Greatness: ಬಹುತೇಕ ಸಂಪತ್ತಿನ ದಾನಕ್ಕೆ ಬದ್ಧ; ಅತ್ಯಂತ ಕಿರಿಯ ವಯಸ್ಸಿನ ದಾನಶೂರ ನಿಖಿಲ್ ಕಾಮತ್; ಗಿವಿಂಗ್ ಪ್ಲೆಡ್ಜ್ ಸೇರಿದ ಶಿವಮೊಗ್ಗ ಹುಡುಗ
Nikhil Kamath @ The Giving Pledge: ವಾರನ್ ಬಫೆಟ್, ಬಿಲ್ ಗೇಟ್ಸ್ ದಂಪತಿ ಅವರುಗಳು ಸೇರಿಕೊಂಡು 2010ರಲ್ಲಿ ದಿ ಗಿವಿಂಗ್ ಪ್ಲೆಡ್ಜ್ ಎಂಬ ಸಮುದಾಯ ಆರಂಭಿಸಿದ್ದರು. ಎಲಾನ್ ಮಸ್ಕ್ ಅವರಂಥವರು ಈ ಫೌಂಡೇಶನ್ನ ಸದಸ್ಯರಾಗಿದ್ದಾರೆ. ಅದಕ್ಕೆ ಈಗ ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಸೇರ್ಪಡೆಗೊಂಡಿದ್ದಾರೆ.
ನವದೆಹಲಿ: ಉದ್ಯಮಿಗಳೆಂದರೆ ಲಕ್ಷಲಕ್ಷ ಕೋಟಿ ಹಣ ಸಂಪಾದನೆಯತ್ತಲೇ ಗುರಿ ಇಟ್ಟುಕೊಂಡಿರುವ ವ್ಯವಹಾರಸ್ಥರು ಎಂದೇ ಅನಿಸುವುದುಂಟು. ಆದರೆ, ತಾವು ಮಾಡಿರುವ ಸಂಪಾದನೆಯಲ್ಲಿ ಹೆಚ್ಚಿನ ಭಾಗವನ್ನು ದಾನ ಧರ್ಮಕ್ಕೆ (Philanthropy) ನೀಡುವ ಅನೇಕರ ನಿದರ್ಶನಗಳು ಭಾರತದ ಇತಿಹಾಸ ಮತ್ತು ಪುರಾಣಗಳಲ್ಲಿ ಇವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಶ್ರೀಮಂತರು ಈ ಸಮಾಜದಿಂದ ತಾವು ಸಂಪಾದಿಸಿದ ಹಣವನ್ನು ಅದೇ ಸಮಾಜಕ್ಕೆ ವಾಪಸ್ ಕೊಡುವುದು ಪ್ರಕೃತಿಧರ್ಮ. ಹಣದ ಹುಚ್ಚುಹೊಳೆ ಹರಿಯುತ್ತಿರುವ ಇವತ್ತಿನ ಕಾಲದಲ್ಲೂ ಬಹಳ ಮಂದಿ ದಾನ ಧರ್ಮಗಳನ್ನು ಮಾಡುವುದಿದೆ. ಎಡಗೈಯಿಂದ ಮಾಡಿದ ದಾನ ಬಲಗೈಗೆ ಗೊತ್ತಾಗಬಾರದು ಎನ್ನುವಂತಹ ಪುನೀತ್ ರಾಜಕುಮಾರ್ ಅವರಂತಹ ದಾನವೀರರೂ ಇದ್ದಾರೆ. ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಸಮಾಜಕ್ಕೆ ದಾನವಾಗಿ ಅರ್ಪಿಸಲು ಪ್ರೇರೇಪಿಸುವ ಮತ್ತು ಪಣ ತೊಡುವ ಒಂದು ವೇದಿಕೆ 2010ರಲ್ಲಿ ಸೃಷ್ಟಿಯಾಯಿತು. ವಾರನ್ ಬಫೆಟ್, ಬಿಲ್ ಗೇಟ್ಸ್ ದಂಪತಿ ಅವರುಗಳು ಸೇರಿಕೊಂಡು 2010ರಲ್ಲಿ ದಿ ಗಿವಿಂಗ್ ಪ್ಲೆಡ್ಜ್ (The Giving Pledge) ಎಂಬ ಸಮುದಾಯ ಆರಂಭಿಸಿದ್ದರು. ಎಲಾನ್ ಮಸ್ಕ್ ಅವರಂಥವರು ಈ ಫೌಂಡೇಶನ್ನ ಸದಸ್ಯರಾಗಿದ್ದಾರೆ. ಅದಕ್ಕೆ ಈಗ ಝೀರೋಧ ಸಂಸ್ಥೆಯ ಸಹ–ಸಂಸ್ಥಾಪಕ ನಿಖಿಲ್ ಕಾಮತ್ ಸೇರ್ಪಡೆಗೊಂಡಿದ್ದಾರೆ.
ದಿ ಗಿವಿಂಗ್ ಪ್ಲೆಡ್ಜ್ ಎಂದರೆ ಕೊಡುವ ಶಪಥ, ಅಥವಾ ದಾನದ ಶಪಥ ಎಂದರ್ಥ. ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ದಾನಕ್ಕಾಗಿ ಕೊಡುತ್ತೇವೆಂದು ವಿಶ್ವದ ನೂರಾರು ಮಂದಿ ಶ್ರೀಮಂತರು ಪಣತೊಟ್ಟು ಇಲ್ಲಿ ಸದಸ್ಯರಾಗಿದ್ದಾರೆ. ಭಾರತದಲ್ಲೂ ಅಜೀಮ್ ಪ್ರೇಮ್ಜಿ, ಕಿರಣ್ ಮಜುಂದಾರ್ ಶಾ, ಬಿಆರ್ ಶೆಟ್ಟಿ, ಅನಿಲ್ ಅಗರ್ವಾಲ್ ಮೊದಲಾದ ಉದ್ಯಮಿಗಳು ಮತ್ತು ಶ್ರೀಮಂತರು ಗಿವಿಂಗ್ ಪ್ಲೆಡ್ಜ್ ಸದಸ್ಯರಾಗಿದ್ದಾರೆ. ಆದರೆ, 35 ವರ್ಷದ ಶಿವಮೊಗ್ಗ ಯುವಕ ನಿಖಿಲ್ ಕಾಮತ್ ಈ ಸಮುದಾಯದ ಸದಸ್ಯರಾಗಿರುವ ಅತ್ಯಂತ ಕಿರಿಯ ವಯಸ್ಸಿನ ಭಾರತೀಯ ಎನಿಸಿದ್ದಾರೆ.
ಇದನ್ನೂ ಓದಿ: Microsoft Penalty: ಪೋಷಕರ ಅನುಮತಿ ಇಲ್ಲದೇ ಮಕ್ಕಳಿಂದ ಖಾಸಗಿ ಮಾಹಿತಿ ಪಡೆದ ಆರೋಪ; ಮೈಕ್ರೋಸಾಫ್ಟ್ಗೆ ಬಿತ್ತು ದಂಡ
‘ದಿ ಗಿವಿಂಗ್ ಪ್ಲೆಡ್ಜ್ಗೆ ಸೇರುವ ಮೂಲಕ ಸಮಾಜಕ್ಕೆ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಜಗತ್ತಿನ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲು ಬದ್ಧನಾಗಿದ್ದೇನೆ. ಸಮಸಮಾಜ ನಿರ್ಮಿಸಬೇಕೆನ್ನುವ ಈ ಫೌಂಡೇಶನ್ನ ಗುರಿ ಹಾಗು ನನ್ನ ಮೌಲ್ಯ ಮತ್ತು ಆಶಯ ಒಂದೇ ಆಗಿದೆ’ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ನಿಖಿಲ್ ಕಾಮತ್ ಅವರ ಝೀರೋಧ ಕಂಪನಿ ಷೇರುಪೇಟೆ ಉದ್ಯಮಕ್ಕೆ ಸೇರಿದ್ದಾಗಿದೆ. ಹೂಡಿಕೆದಾರರಿಗೆ ಸಲಹೆ ಕೊಡುವ ಮತ್ತು ಹೂಡಿಕೆ ಸೇವೆ ನೀಡುವ ಕಂಪನಿ ಇದು. ನಿಖಿಲ್ ಕಾಮತ್ ಹಾಗೂ ಅವರ ಸಹೋದರ ಇಬ್ಬರೂ ಸೇರಿ 2010ರಲ್ಲಿ ಕಟ್ಟಿದ್ದು ಝೀರೋಧ.
ಇನ್ನು, ದಿ ಗಿವಿಂಗ್ ಪ್ಲೆಡ್ಜ್ ಫೌಂಡೇಶನ್ನಲ್ಲಿ 29 ದೇಶಗಳಿಂದ 240ಕ್ಕೂ ಹೆಚ್ಚು ಮಂದಿ ಸಿರಿವಂತರು ಸದಸ್ಯರಾಗಿದ್ದಾರೆ. ಇದರಲ್ಲಿ ಸದಸ್ಯರಾಗಿರುವ ಭಾರತೀಯರು ಮತ್ತು ಭಾರತೀಯ ಮೂಲದ ಕೆಲವರು ಈ ಕೆಳಕಂಡಂತಿದ್ದಾರೆ…
ಇದನ್ನೂ ಓದಿ: Byju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್
- ಅನಿಲ್ ಅಗರ್ವಾಲ್
- ಮಾಲಾ ಗಾಂವ್ಕರ್
- ರೋಹಿಣಿ, ನಂದನ್ ನಿಲೇಕಣಿ
- ಅಜೀಮ್ ಪ್ರೇಮ್ಜಿ
- ಡಾ. ಬಿಆರ್ ಶೆಟ್ಟಿ
- ಕಿರಣ್ ಮಜುಮ್ದಾರ್ ಶಾ
- ಮನೋಜ್ ಭಾರ್ಗವ
- ವಿನೋದ್, ನೀರು ಖೋಸ್ಲಾ
- ಡಾ. ರೋಮೇಶ್ ವಾಧ್ವಾನಿ
- ನಿಖಿಲ್ ಕಾಮತ್
ಇವರ ಪೈಕಿ ರೋಹಿಣಿ ನಿಲೇಕಣಿ, ನಂದನ್ ನಿಲೇಕಣಿ, ಅಜೀಮ್ ಪ್ರೇಮ್ಜಿ, ಕಿರಣ್ ಮಜುಂದಾರ್ ಶಾ, ಡಾ. ಬಿಆರ್ ಶೆಟ್ಟಿ ಮತ್ತು ನಿಖಿಲ್ ಕಾಮತ್ ಅವರು ಮಾತ್ರ ಭಾರತೀಯರು. ಉಳಿದವರು ಭಾರತ ಮೂಲದವರು ಮಾತ್ರ. ಇನ್ನು, ಭಾರತೀಯರ ಪೈಕಿ ಎಲ್ಲರೂ ಕರ್ನಾಟಕ ಮೂಲದವರೇ ಎಂಬುದು ಹೆಮ್ಮೆಯ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ