
ನವದೆಹಲಿ, ಅಕ್ಟೋಬರ್ 6: ಸರ್ಕಾರಗಳ ನೀತಿಗಳ ಬಗ್ಗೆ ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಮಾಜಿ ಇನ್ಫೋಸಿಸ್ ಸಿಎಫ್ಒ ಮೋಹನದಾಸ್ ಪೈ ಅವರು ಇತ್ತೀಚಿನ ಪೋಡ್ಕ್ಯಾಸ್ಟ್ವೊಂದರಲ್ಲಿ ಭಾರತದ ಆರ್ಥಿಕ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ್ವಾರ್ತಾ (Bharatvaarta) ಎನ್ನುವ ಯೂಟ್ಯೂಬ್ ವಾಹಿನಿಯ ಪೋಡ್ಕ್ಯಾಸ್ಟ್ನಲ್ಲಿ ಮಾತನಾಡುತ್ತಿದ್ದ ಮೋಹನ್ ದಾಸ್ ಪೈ (Mohandas Pai), ಸರ್ಕಾರಿ ಸಂಸ್ಥೆಗಳನ್ನು ಸಲಹಲು ಸಾಕಷ್ಟು ಹಣ ವ್ಯಯಿಸುವ ನೀತಿ ವಿರುದ್ಧ ತಗಾದೆ ತೆಗೆದಿದ್ದಾರೆ.
ತೆರಿಗೆ ಪಾವತಿದಾರರ ಹಣವನ್ನು ಸರ್ಕಾರೀ ಉದ್ದಿಮೆಗಳಿಗೆ ನೀಡಲಾಗುತ್ತಿದೆ. ಈ ರೀತಿ ತೆರಿಗೆ ಹಣ ಪೋಲು ಮಾಡುತ್ತಿರುವ ಏಕೈಕ ದೇಶ ಎಂದರೆ ಅದು ಭಾರತವೇ ಎಂದು ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಅಮೆರಿಕದ ಮಾದರಿ ಜೊತೆಗೆ ಹೋಲಿಕೆ ಮಾಡಿದ್ದಾರೆ.
‘ತೆರಿಗೆ ಪಾವತಿದಾರರೊಂದಿಗೆ ಸ್ಪರ್ಧೆಯೊಡ್ಡುವಂತೆ ಅವರ ಹಣವನ್ನು ಬಳಸುವುದಿಲ್ಲ. ತೆರಿಗೆ ಪಾವತಿದಾರರ ಹಣವನ್ನು ಬ್ಲ್ಯೂ ಸ್ಕೈ ಟೆಕ್ನಾಲಜಿಗಳನ್ನು ಅಭಿವೃದ್ಧಿಪಡಿಸಲು ಬಳಸುತ್ತೇವೆ ಎಂದು ಅಮೆರಿಕದವರು ನನಗೆ ಹೇಳಿದ್ದರು. ಆದರೆ, ಭಾರತದಲ್ಲಿ ಈ ರೀತಿಯ ಫಂಡಿಂಗ್ ಬಹಳ ನಗಣ್ಯವಾಗಿದೆ’ ಎಂದು ಅವರು ಬೇಸರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು
‘ಭಾರತದಲ್ಲಿ ಇನ್ನೋವೇಶನ್ಗೆ ಎಷ್ಟು ವೆಚ್ಚ ಮಾಡಲಾಗುತ್ತಿದೆ? ಬಹಳ ಅತ್ಯಲ್ಪ. ಹೆಚಚಿನ ಫಂಡಿಂಗ್ಗಳು ಡಿಆರ್ಡಿಒ, ಎನ್ಎಎಲ್ನಂತಹ ಸರ್ಕಾರಿ ಲ್ಯಾಬ್ಗಳಿಗೆ ಹೋಗುತ್ತದೆ. ಇವುಗಳ ಕಾರ್ಯಕ್ಷಮತೆ ಬಹಳ ಕಡಿಮೆ’ ಎಂದು ಮೋಹನ್ ದಾಸ್ ಪೈ ಜರಿದಿದ್ದಾರೆ.
ಭಾರತ್ವಾರ್ತ ಪೋಡ್ಕ್ಯಾಸ್ಟ್ನಲ್ಲಿ ಮೋಹನದಾಸ್ ಪೈ
‘20 ವರ್ಷದಲ್ಲಿ ನಮಗೆ ಒಂದು ಜೆಟ್ ಎಂಜಿನ್ ತಯಾರಿಸಲು ಆಗಲಿಲ್ಲ. ಅತ್ತ ಚೀನಾ ದೇಶವು ಬೋಯಿಂಗ್ ಜೊತೆ ಸ್ಪರ್ಧಿಸುತ್ತಿದೆ. ಟಾಟಾ ಮೋಟಾರ್ಸ್ಗೋ ಎಲ್ ಅಂಡ್ ಟಿಗೋ ಹಣ ಕೊಟ್ಟಿದ್ದರೆ ಜೆಟ್ ಎಂಜಿನ್ ಅನ್ನು ನಿರ್ಮಿಸುತ್ತಿದ್ದರೇನೋ’ ಎಂದು ಮಾಜಿ ಇನ್ಫೋಸಿಸ್ ಸಿಎಫ್ಒ ಹೇಳಿದ್ದಾರೆ.
ಇದನ್ನೂ ಓದಿ: ಆರ್ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್ಸಿಇಪಿ?
‘ನಾನೇನು ಸರ್ಕಾರಿ ಸಂಸ್ಥೆಗಳ ವಿರೋಧಿಯಲ್ಲ. ಅವು ಚೆನ್ನಾಗಿ ಬೆಳೆಯಬೇಕೆಂದು ಬಯಸುತ್ತೇನೆ. ಆದರೆ, ಅವುಗಳನ್ನು ಮಾತ್ರವೇ ಪೋಷಿಸುವುದು ತರವಲ್ಲ. ಈ ದೇಶವು ಖಾಸಗಿ ಉದ್ದಿಮೆಗಳೂ ಒಳಗೊಂಡಂತೆ ನಮಗೆಲ್ಲರಿಗೂ ಸೇರಿದ್ದು’ ಎಂದಿದ್ದಾರೆ ಮೋಹನದಾಸ್ ಪೈ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Mon, 6 October 25