Mumbai: ಮುಂಬೈನಲ್ಲಿ 4,000 ಮನೆಗಳಿಗೆ 1 ಲಕ್ಷದಷ್ಟು ಅರ್ಜಿಗಳ ಸಲ್ಲಿಕೆ; ಲಾಟರಿ ಮೂಲಕ ಅಲಾಟ್ ಆಗಲಿದೆ ಅಪಾರ್ಟ್ಮೆಂಟ್

|

Updated on: Jul 03, 2023 | 3:08 PM

1 Lakh Applicants for 4,000 Flats: ಮುಂಬೈನಲ್ಲಿ ಎಂಎಚ್​ಎಡಿಎ ನಿರ್ಮಿಸಿರುವ 4,000 ಅಪಾರ್ಟ್ಮೆಂಟ್​ಗಳನ್ನು ಮಾರಲಾಗುತ್ತಿದ್ದು, 1ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದಾರೆ. ಜುಲೈ 10ವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇದೆ. ಅಂತಿಮವಾಗಿ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ ಮಾಡಲಾಗುತ್ತದೆ.

Mumbai: ಮುಂಬೈನಲ್ಲಿ 4,000 ಮನೆಗಳಿಗೆ 1 ಲಕ್ಷದಷ್ಟು ಅರ್ಜಿಗಳ ಸಲ್ಲಿಕೆ; ಲಾಟರಿ ಮೂಲಕ ಅಲಾಟ್ ಆಗಲಿದೆ ಅಪಾರ್ಟ್ಮೆಂಟ್
ಅಪಾರ್ಟ್ಮೆಂಟ್
Follow us on

ಮುಂಬೈ: ಮಹಾರಾಷ್ಟ್ರ ಗೃಹ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MHADA- Maharashtra Housing and Area Development Authority) ನಿರ್ಮಿಸಿದ ವಿವಿಧ ಅಪಾರ್ಟ್ಮೆಂಟ್​ಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿವೆ. ವರದಿಗಳ ಪ್ರಕಾರ 4,000ಕ್ಕಿಂತ ತುಸು ಹೆಚ್ಚು ಸಂಖ್ಯೆಯಲ್ಲಿರುವ ಫ್ಲ್ಯಾಟ್​ಗಳಿಗೆ ಈವರೆಗೂ ಹತ್ತಿರಹತ್ತಿರ 1 ಲಕ್ಷದಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪ್ರತೀ ಫ್ಲ್ಯಾಟ್​ಗೂ 25 ಮಂದಿ ಪೈಪೋಟಿ ಬಿದ್ದಂತಾಗಿದೆ. ಜುಲೈ 10ರವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇದೆ. ಇನ್ನೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಲಾಟರಿ ಮೂಲಕ ಈ ಫ್ಯಾಟ್​​ಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗುತ್ತದೆ.

4,000 ಅಪಾರ್ಟ್ಮೆಂಟ್​ಗಳ ಬೆಲೆ 24 ಲಕ್ಷ ರೂನಿಂದ ಪ್ರಾರಂಭವಾಗಿ ಕೆಲವಾರು ಕೋಟಿಗಳವರೆಗೂ ಇದೆ. ಮುಂಬೈನಲ್ಲಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಎಂಎಚ್​ಎಡಿಎ ನಾಲ್ಕು ಭಾಗವಾಗಿ ವರ್ಗೀಕರಿಸುತ್ತದೆ. ಅದರಂತೆ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್), ಕೆಳ ಆದಾಯ ಗುಂಪು (ಎಲ್​ಐಜಿ), ಮಧ್ಯಮ ಆದಾಯ ಗುಂಪು (ಎಂಐಜಿ) ಮತ್ತು ಅಧಿಕ ಆದಾಯ ಗುಂಪು (ಎಚ್​ಐಜಿ) ಎಂದು ವಿಭಾಗಿಸಲಾಗಿದೆ. ಈಗ ಮಾರಾಟಕ್ಕಿಟ್ಟಿರುವ 4,000ದಷ್ಟು ಮನೆಗಳಲ್ಲಿ ಶೇ. 90ಕ್ಕೂ ಹೆಚ್ಚು ಮನೆಗಳು ಇಬ್ಲ್ಯೂಎಸ್ ಮತ್ತು ಎಲ್​ಐಜಿ ಗುಂಪಿಗೆ ಸೇರಿದ್ದವಾಗಿವೆ. ಅಂದರೆ ಬಹುಪಾಲು ಮನೆಗಳು 1 ಕೋಟಿ ರೂ ಒಳಗಿನದ್ದವಾಗಿವೆ. ಇಡಬ್ಲ್ಯುಎಸ್ ವರ್ಗಕ್ಕೆ 2,790; ಎಲ್​ಐಜಿ ವಿಭಾಗಕ್ಕೆ 1,034; ಎಂಐಜಿ ವರ್ಗಕ್ಕೆ 139 ಮತ್ತು ಎಚ್​ಐಜಿ ಕೆಟಗರಿಗೆ 120 ಮನೆಗಳು ಲಭ್ಯ ಇವೆ. ಇದರ ಜೊತೆಗೆ ಪಿಎಂ ಆವಾಸ್ ಯೋಜನೆ ಅಡಿ ಇಡಬ್ಲ್ಯುಎಸ್ ಕೆಟಗರಿಯವರಿಗೆ 1,947 ಅಪಾರ್ಟ್ಮೆಂಟ್​ಗಳನ್ನು ಮಾರಲಾಗುತ್ತಿದೆ.

ಇದನ್ನೂ ಓದಿPIL: 2,000 ರೂ ನೋಟು ಹಿಂಪಡೆಯುವ ಆರ್​ಬಿಐ ನಿರ್ಧಾರಕ್ಕೆ ಆಕ್ಷೇಪಣೆ; ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ವಜಾ

204 ಚದರ ಅಡಿಯ ಮನೆಯಿಂದ ಹಿಡಿದು 1,500 ಚದರ ಅಡಿ ವಿಸ್ತೀರ್ಣದವರೆಗೂ ಮನೆಗಳಿವೆ. ಮುಂಬೈನ ವಿಕ್ರೋಲಿ, ಆಂಟೋಪ್ ಹಿಲ್, ಗೋರೆಗಾಂವ್, ದಾದರ್, ವಾದಲ, ಅಂಧೇರಿ, ಕಾಂಡೀವಳಿ, ಮಲಡ್, ಬೈಕುಲ್ಲಾ, ತರದೇವ್, ಜುಹು, ಚೆಂಬೂರ್, ಪೋವೈ, ಚಾಂದಿವಲಿ ಮತ್ತು ಸಿಯೋನ್ ಪ್ರದೇಶಗಳಲ್ಲಿ ಎಂಎಚ್​ಎಡಿಎ ವಿವಿಧ ಅಪಾರ್ಟ್ಮೆಂಟ್​ಗಳನ್ನು ನಿರ್ಮಿಸಿದೆ. ಪೋವೈ ಸಮೀಪದ ಚಾಂದೀವಳಿ ಬಳಿ 204 ಚದರ ಅಡಿಯ ಒಂದು ಅಪಾರ್ಟ್ಮೆಂಟ್ ಬೆಲೆ 24.71 ಲಕ್ಷ ರೂ ಇದೆ. ಇದೇ ಈ ಬಾರಿಯ ಕನಿಷ್ಠ ಬೆಲೆಯ ಮನೆ ಎನಿಸಿದೆ. ಮುಂಬೈನ ದಕ್ಷಿಣ ಭಾಗದಲ್ಲಿರುವ ತರದೇವ್ ಬಳಿ ನಿರ್ಮಿಸಿರುವ 1,500 ಚದರ ಅಡಿ ಮನೆಗಳ ಬೆಲೆ 7.57 ಕೋಟಿ ರೂ ಇದೆ. ಇದು ಅತ್ಯಂತ ದುಬಾರಿ ಅಪಾರ್ಟ್ಮೆಂಟ್ ಎನಿಸಿದೆ.

ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಇತ್ಯಾದಿ ಮಹಾನಗರಿಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಬಹಳ ದುಬಾರಿ ಎನಿಸಿದೆ. ಬೆಂಗಳೂರಿನಲ್ಲಿ ಬಿಡಿಎ ನಿರ್ಮಿಸುವ ಲೇಔಟ್, ಅಪಾರ್ಟ್ಮೆಂಟ್​ಗಳಿಗೆ ಬಹಳ ಬೇಡಿಕೆ ಇದೆ. ಬಿಡಿಎ ನಡೆಸುವ ಇಹರಾಜಿನಲ್ಲಿ ಲಕ್ಷಾಂತರ ಮಂದಿ ಅರ್ಜಿ ಹಾಕಿ ಪಾಲ್ಗೊಳ್ಳುತ್ತಾರೆ. ಮುಂಬೈನಲ್ಲಿ ಬೆಂಗಳೂರಿಗಿಂತಲೂ ಭೂಮಿ ಬೆಲೆ ಹೆಚ್ಚು ದುಬಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ