
ನವದೆಹಲಿ, ಆಗಸ್ಟ್ 28: ಡ್ರೀಮ್11 ಪ್ಲಾಟ್ಫಾರ್ಮ್ನಲ್ಲಿ (Dream11) ನೂರಕ್ಕೆ 99 ಜನರು ತಮ್ಮ ಜೀವಿತಾವಧಿಯಲ್ಲಿ ಯಾವತ್ತೂ 10,000 ರೂಗಿಂತ ಹೆಚ್ಚು ಹಣ ಗೆದ್ದಿಲ್ಲ, ಅಥವಾ ಅಷ್ಟು ಹಣ ನಷ್ಟ ಮಾಡಿಕೊಂಡಿಲ್ಲ ಎಂದು ಅದರ ಸಹ-ಸಂಸ್ಥಾಪಕ ಹರ್ಷ್ ಜೈನ್ ಹೇಳಿದ್ದಾರೆ ಎಂದು ಮನಿಕಂಟ್ರೋಲ್ನಲ್ಲಿ ವರದಿಯಾಗಿದೆ. ಸರ್ಕಾರದ ಹೊಸ ಗೇಮಿಂಗ್ ನೀತಿಯಿಂದಾಗಿ (Online gaming bill) ಡ್ರೀಮ್11 ಎನ್ನುವ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ತನ್ನ ಪ್ರಮುಖ ಚಟುವಟಿಕೆಯನ್ನು ನಿಲ್ಲಿಸಿದೆ. ಎಲ್ಲಾ ರೀತಿಯ ಪೇಡ್ ಕಂಟೆಸ್ಟ್ಗಳನ್ನು ನಿಲ್ಲಿಸಿದೆ.
ಹಣ ಪಾವತಿಸಬೇಕಾದ ಎಲ್ಲಾ ರೀತಿಯ ಆನ್ಲೈನ್ ಗೇಮ್ಗಳನ್ನು ಪೂರ್ಣವಾಗಿ ನಿಷೇಧಿಸುವ ಕಾನೂನನ್ನು ಗೇಮಿಂಗ್ ಬಿಲ್ ಮೂಲಕ ತರಲು ಸರ್ಕಾರ ಹೊರಟಿದೆ. ಈ ರೀತಿಯ ಹಣ ಕಟ್ಟಬೇಕಾದ ಗೇಮ್ಗಳಿಂದ ಕುಟುಂಬಗಳು ನಾಶವಾಗುತ್ತವೆ ಎಂಬುದು ಸರ್ಕಾರದ ಕಾಳಜಿ. ಡ್ರೀಮ್11 ಪ್ಲಾಟ್ಫಾರ್ಮ್ನ ಸಂಸ್ಥಾಪಕ ಹರ್ಷ್ ಜೈನ್ ಇದಕ್ಕೆ ಭಿನ್ನವಾದ ಅನಿಸಿಕೆ ಮತ್ತು ವಿಚಾರ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು
ಮನಿಕಂಟ್ರೋಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಡ್ರೀಮ್11 ಹೇಗೆ ಕ್ರೀಡೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಸಿನಿಮಾಗೆ ಪಾಪ್ಕಾರ್ನ್ ಹೇಗೋ ಹಾಗೆ ಒಂದು ಕ್ರೀಡೆಗೆ ತಮ್ಮ ಪ್ಲಾಟ್ಫಾರ್ಮ್ ಪಾಪ್ಕಾರ್ನ್ ಇದ್ದಂತೆ. ಕ್ರಿಕೆಟ್ ಆಟದಲ್ಲಿ ಫ್ಯಾನ್ಸ್ ಎಂಗೇಜ್ಮೆಂಟ್ ಹೆಚ್ಚಿಸಲೂ ಇದು ನೆರವಾಗುತ್ತದೆ ಎಂಬುದು ಅವರ ವಾದ.
‘ನಮ್ಮ ಟಿಕೆಟ್ ಸೈಜ್ (ಪ್ರವೇಶ ಶುಲ್ಕ) ಬಹಳ ಕಡಿಮೆ. ಸರಾಸರಿಯಾಗಿ 51 ರೂ ಅಥವಾ 52 ರೂ ಇರುತ್ತದೆ. ಇದು ಫ್ಯಾಂಟಸಿ ಸ್ಪೋರ್ಟ್ಸ್ ಆದ್ದರಿಂದ ಇಷ್ಟಬಂದಂತೆ, ಇಷ್ಟಬಂದಷ್ಟು ಸಲ ಆಡಲು ಆಗುವುದಿಲ್ಲ. ರಿಯಲ್ ಲೈಫ್ ಮ್ಯಾಚ್ ಇದ್ದಾಗ ಮಾತ್ರ ಆಡಬಹುದು’ ಎಂದು ಹರ್ಷ್ ಜೈನ್ ವಿವರಿಸಿದ್ದಾರೆ. ಫ್ಯಾಂಟಸಿ ಸ್ಪೋರ್ಟ್ಸ್ ಆಟಗಳು ಕ್ರಿಕೆಟ್ಗೆ ಸೀಮಿತವಾಗದೆ, ವಾಲಿಬಾಲ್ ಇತ್ಯಾದಿ ಕ್ರೀಡೆಗಳಿಗೂ ವ್ಯಾಪಿಸಿತ್ತು.
ಡ್ರೀಮ್11 ಪ್ಲಾಟ್ಫಾರ್ಮ್ನಲ್ಲಿ 26 ಕೋಟಿ ಬಳಕೆದಾರರಿದ್ದಾರೆ. ಆಗಸ್ಟ್ 22ರಂದು ಎಲ್ಲಾ ಪೇಡ್ ಕಂಟೆಸ್ಟ್ಗಳನ್ನು ನಿಲ್ಲಿಸಿದೆ. ಆನ್ಲೈನ್ನಲ್ಲಿ ಉಚಿತವಾಗಿ ಆಡಬಹುದಾದ ಸೋಷಿಯಲ್ ಗೇಮ್ಗಳಿಗೆ ಅದು ಹೊರಳಿದೆ.
ಇದನ್ನೂ ಓದಿ: ಭಾರತದಲ್ಲಿ ಮೈಕ್ರೋನ್ನ ಬೃಹತ್ ಸೆಮಿಕಂಡಕ್ಟರ್ ಘಟಕ; ವಿಡಿಯೋ ಹಂಚಿಕೊಂಡ ಸಚಿವ ವೈಷ್ಣವ್
ಒಂದು ಕ್ರಿಕೆಟ್ ಮ್ಯಾಚ್ ನಡೆಯುವ ಮುನ್ನ ಯಾರು ಬೇಕಾದರೂ ಡ್ರೀಮ್11ನಲ್ಲಿ ತಮ್ಮದೇ ತಂಡವನ್ನು ರಚಿಸಬಹುದು. ಆಟವಾಡುವ ಎರಡು ತಂಡಗಳಲ್ಲಿರುವ ಆಟಗಾರರಲ್ಲಿ 11 ಮಂದಿಯನ್ನು ಆಯ್ದುಕೊಂಡು ತಂಡ ಕಟ್ಟಬಹುದು. ನೀವು ಕಟ್ಟಿದ ತಂಡದಲ್ಲಿರುವ ಆಟಗಾರರು ರಿಯಲ್ ಗೇಮ್ನಲ್ಲಿ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅಂಕಗಳು ಸಿಗುತ್ತಾ ಹೋಗುತ್ತದೆ. ಒಂದು ಕೋಟಿ ರೂವರೆಗೂ ಗೆಲ್ಲುವ ಅವಕಾಶ ನೀಡಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Thu, 28 August 25