಕ್ಕಳಿಂದ ವೈಯಕ್ತಿಕ ಮಾಹಿತಿ ಪಡೆದ ಆರೋಪದ ಪ್ರಕರಣವೊಂದರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಮೈಕ್ರೋಸಾಫ್ಟ್ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ) ಮೊತ್ತದಷ್ಟು ದಂಡ ಕಟ್ಟಬೇಕು ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಹೇಳಿದೆ. ಈ ಬಗ್ಗೆ ಮೈಕ್ರೋಸಾಫ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.
ಮೈಕ್ರೋಸಾಫ್ಟ್ನ ಜನಪ್ರಿಯ ಎಕ್ಸ್ಬಾಕ್ಸ್ ಗೇಮಿಂಗ್ ಸಿಸ್ಟಂ ಅನ್ನು ಬಳಸುವವರು ಸೈನ್ ಅಪ್ ಆಗಬೇಕು. ಈ ವೇಳೆ ಅವರಿಂದ ವೈಯಕ್ತಿಕ ಮಾಹಿತಿಯನ್ನು ಮೈಕ್ರೋಸಾಫ್ಟ್ ಸಂಗ್ರಹಿಸಿದೆ. ಎಕ್ಸ್ಬಾಕ್ಸ್ ಬಳಸುವವರು ಅಪ್ರಾಪ್ತರಾಗಿದ್ದರೆ ವೈಯಕ್ತಿಕ ಮಾಹಿತಿ ಪಡೆಯಲು ಅವರ ಪೋಷಕರ ಅನುಮತಿ ಪಡೆಯಬೇಕಾಗುತ್ತದೆ, ಅಥವಾ ಪೋಷಕರಿಗೆ ನೋಟಿಫಿಕೇಶನ್ ನೀಡಬೇಕಾಗುತ್ತದೆ. ಮೈಕ್ರೋಸಾಫ್ಟ್ ಇದ್ಯಾವುದನ್ನೂ ಮಾಡಿಲ್ಲ. ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಅನುಮತಿ ಇಲ್ಲದೇ ಪಡೆದದ್ದೂ ಅಲ್ಲದೇ ಆ ಮಾಹಿತಿಯನ್ನು ಹಾಗೇ ಉಳಿಸಿಟ್ಟುಕೊಂಡಿದೆ. ಇದು ಅಮೆರಿಕದ ಮಕ್ಕಳ ಆನ್ಲೈನ್ ಖಾಸಗಿತನ ರಕ್ಷಣೆ ಕಾಯ್ದೆಯ (COPPA) ಉಲ್ಲಂಘನೆ ಎಂದು ಫೆಡರಲ್ ಟ್ರೇಡ್ ಕಮಿಷನ್ ಬಗೆದಿದೆ.
ಇದನ್ನೂ ಓದಿ: BBC: 40 ಕೋಟಿ ಆದಾಯ ಮುಚ್ಚಿಟ್ಟಿದ್ದು ಹೌದೆಂದು ತಪ್ಪೊಪ್ಪಿಕೊಂಡ ಬಿಬಿಸಿ; ಪರಿಷ್ಕೃತ ಐಟಿಆರ್ ಸಲ್ಲಿಸುವಂತೆ ಐಟಿ ಇಲಾಖೆ ಸೂಚನೆ
ಇಲ್ಲಿ ಮಕ್ಕಳೆಂದರೆ 13 ವರ್ಷದೊಳಗಿನ ವಯಸ್ಸಿನವರು. ಮಕ್ಕಳ ವೈಯಕ್ತಿಕ ಮಾಹಿತಿಯಲ್ಲಿ ಅವರ ಗೇಮಿಂಗ್ ಅವತಾರ್ಗಳು, ಬಯೋಮೆಟ್ರಿಕ್ ಡಾಟಾ, ಆರೋಗ್ಯ ಮಾಹಿತಿ ಇತ್ಯಾದಿಗಳೂ ಒಳಗೊಂಡಿರುತ್ತವೆ. 2015ರಿಂದ 2020ರ ಅವಧಿಯಲ್ಲಿ ಎಕ್ಸ್ಬಾಕ್ಸ್ ಗೇಮಿಂಗ್ ಕನ್ಸೋಲ್ನಲ್ಲಿ ಖಾತೆ ರಚಿಸುವಾಗ ಮಕ್ಕಳಿಂದ ಮೈಕ್ರೋಸಾಫ್ಟ್ ಈ ಡಾಟಾಗಳನ್ನು ಸಂಗ್ರಹಿಸಿಟ್ಟುಕೊಂಡಿತ್ತು ಎಂಬುದು ಆರೋಪ.
ಮೈಕ್ರೋಸಾಫ್ಟ್ನ ಎಕ್ಸ್ಬಾಕ್ಸ್ ಗೇಮಿಂಗ್ ಕನ್ಸೋಲ್ ಸಿಸ್ಟಂ ಅನ್ನು ಬಳಸುವ ಮಕ್ಕಳ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಲು ಮೈಕ್ರೋಸಾಫ್ಟ್ ಕ್ರಮ ಕೈಗೊಳ್ಳಬೇಕೆಂದು ಎಫ್ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ. ಮಕ್ಕಳ ಡಾಟಾವನ್ನು ಮೈಕ್ರೋಸಾಫ್ಟ್ ನೀಡುವ ಥರ್ಡ್ ಪಾರ್ಟಿ ಗೇಮಿಂಗ್ ಪಬ್ಲಿಶರ್ಗಳಿಗೂ ಮಕ್ಕಳ ಆನ್ಲೈನ್ ಪ್ರೈವೆಸಿ ಪ್ರೊಟೆಕ್ಷನ್ ಕಾಯ್ದೆ ಅನ್ವಯ ಆಗುತ್ತದೆ. ಎಕ್ಸ್ಬಾಕ್ಸ್ನಲ್ಲಿ ಪೋಷಕರು ತಮ್ಮ ಮಕ್ಕಳ ಖಾಸಗಿತನವನ್ನು ರಕ್ಷಿಸುವುದು ಸುಲಭವಾಗುತ್ತದೆ. ಮಕ್ಕಳಿಂದ ಮೈಕ್ರೋಸಾಫ್ಟ್ ಕಲೆಹಾಕುವ ಮಾಹಿತಿ ಸೀಮಿತವಾಗಿರುತ್ತದೆ ಎಂದು ಎಫ್ಟಿಸಿಯ ಬ್ಯೂರೋ ಆಫ್ ಕನ್ಸೂಮರ್ ಪ್ರೊಟೆಕ್ಷನ್ ವಿಭಾಗದ ಡೈರೆಕ್ಟರ್ ಸ್ಯಾಮುಯಲ್ ಲೆವಿನೆ ಹೇಳಿದ್ದಾರೆ.
ಇದನ್ನೂ ಓದಿ: Byju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್
ಅಮೆರಿಕದ ಈ ಕೋಪ್ಪ ಕಾಯ್ದೆ ಪ್ರಕಾರ 13 ವರ್ಷದೊಳಗಿನ ಮಕ್ಕಳಿಗೆಂದು ರೂಪಿಸಲಾದ ಆನ್ಲೈನ್ ಸರ್ವಿಸ್ ಮತ್ತು ವೆಬ್ಸೈಟ್ಗಳು ಈ ಮಕ್ಕಳಿಂದ ವೈಯಕ್ತಿಕ ಮಾಹಿತಿ ಕಲೆಹಾಕುವ ಮುನ್ನ ಪೋಷಕರಿಗೆ ಅಲರ್ಟ್ ನೀಡಿ ಅವರಿಂದ ಅನುಮತಿ ಪಡೆಯಬೇಕು. ಆ ನಂತರವಷ್ಟೇ ಮಕ್ಕಳ ಮಾಹಿತಿ ಪಡೆದು ಅದನ್ನು ಬಳಕೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ