AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಪೆಟ್ರೋಲ್ ಹಾಕಿಸಿದರೆ ಹೆಚ್ಚು ಮೈಲೇಜ್ ಸಿಗುತ್ತದೆಯೇ? ಇದರ ಹಿಂದಿನ ಸತ್ಯವೇನು?

ಬೆಳಗ್ಗೆ ಪೆಟ್ರೋಲ್ ಹಾಕಿಸಿದರೆ ವಾಹನಕ್ಕೆ ಹೆಚ್ಚು ಮೈಲೇಜ್ ಸಿಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ತಂಪಾದ ಸಮಯದಲ್ಲಿ ಪೆಟ್ರೋಲ್ ಹೆಚ್ಚು ಸಾಂದ್ರವಾಗಿರುತ್ತದೆ ಎಂಬುದು ಇದರ ಹಿಂದಿನ ಕಾರಣ. ಆದರೆ ಪೆಟ್ರೋಲ್ ಬಂಕ್‌ಗಳ ಭೂಗತ ಟ್ಯಾಂಕ್‌ಗಳಿಂದಾಗಿ ದಿನದ ಸಮಯ ಬದಲಾದರೂ ಇಂಧನದ ತಾಪಮಾನದಲ್ಲಿ ದೊಡ್ಡ ವ್ಯತ್ಯಾಸವಾಗುವುದಿಲ್ಲ.

ಬೆಳಗ್ಗೆ ಪೆಟ್ರೋಲ್ ಹಾಕಿಸಿದರೆ ಹೆಚ್ಚು ಮೈಲೇಜ್ ಸಿಗುತ್ತದೆಯೇ? ಇದರ ಹಿಂದಿನ ಸತ್ಯವೇನು?
Petrol
ಮಾಲಾಶ್ರೀ ಅಂಚನ್​
| Edited By: |

Updated on: Sep 12, 2026 | 11:28 AM

Share

ಮುಖ್ಯಾಂಶಗಳು

  • ಬೆಳಗ್ಗೆ ಪೆಟ್ರೋಲ್ ಹಾಕಿಸಿದರೆ ಮೈಲೇಜ್ ಹೆಚ್ಚುತ್ತಾ?
  • ಪೆಟ್ರೋಲ್ ಹಾಕಿಸಲು ಬೆಳಗ್ಗೆಯೇ ಹೋಗಬೇಕಾ?
  • ಬೆಳಗ್ಗೆ ಪೆಟ್ರೋಲ್ ಹಾಕಿಸುವುದರ ಹಿಂದಿನ ಸತ್ಯವೇನು?

ಬೆಳಗ್ಗೆ ಬೇಗನೆ ಪೆಟ್ರೋಲ್ (Petrol) ಬಂಕ್‌ಗೆ ಹೋಗಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡರೆ ಹೆಚ್ಚು ಮೈಲೇಜ್ ಸಿಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಇದಕ್ಕೆ ಕೆಲವರು ವೈಜ್ಞಾನಿಕ ಕಾರಣವನ್ನೂ ನೀಡುತ್ತಾರೆ. ಬೆಳಗ್ಗೆ ವಾತಾವರಣ ತಂಪಾಗಿರುತ್ತದೆ. ಹೀಗಾಗಿ ಪೆಟ್ರೋಲ್ ಹೆಚ್ಚು ಸಾಂದ್ರವಾಗಿರುತ್ತದೆ. ಅದೇ ಹಣಕ್ಕೆ ಸ್ವಲ್ಪ ಹೆಚ್ಚು ಇಂಧನ ಸಿಗುತ್ತದೆ ಮತ್ತು ಇದರಿಂದ ವಾಹನದ ಮೈಲೇಜ್ ಹೆಚ್ಚಾಗುತ್ತದೆ ಎನ್ನುವುದು ಈ ಮಾತಿನ ಹಿಂದಿರುವ ಸಾಮಾನ್ಯ ವಾದ. ಆದರೆ ನಿಜವಾಗಿಯೂ ಇದರಿಂದ ದೊಡ್ಡ ವ್ಯತ್ಯಾಸವಾಗುತ್ತದೆಯೇ?.

ತಂಪಾದಾಗ ಪೆಟ್ರೋಲ್‌ನಲ್ಲಿ ಏನಾಗುತ್ತದೆ?

ತಾಪಮಾನ ಬದಲಾದಂತೆ ದ್ರವದ ಸಾಂದ್ರತೆಯೂ ಬದಲಾಗುತ್ತದೆ. ಸಾಮಾನ್ಯವಾಗಿ ತಾಪಮಾನ ಕಡಿಮೆಯಾದಾಗ ಪೆಟ್ರೋಲ್‌ನ ಸಾಂದ್ರತೆ ಹೆಚ್ಚಾಗುತ್ತದೆ. ಅಂದರೆ ಅದೇ ಪ್ರಮಾಣದ ಜಾಗದಲ್ಲಿ ಸ್ವಲ್ಪ ಹೆಚ್ಚು ಇಂಧನದ ದ್ರವ್ಯರಾಶಿ ಇರಬಹುದು. ಇದೇ ಕಾರಣದಿಂದ ಬೆಳಗ್ಗೆ ಅಥವಾ ತಂಪಾದ ಸಮಯದಲ್ಲಿ ಪೆಟ್ರೋಲ್ ಹಾಕಿಸಿಕೊಂಡರೆ ಹೆಚ್ಚು ಇಂಧನ ಸಿಗಬಹುದು ಎಂಬ ಕಲ್ಪನೆ ಬಂದಿದೆ.

ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಪೆಟ್ರೋಲ್ ಬಂಕ್‌ಗಳಲ್ಲಿರುವ ಇಂಧನ ಸಾಮಾನ್ಯವಾಗಿ ಭೂಮಿಯ ಅಡಿಯ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗಿರುತ್ತದೆ. ಹೊರಗಿನ ಗಾಳಿಯ ತಾಪಮಾನ ಬದಲಾದಷ್ಟೇ ವೇಗವಾಗಿ ಆ ಟ್ಯಾಂಕ್‌ನಲ್ಲಿರುವ ಪೆಟ್ರೋಲ್‌ನ ತಾಪಮಾನ ಬದಲಾಗುವುದಿಲ್ಲ. ಹೀಗಾಗಿ ಬೆಳಗ್ಗೆ ತಂಪಾಗಿದೆ ಎಂಬ ಕಾರಣಕ್ಕೆ ಪೆಟ್ರೋಲ್‌ನ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ.

Auto Tips: ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ AC ಆನ್ ಮಾಡಬಾರದು ಎನ್ನುವುದೇಕೆ?

ಹಾಗಾದರೆ ಬೆಳಗ್ಗೆ ಪೆಟ್ರೋಲ್ ಹಾಕಿಸುವುದರಿಂದ ಮೈಲೇಜ್ ಹೆಚ್ಚುತ್ತದೆಯೇ?

ಪ್ರಾಯೋಗಿಕವಾಗಿ ನೋಡಿದರೆ, ಬೆಳಗ್ಗೆ ಪೆಟ್ರೋಲ್ ಹಾಕಿಸುವುದರಿಂದ ಮಾತ್ರ ನಿಮ್ಮ ವಾಹನದ ಮೈಲೇಜ್‌ನಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಾಹನದ ಮೈಲೇಜ್ ಮೇಲೆ ಚಾಲನಾ ವೇಗ, ವೇಗವರ್ಧನೆ, ಬ್ರೇಕ್ ಹಾಕುವ ರೀತಿ, ಟೈರ್‌ಗಳ ಗಾಳಿಯ ಒತ್ತಡ, ವಾಹನದ ತೂಕ, ರಸ್ತೆ ಪರಿಸ್ಥಿತಿ ಮತ್ತು ಎಂಜಿನ್‌ನ ನಿರ್ವಹಣೆಯಂತಹ ಅಂಶಗಳು ಹೆಚ್ಚು ಪರಿಣಾಮ ಬೀರುತ್ತವೆ.

ಅದರಲ್ಲೂ ಒಂದೇ ವಾಹನವನ್ನು ವಿಭಿನ್ನ ಸಮಯದಲ್ಲಿ ಓಡಿಸಿದಾಗ ಮೈಲೇಜ್‌ನಲ್ಲಿ ವ್ಯತ್ಯಾಸ ಕಂಡುಬಂದರೆ, ಅದಕ್ಕೆ ಪೆಟ್ರೋಲ್ ಹಾಕಿಸಿದ ಸಮಯವೊಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಟ್ರಾಫಿಕ್, ರಸ್ತೆ, ಚಾಲನಾ ಶೈಲಿ ಮತ್ತು ಹವಾಮಾನ ಕೂಡ ಪರಿಣಾಮ ಬೀರುತ್ತವೆ.

ಹಾಗಾದರೆ ಯಾವಾಗ ಪೆಟ್ರೋಲ್ ಹಾಕಿಸಿಕೊಳ್ಳುವುದು ಉತ್ತಮ?

ಪೆಟ್ರೋಲ್ ಹಾಕಿಸಿಕೊಳ್ಳಲು ಬೆಳಗ್ಗೆಯೇ ಹೋಗಬೇಕು ಎಂಬ ನಿಯಮವಿಲ್ಲ. ತಂಪಾದ ಸಮಯದಲ್ಲಿ ಇಂಧನದ ಆವಿಯಾಗುವಿಕೆ ಕಡಿಮೆಯಾಗಬಹುದು. ಆದ್ದರಿಂದ ಬೆಳಗ್ಗೆ ಅಥವಾ ಸಂಜೆ ಇಂಧನ ತುಂಬಿಸುವುದು ಪರಿಸರದ ದೃಷ್ಟಿಯಿಂದ ಸ್ವಲ್ಪ ಉತ್ತಮವಾಗಿರಬಹುದು. ಆದರೆ ಇದನ್ನು ದೊಡ್ಡ ಮೈಲೇಜ್ ಉಳಿತಾಯದ ವಿಧಾನ ಎಂದು ಪರಿಗಣಿಸಬಾರದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us