ಎನ್​ಇಎಫ್​ಟಿ ಹೊಸ ಮೈಲಿಗಲ್ಲು; ಒಂದೇ ದಿನ 4 ಕೋಟಿಗೂ ಹೆಚ್ಚು ಹಣದ ವಹಿವಾಟು

|

Updated on: Mar 03, 2024 | 12:34 PM

NEFT transactions: 2024ರ ಫೆಬ್ರುವರಿ 29ರಂದು ಒಂದೇ ದಿನ ಎನ್​ಇಎಫ್​ಟಿ ಮೂಲಕ 4.10 ಕೋಟಿ ವಹಿವಾಟುಗಳು ನಡೆದಿವೆ. ಇದು ಹೊಸ ಮೈಲಿಗಲ್ಲಾಗಿದೆ. ಆರ್​ಬಿಐ ಮಾರ್ಚ್ 1ರಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್ ಮೂಲಕ ಆಗುವ ವಹಿವಾಟು ಕಳೆದ 10 ವರ್ಷದಲ್ಲಿ ಹಲವು ಪಟ್ಟು ಹೆಚ್ಚಾಗಿವೆ. ಇನ್ನು, 2023ರ ಮೇ 19ರಂದು ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳ ಪೈಕಿ ಈಗ ಉಳಿದಿರುವುದು 9,000 ಕೋಟಿ ರೂಗಿಂತಲೂ ಕಡಿಮೆ ಎನ್ನಲಾಗಿದೆ.

ಎನ್​ಇಎಫ್​ಟಿ ಹೊಸ ಮೈಲಿಗಲ್ಲು; ಒಂದೇ ದಿನ 4 ಕೋಟಿಗೂ ಹೆಚ್ಚು ಹಣದ ವಹಿವಾಟು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಮಾರ್ಚ್ 3: ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ ಅಥವಾ ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್ (NEFT & RTGS) ವ್ಯವಸ್ಥೆಯನ್ನು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗೆ ಉಪಯೋಗಿಸಲಾಗುತ್ತದೆ. ಯುಪಿಐ ಬಂದ ಬಳಿಕ ಇವೆರಡರ ಪ್ರಾಬಲ್ಯ ಕಡಿಮೆ ಆಗಿದೆಯಾದರೂ ನಿಂತಿಲ್ಲ. ಎನ್​ಇಎಫ್​ಟಿ ಈಗಲೂ ವ್ಯಾಪಕವಾಗಿ ಬಳಕೆ ಆಗುತ್ತಿದೆ. ಆರ್​ಬಿಐ ಮೊನ್ನೆ ಪ್ರಕಟಿಸಿದ ದತ್ತಾಂಶದ ಪ್ರಕಾರ ಎನ್​ಇಎಫ್​ಟಿ ಹೊಸ ಮೈಲಿಗಲ್ಲು ಕೂಡ ಮುಟ್ಟಿದೆ. ಒಂದು ದಿನದಲ್ಲಿ 4 ಕೋಟಿಗೂ ಹೆಚ್ಚು ಹಣ ವಹಿವಾಟು ನಡೆದಿದೆ. ಫೆಬ್ರುವರಿ 29ರಂದು ಒಂದೇ ದಿನದಂದು 4,10,61,337 ವಹಿವಾಟುಗಳು ಎನ್​ಇಎಫ್​ಟಿ ಮೂಲಕ ನಡೆದಿವೆ ಎಂದು ಆರ್​ಬಿಐ ಮಾಹಿತಿ ನೀಡಿದೆ

ಕಳೆದ ಹತ್ತು ವರ್ಷದಲ್ಲಿ ಎನ್​ಇಎಫ್​ಟಿ ವಹಿವಾಟಿನಲ್ಲಿ ಶೇ 700ರಷ್ಟು ಹೆಚ್ಚಾಗಿದೆ. ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಅಥವಾ ಆರ್​ಟಿಜಿಎಸ್ ಬಳಕೆ ಶೇ. 200ರಷ್ಟು ಹೆಚ್ಚಾಗಿದೆ. ಇನ್ನು ಎನ್​ಇಎಫ್​ಟಿ ಮೂಲಕ ವರ್ಗಾವಣೆ ಆದ ಹಣದ ಮೌಲ್ಯ 10 ವರ್ಷದಲ್ಲಿ ಶೇ. 670ರಷ್ಟು ಹೆಚ್ಚಾಗಿದೆ. ಆರ್​ಟಿಜಿಎಸ್ ಸಾಧನೆ ಶೇ 104ರಷ್ಟು ಹೆಚ್ಚಾಗಿದೆ. ಇವೆರಡೂ ಪ್ಲಾಟ್​ಫಾರ್ಮ್ ಅನ್ನು ಆರ್​ಬಿಐ ನಿರ್ವಹಿಸುತ್ತಿದೆ. ಹಣ ವರ್ಗಾವಣೆಯಲ್ಲಿ ಯುಪಿಐ ಪ್ರಾಬಲ್ಯ ತೋರಿದರೂ ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್ ಬಳಕೆ ಕೂಡ ಹೆಚ್ಚಿರುವುದನ್ನು ಗಮನಿಸಿದರೆ ಭಾರತದಲ್ಲಿ ಒಟ್ಟಾರೆ ಡಿಜಿಟಲ್ ಟ್ರಾನ್ಸಾಕ್ಷನ್ ತೀರಾ ಹೆಚ್ಚಾಗಿರುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ 619 ಟ್ರಿಲಿಯನ್ ಡಾಲರ್ ಗಡಿಗೆ; ವಾರದಲ್ಲಿ 3 ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಳ

ಎರಡು ಸಾವಿರ ರೂ ಕರೆನ್ಸಿ ಶೇ. 97.62ರಷ್ಟು ವಾಪಸ್

ಮಾರ್ಚ್ 1ರಂದು ಆರ್​ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2,000 ರೂ ಮುಖಬೆಲೆಯ ನೋಟುಗಳಲ್ಲಿ ಆರ್​ಬಿಐಗೆ ಮರಳಿರುವುದು ಶೇ 97.62ರಷ್ಟಂತೆ. 2023ರ ಮೇ 19ರಂದು ಎರಡು ಸಾವಿರ ರೂ ನೋಟನ್ನು ಆರ್​ಬಿಐ ಚಲಾವಣೆಯಿಂದ ಹಿಂಪಡೆದುಕೊಂಡಿತ್ತು. ಆಗ ಚಲಾವಣೆಯಲ್ಲಿ ಇದ್ದದ್ದು 3.56 ಲಕ್ಷ ಕೋಟಿ ರೂ ಮೌಲ್ಯದ ಎರಡು ಸಾವಿರ ರೂ ನೋಟುಗಳು. ಆ ನೋಟುಗಳನ್ನು ಮರಳಿಸುವಂತೆ ಆರ್​ಬಿಐ ತಿಳಿಸಿದೆ. ಈಗ 2024ರ ಫೆಬ್ರುವರಿ 29ರಂದು ಆರ್​ಬಿಐಗೆ ಇನ್ನೂ ಮರಳದೇ ಇರುವ ಎರಡು ಸಾವಿರ ರೂ ನೋಟುಗಳ ಮೌಲ್ಯ 8,470 ಕೋಟಿ ರೂ.

ಎರಡು ಸಾವಿರ ರೂ ನೋಟುಗಳನ್ನು ಹೊಂದಿರುವವರು ಈಗಲೂ ಕೂಡ ಅದನ್ನು ಮರಳಿಸಿ, ಬೇರೆ ಮಾನ್ಯ ನೋಟುಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಅಥವಾ ಆ ಮೌಲ್ಯದ ಹಣವನ್ನು ಬ್ಯಾಂಕ್ ಖಾತೆಗೆ ಠೇವಣಿ ಇರಿಸಬಹುದು. ಆರ್​ಬಿಐನ 19 ಕಚೇರಿಗಳಲ್ಲಿ ಈ ಸೌಲಭ್ಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ