Auto Tips: ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ AC ಆನ್ ಮಾಡಬಾರದು ಎನ್ನುವುದೇಕೆ?
ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಎಸಿ ಆನ್ ಮಾಡಬಾರದು ಎಂಬ ಮಾತನ್ನು ಹಲವರು ಕೇಳಿರುತ್ತಾರೆ. ಆದರೆ ಇದು ನಿಜವೇ? ಆಧುನಿಕ ಕಾರುಗಳಲ್ಲಿ ತಕ್ಷಣ ಎಸಿ ಆನ್ ಮಾಡುವುದರಿಂದ ಹಾನಿಯಾಗುತ್ತದೆಯೇ, ಬಿಸಿಲಿನಲ್ಲಿ ನಿಂತಿರುವ ಕಾರನ್ನು ಬೇಗ ತಂಪಾಗಿಸಲು ಏನು ಮಾಡಬೇಕು ಮತ್ತು ಎಸಿ ಬಳಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯಿರಿ.

ಮುಖ್ಯಾಂಶಗಳು
- ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ AC ಆನ್ ಮಾಡುತ್ತೀರಾ?
- ಬಿಸಿಲಿನಲ್ಲಿ ನಿಂತ ಕಾರಿನ AC ಬೇಗ ಕೂಲ್ ಆಗಬೇಕಾ?
- ಸ್ಟಾರ್ಟ್ ಮಾಡಿದ ತಕ್ಷಣ AC ಆನ್ ಮಾಡಿದರೆ ಎಂಜಿನ್‌ಗೆ ಹಾನಿಯಾಗುತ್ತದೆಯೇ?
ಬೇಸಿಗೆಯಲ್ಲಿ ಕಾರಿನೊಳಗೆ ಕುಳಿತ ತಕ್ಷಣ ಬಹುತೇಕ ಎಲ್ಲರೂ ಮಾಡುವ ಮೊದಲ ಕೆಲಸ ಎಸಿ (Car AC) ಆನ್ ಮಾಡುವುದು. ಆದರೆ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಎಸಿ ಆನ್ ಮಾಡಬಾರದು, ಮೊದಲು ಎಂಜಿನ್ ಸ್ವಲ್ಪ ಬಿಸಿಯಾಗಬೇಕು ಎಂಬ ಮಾತನ್ನು ಹಲವರು ಕೇಳಿರುತ್ತಾರೆ. ಹಾಗಾದರೆ ಇದು ನಿಜವೇ? ಸ್ಟಾರ್ಟ್ ಮಾಡಿದ ತಕ್ಷಣ ಎಸಿ ಆನ್ ಮಾಡಿದರೆ ಕಾರಿನ ಎಂಜಿನ್ ಅಥವಾ ಎಸಿ ವ್ಯವಸ್ಥೆಗೆ ಹಾನಿಯಾಗುತ್ತದೆಯೇ?.
ತಕ್ಷಣ ಎಸಿ ಆನ್ ಮಾಡಿದರೆ ಕಾರಿಗೆ ಹಾನಿಯಾಗುತ್ತದೆಯೇ?
ಆಧುನಿಕ ಕಾರುಗಳಲ್ಲಿ ಎಂಜಿನ್ ಸ್ಟಾರ್ಟ್ ಮಾಡಿದ ತಕ್ಷಣ ಎಸಿ ಆನ್ ಮಾಡುವುದು ಸಾಮಾನ್ಯವಾಗಿ ಸಮಸ್ಯೆಯಲ್ಲ. ಇಂದಿನ ಕಾರುಗಳ ಎಂಜಿನ್ ಮತ್ತು ಎಸಿ ವ್ಯವಸ್ಥೆಗಳು ಇಂತಹ ಬಳಕೆಯನ್ನು ಗಮನದಲ್ಲಿಟ್ಟುಕೊಂಡೇ ವಿನ್ಯಾಸಗೊಳಿಸಲಾಗಿರುತ್ತವೆ. ಹಳೆಯ ಕಾರುಗಳಂತೆ ಎಂಜಿನ್ ಅನ್ನು ಹಲವು ನಿಮಿಷಗಳ ಕಾಲ ಐಡಲ್‌ನಲ್ಲಿ ಇಟ್ಟು ವಾರ್ಮ್ ಅಪ್ ಮಾಡುವುದು ಸಾಮಾನ್ಯವಾಗಿ ಅಗತ್ಯವಿಲ್ಲ. ಎಂಜಿನ್ ಸ್ಟಾರ್ಟ್ ಮಾಡಿದ ಬಳಿಕ ಸ್ವಲ್ಪ ಸಮಯದೊಳಗೆ ಕಾರನ್ನು ನಿಧಾನವಾಗಿ ಚಲಾಯಿಸುವುದು ಹೆಚ್ಚು ಸೂಕ್ತ.
ಆದರೆ ಎಸಿ ಆನ್ ಮಾಡಿದಾಗ ಎಂಜಿನ್‌ಗೆ ಹೆಚ್ಚುವರಿ ಲೋಡ್ ಬೀಳಬಹುದು. ಸಾಂಪ್ರದಾಯಿಕ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಲ್ಲಿ ಎಸಿ ಕಂಪ್ರೆಸರ್ ಎಂಜಿನ್‌ನ ಶಕ್ತಿಯನ್ನು ಬಳಸಿಕೊಂಡು ರೆಫ್ರಿಜರೆಂಟ್ ಅನ್ನು ಸಂಕುಚಿತಗೊಳಿಸುತ್ತದೆ. ಹೀಗಾಗಿ ಎಸಿ ಕೆಲಸ ಮಾಡುವಾಗ ಎಂಜಿನ್ ಮೇಲೆ ಸ್ವಲ್ಪ ಹೆಚ್ಚುವರಿ ಹೊರೆ ಇರುವುದು ಸಹಜ.
ಹಾಗಾದರೆ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಏನು ಮಾಡಬೇಕು?
ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದರೆ ಅದರ ಒಳಭಾಗ ತುಂಬಾ ಬಿಸಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಾಗಿಲು ಅಥವಾ ಕಿಟಕಿಗಳನ್ನು ಕೆಲವು ಕ್ಷಣ ತೆರೆದು ಒಳಗಿನ ಬಿಸಿ ಗಾಳಿಯನ್ನು ಹೊರಗೆ ಬಿಡುವುದು ಉತ್ತಮ. ನಂತರ ಎಸಿ ಆನ್ ಮಾಡಿ, ಆರಂಭದಲ್ಲಿ ಹೊರಗಿನ ಗಾಳಿಯನ್ನು ಒಳಗೆ ತೆಗೆದುಕೊಳ್ಳುವ ಮೋಡ್‌ನಲ್ಲಿ ಬಿಸಿ ಗಾಳಿಯನ್ನು ಹೊರಹಾಕಲು ಸಹಾಯ ಮಾಡಬಹುದು. ಕಾರಿನ ಒಳಭಾಗ ಸ್ವಲ್ಪ ತಂಪಾದ ಬಳಿಕ Recirculation ಮೋಡ್‌ಗೆ ಬದಲಾಯಿಸಿದರೆ ಈಗಾಗಲೇ ತಂಪಾಗಿರುವ ಒಳಗಿನ ಗಾಳಿಯನ್ನೇ ಮತ್ತೆ ತಂಪಾಗಿಸುವುದರಿಂದ ಕ್ಯಾಬಿನ್ ಬೇಗ ತಂಪಾಗಲು ಸಹಾಯವಾಗುತ್ತದೆ.
CNG ಎಂದರೇನು? ಕಾರಿನಲ್ಲಿ ಅದು ಹೇಗೆ ಕೆಲಸ ಮಾಡುತ್ತದೆ, ಪ್ರಯೋಜನ-ಅನುಕೂಲಗಳೇನು?
ನಿಲ್ಲಿಸಿದ ಕಾರಿನಲ್ಲಿ AC ಹಾಕಿಕೊಂಡೇ ಇರಬೇಕೇ?
ಕಾರನ್ನು ಪಾರ್ಕ್ ಮಾಡಿ, ಎಂಜಿನ್ ಚಾಲನೆಯಲ್ಲಿರುವಂತೆ ಬಿಟ್ಟು ಎಸಿ ಮೂಲಕ ಒಳಭಾಗವನ್ನು ತಂಪಾಗಿಸುವುದು ಸಾಧ್ಯ. ಆದರೆ ಇದು ಕಾರಿನ ಒಳಭಾಗವನ್ನು ತಂಪಾಗಿಸುವ ಅತ್ಯಂತ ವೇಗವಾದ ಅಥವಾ ಇಂಧನ ಉಳಿತಾಯದ ವಿಧಾನವಲ್ಲ. ಮೊದಲು ಬಿಸಿ ಗಾಳಿಯನ್ನು ಹೊರಹಾಕಿ, ನಂತರ AC ಬಳಸುವುದು ಹೆಚ್ಚು ಪರಿಣಾಮಕಾರಿ.
ಎಂಜಿನ್ ಸ್ಟಾರ್ಟ್ ಮಾಡಿದ ಬಳಿಕ ಎಷ್ಟು ಹೊತ್ತು ಕಾಯಬೇಕು?
AC ಆನ್ ಮಾಡುವ ಮೊದಲು 2-5 ನಿಮಿಷ ಕಾಯಬೇಕು ಎಂಬ ನಿರ್ದಿಷ್ಟ ನಿಯಮ ಆಧುನಿಕ ಕಾರುಗಳಿಗೆ ಸಾಮಾನ್ಯವಾಗಿ ಅಗತ್ಯವಿಲ್ಲ. ಎಂಜಿನ್ ಸ್ಟಾರ್ಟ್ ಮಾಡಿದ ಬಳಿಕ ಸೀಟ್‌ಬೆಲ್ಟ್ ಹಾಕಿಕೊಳ್ಳುವುದು, ಕನ್ನಡಿಗಳನ್ನು ಸರಿಹೊಂದಿಸುವುದು ಮುಂತಾದ ಕೆಲಸಗಳನ್ನು ಮುಗಿಸಿ ನಿಧಾನವಾಗಿ ಚಾಲನೆ ಆರಂಭಿಸಬಹುದು. ಎಂಜಿನ್ ಸಂಪೂರ್ಣವಾಗಿ ಸಾಮಾನ್ಯ ಕಾರ್ಯಾಚರಣೆಯ ತಾಪಮಾನಕ್ಕೆ ಬರುವವರೆಗೆ ಮೊದಲ ಕೆಲವು ನಿಮಿಷಗಳಲ್ಲಿ ಅತಿಯಾದ ವೇಗ ಅಥವಾ ತೀವ್ರ ಆಕ್ಸಿಲರೇಷನ್ ತಪ್ಪಿಸುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




