AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ನಿಧನದ ನಂತರ ಟಾಟಾ ಗ್ರೂಪ್​ನಲ್ಲಿ ಒಡಕು; 30 ಲಕ್ಷ ಕೋಟಿ ಉದ್ಯಮ ಸಾಮ್ರಾಜ್ಯದ ಭವಿಷ್ಯದ ಕಥೆ?

Rift in Tata Trusts and Tata Sons: 30 ಲಕ್ಷ ಕೋಟಿ ರೂಗೂ ಅಧಿಕ ಮಾರುಕಟ್ಟೆ ಸಂಪತ್ತನ್ನು ಹೊಂದಿರುವ ಟಾಟಾ ಕಂಪನಿಗಳ ಉದ್ಯಮ ಸಾಮ್ರಾಜ್ಯದಲ್ಲಿ ಒಡಕು ಸೃಷ್ಟಿಯಾಗಿದೆ. ರತನ್ ಟಾಟಾ 2024ರಲ್ಲಿ ನಿಧನರಾದ ಬಳಿಕ ಈ ಅದ್ಭುತ ಸಂಸ್ಥೆಯೊಳಗೆ ಬಿರುಕು ಮೂಡುತ್ತಿದೆ. ಟಾಟಾ ಟ್ರಸ್ಟ್ಸ್​ಮ ಟ್ರಸ್ಟೀಗಳ ಒಂದು ಗುಂಪಿಗೆ ಟಾಟಾ ಸನ್ಸ್​ನಲ್ಲಿ ನಡೆಯುತ್ತಿರುವ ಚಟುವಟಿಕೆ ಅಸಮಾಧಾನ ತಂದಿದೆ. ಈ ಬಗ್ಗೆ ಒಂದು ವರದಿ.

ರತನ್ ಟಾಟಾ ನಿಧನದ ನಂತರ ಟಾಟಾ ಗ್ರೂಪ್​ನಲ್ಲಿ ಒಡಕು; 30 ಲಕ್ಷ ಕೋಟಿ ಉದ್ಯಮ ಸಾಮ್ರಾಜ್ಯದ ಭವಿಷ್ಯದ ಕಥೆ?
ರತನ್ ಟಾಟಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2025 | 6:16 PM

Share

ನವದೆಹಲಿ, ಅಕ್ಟೋಬರ್ 6: ವಿಶ್ವದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಟಾಟಾ ಗ್ರೂಪ್ ಕೂಡ ಒಂದು. ರತನ್ ಟಾಟಾ ನಿಧನದ ನಂತರ ಟಾಟಾ ಕಂಪನಿಗಳಿಗೆ ವಾರಸುದಾರರು ಯಾರು ಎಂಬುದು ಗೊಂದಲವಾಗಿತ್ತು. ನೋಯಲ್ ಟಾಟಾ ಅವರೇ ಟಾಟಾ ಟ್ರಸ್ಟ್ಸ್ (Tata Trusts) ಛೇರ್ಮನ್ ಆಗುವ ಮೂಲಕ ಟಾಟಾ ಉದ್ಯಮ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಈಗ ಈ ಸಾಮ್ರಾಜ್ಯದಲ್ಲಿ ಬಿರುಕು ಹೆಚ್ಚಾಗತೊಡಗಿದೆ. ಟಾಟಾ ಟ್ರಸ್ಟ್​ನ ಟ್ರಸ್ಟೀಗಳ ಮಧ್ಯೆ ಭಿನ್ನಾಭಿಪ್ರಾಯಗಳು ತಲೆ ಎತ್ತಿವೆ. ಅಕ್ಟೋಬರ್ 10ರಂದು ಟಾಟಾ ಟ್ರಸ್ಟ್​ಗಳ ಮಂಡಳಿಯ ಸಭೆ (Tata Trusts board meeting) ನಡೆಯಲಿದ್ದು, ಅಲ್ಲಿ ಈ ಸಮಸ್ಯೆಗಳನ್ನು ನಿವಾರಿಸಲು ಟ್ರಬಲ್ ಶೂಟ್ ಆಗಬಹುದಾ ಎನ್ನುವ ನಿರೀಕ್ಷೆ ಇದೆ.

ಟಾಟಾ ಗ್ರೂಪ್​ನಲ್ಲಿ ಒಡಕು ಮೂಡಲು ಏನು ಕಾರಣ?

ಇಲ್ಲಿ ಟಾಟಾ ಗ್ರೂಪ್​ನ ಒಡಕು ಅರಿಯುವ ಮುನ್ನ ಅದರ ರಚನೆ ಅರ್ಥ ಮಾಡಿಕೊಳ್ಳುವುದು ಉತ್ತಮ. ಟಾಟಾ ಗ್ರೂಪ್​ನಲ್ಲಿ 26 ಲಿಸ್ಟೆಡ್ ಕಂಪನಿಗಳೂ ಸೇರಿ ಹಲವಾರು ಸಂಸ್ಥೆಗಳಿವೆ. ಇವುಗಳನ್ನು ಟಾಟಾ ಸನ್ಸ್ ಎನ್ನುವ ಕಂಪನಿ ನಿಯಂತ್ರಿಸುತ್ತದೆ. ಇದು ಹೋಲ್ಡಿಂಗ್ ಕಂಪನಿ. ಎಲ್ಲಾ ಟಾಟಾ ಕಂಪನಿಗಳೂ ಕೂಡ ಇದರ ನೇರ ನಿಯಂತ್ರಣದಲ್ಲಿ ಇರುತ್ತವೆ.

ಇನ್ನು, ಟಾಟಾ ಕುಟುಂಬದಲ್ಲಿ ಹಲವಾರು ಟ್ರಸ್ಟ್​ಗಳಿವೆ. ಅವೆಲ್ಲವೂ ಸೇರಿ ಟಾಟಾ ಟ್ರಸ್ಟ್ಸ್ ಇದೆ. ಇದು ಟಾಟಾ ಕಂಪನಿಗಳ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್​ನಲ್ಲಿ ಶೇ. 66ರಷ್ಟು ಪಾಲು ಹೊಂದಿದೆ. ಹೀಗಾಗಿ, ಟಾಟಾ ಟ್ರಸ್ಟ್ಸ್ ಇಡೀ ಟಾಟಾ ವ್ಯವಹಾರದಲ್ಲಿ ನಿರ್ಣಾಯಕ ಅಧಿಕಾರ ಹೊಂದಿದೆ.

ಇದನ್ನೂ ಓದಿ: ಆರ್​ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್​ಸಿಇಪಿ?

ಟಾಟಾ ಸನ್ಸ್​ನ ಛೇರ್ಮನ್ ಎನ್ ಚಂದ್ರಶೇಖರ್ ಇದ್ದಾರೆ. ಆದರೆ, ಟಾಟಾ ಟ್ರಸ್ಟ್ಸ್​ನ ಛೇರ್ಮನ್ ಆಗಿರುವುದು ನೋಯಲ್ ಟಾಟಾ. ಟಾಟಾ ಸನ್ಸ್​ನ ಮುಖ್ಯ ನಿರ್ಧಾರಗಳಲ್ಲಿ ನೋಯಲ್ ಟಾಟಾ ಅವರದ್ದು ಮುಖ್ಯ ಪಾತ್ರ ಇರುತ್ತದೆ.

ಹಿಂದೆ ರತನ್ ಟಾಟಾ ಬದುಕಿದ್ದಾಗ ಅವರ ಮೇಲಿನ ಗೌರವ ಅತ್ಯುಚ್ಚವಾಗಿತ್ತು. ಬಹುತೇಕ ಎಲ್ಲಾ ಟ್ರಸ್ಟಿಗಳು, ಬೋರ್ಡ್ ಡೈರೆಕ್ಟರ್​ಗಳು ರತನ್ ಟಾಟಾ ನಿರ್ಧಾರವನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ, ಅದೇ ಅದೃಷ್ಟ ನೋಯಲ್ ಟಾಟಾ ಅವರಿಗೆ ಇಲ್ಲ.

ಟಾಟಾ ಟ್ರಸ್ಟ್​ಗಳಲ್ಲಿ ಯಾರಿದ್ದಾರೆ?

ಟಾಟಾ ಮನೆತನದಲ್ಲಿ ಹತ್ತಕ್ಕೂ ಹೆಚ್ಚು ವೈಯಕ್ತಿಕ ಟ್ರಸ್ಟ್​ಗಳಿವೆ. ಅವುಗಳ ಪೈಕಿ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್ (ಎಸ್​ಡಿಟಿಟಿ) ಮತ್ತು ಸರ್ ರತನ್ ಟಾಟಾ ಟ್ರಸ್ಟ್ (ಎಸ್​ಆರ್​ಟಿಟಿ) ಪ್ರಮುಖವಾದುವು. ಇವೆರಡು ಟ್ರಸ್ಟ್​ಗಳೇ ಟಾಟಾ ಸನ್ಸ್​ನಲ್ಲಿ ಶೇ. 51ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಎಲ್ಲಾ ಟ್ರಸ್ಟ್​ಗಳು ಸೇರಿ ಶೇ. 66ರಷ್ಟು ಪಾಲು ಹೊಂದಿವೆ.

ಟಾಟಾ ಟ್ರಸ್ಟ್​ಗಳ ಟ್ರಸ್ಟೀಗಳಲ್ಲಿ ಹಲವು ಗುಂಪುಗಳಾಗಿ ಹೋಗಿವೆ. ಅದರಲ್ಲಿ ಎರಡು ಪ್ರಮುಖ ಬಣ ನಿರ್ಮಾಣವಾಗಿದೆ ಎಂದು ಮಾಧ್ಯಮಗಳ ವರದಿಯಿಂದ ಗೊತ್ತಾಗುತ್ತದೆ. ಟಾಟಾ ಸನ್ಸ್ ನಾಮಿನಿ ಡೈರೆಕ್ಟರ್​ಗಳಿಂದ ತಮಗೆ ಸರಿಯಾದ ಮಾಹಿತಿ ಬರುತ್ತಿಲ್ಲ ಎಂದು ಒಂದು ಗುಂಪು ಹೇಳುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ

ನೋಯಲ್ ಟಾಟಾ ಅವರು ಎಲ್ಲದರಲ್ಲೂ ನೇರವಾಗಿ ಭಾಗಿಯಾಗುತ್ತಾರೆ. ಅವರ ನಿರ್ಧಾರಗಳಲ್ಲಿ ಪಾರದರ್ಶಕತೆ ಇರುವುದಿಲ್ಲ ಎನ್ನುವ ಅಸಮಾಧಾನ ಕೆಲ ಟ್ರಸ್ಟಿಗಳದ್ದು.

ಟಾಟಾ ಸನ್ಸ್ ಲಿಸ್ಟೆಡ್ ಕಂಪನಿ ಆಗುವ ಒತ್ತಡ

ಟಾಟಾ ಸನ್ಸ್ ಎಂಬುದು ಇನ್ವೆಸ್ಟ್​ಮೆಂಟ್ ಕಂಪನಿ ಎಂದು ನೊಂದಾಯಿತವಾಗಿದೆ. ಆದರೆ, ಅದರ ಪ್ರಕಾರ ಕಾರ್ಯನಿರ್ವಹಣೆ ಆಗುತ್ತಿಲ್ಲ. ಇನ್ವೆಸ್ಟ್​ಮೆಂಟ್ ಕಂಪನಿಯಾಗಿ ಮುಂದುವರಿಯುವುದಾದರೆ ಅದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಬೇಕು ಎಂದು ಸೆಬಿ ಹೇಳುತ್ತದೆ. 2025ರ ಸೆಪ್ಟೆಂಬರ್ 30ರೊಳಗೆ ಲಿಸ್ಟ್ ಆಗಬೇಕೆಂದು ಡೆಡ್​ಲೈನ್ ಕೊಡಲಾಗಿತ್ತು. ಅದು ಆಗಿ ಹೋಗಿದೆ. ಟಾಟಾ ಸನ್ಸ್ ಏನೂ ನಿರ್ಧಾರ ತೆಗೆದುಕೊಂಡಿಲ್ಲ.

ಒಂದು ವೇಳೆ, ಟಾಟಾ ಸನ್ಸ್ ಲಿಸ್ಟ್ ಆಗದಿದ್ದರೆ ತನ್ನ ಇನ್ವೆಸ್ಟ್ಮೆಂಟ್ ಕಂಪನಿ ನೊಂದಣಿಯನ್ನು ಬಿಟ್ಟುಕೊಡಬೇಕು ಎಂದು ಹೇಳಲಾಗಿದೆ. ರತನ್ ಟಾಟಾ ಅವರು ಬದುಕಿದ್ದಾಗಲೂ ಈ ಪ್ರಶ್ನೆಗಳಿದ್ದವು. ನಾನಾ ಕಾರಣಗಳಿಗೆ ಟಾಟಾ ಸನ್ಸ್ ಅನ್ನು ಲಿಸ್ಟೆಡ್ ಕಂಪನಿಯಾಗಿ ಮಾಡಲು ಪ್ರತಿರೋಧ ಇದ್ದೇ ಇತ್ತು.

ಮಿಸ್ತ್ರಿ ಕುಟುಂಬದ ಒತ್ತಡ

ಇದೇ ವೇಳೆ, ಟಾಟಾ ಸನ್ಸ್ ಅನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಬೇಕೆಂದು ಮಿಸ್ತ್ರಿ ಕುಟುಂಬ ಒತ್ತಡ ಹಾಕುತ್ತಿದೆ. ಟಾಟಾ ಮತ್ತು ಮಿಸ್ತ್ರಿ ಕುಟುಂಬಗಳು ಹಿಂದೊಮ್ಮೆ ಆಪ್ತರಾಗಿದ್ದವು. ಟಾಟಾ ಕಂಪನಿಗಳಲ್ಲಿ ಮಿಸ್ತ್ರಿ ಕುಟುಂಬದವರ ಪಾಲು ಇದೆ. ಟಾಟಾ ಟ್ರಸ್ಟ್ಸ್​ಗಳಲ್ಲೂ ಮಿಸ್ತ್ರಿ ಫ್ಯಾಮಿಲಿಯವರ ಪಾಲು ಇದೆ. ಟಾಟಾ ಸನ್ಸ್​ನಲ್ಲಿ ಶೇ. 18ಕ್ಕಿಂತಲೂ ಹೆಚ್ಚು ಷೇರು ಪಾಲನ್ನು ಮಿಸ್ತ್ರಿ ಕುಟುಂಬ ಹೊಂದಿದೆ.

ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು

ಈಗ ಟಾಟಾ ಸನ್ಸ್ ಲಿಸ್ಟ್ ಆದರೆ ಮಾತ್ರ ಮಿಸ್ತ್ರಿ ಕುಟುಂಬಕ್ಕೆ ಹಣಕಾಸು ಮೌಲ್ಯ ಸಿಗುತ್ತದೆ. ಇಲ್ಲದಿದ್ದರೆ ಷೇರುಪಾಲು ಇದ್ದರೂ ಅದು ವ್ಯರ್ಥ. ಹೀಗಾಗಿ, ಟಾಟಾ ಸನ್ಸ್ ಲಿಸ್ಟ್ ಆಗುವುದರಲ್ಲಿ ಶಾಪ್ಪೂರ್​ಜಿ ಪಲ್ಲನ್​ಜಿ ಗ್ರೂಪ್​ನ (ಮಿಸ್ತ್ರಿ ಫ್ಯಾಮಿಲಿ) ಹಿತಾಸಕ್ತಿ ಅಡಗಿದೆ.

ಅ. 10ಕ್ಕೆ ಟಾಟಾ ಟ್ರಸ್ಟ್ಸ್ ಸಭೆ

ಟಾಟಾ ಟ್ರಸ್ಟ್ಸ್​ ಮಂಡಳಿ ಸಭೆ ಅಕ್ಟೋಬರ್ 10ರಂದು ನಡೆಯಲಿದೆ. ಟಾಟಾ ಸನ್ಸ್​ನ ಮುಂದಿನ ಮಾರ್ಗ ಏನು ಎಂಬುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗಬಹುದು. ಹಾಗೆಯೇ, ಟ್ರಸ್ಟೀಗಳ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಬಹುದು. 328 ಬಿಲಿಯನ್ ಡಾಲರ್​ಗೂ ಅಧಿಕ ಮಾರುಕಟ್ಟೆ ಸಂಪತ್ತಿರುವ ಟಾಟಾದ ವಿವಿಧ ಕಂಪನಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲ ಸಭೆ ಅದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ