Russian Oil: ಚೀನಾ ಕರೆನ್ಸಿ ಮೂಲಕ ರಷ್ಯಾದಿಂದ ತೈಲ ಖರೀದಿಸುತ್ತಿವೆಯಾ ಭಾರತೀಯ ಕಂಪನಿಗಳು?
Indian Cos Paying In Chinese Yuan Currency: ರುಪಾಯಿ ಕರೆನ್ಸಿಯಲ್ಲಿ ತೈಲ ಮಾರಲು ರಷ್ಯಾ ಕಂಪನಿಗಳು ಒಪ್ಪದ ಹಿನ್ನೆಲೆಯಲ್ಲಿ ಭಾರತೀಯ ತೈಲ ಕಂಪನಿಗಳು ಚೀನಾದ ಯುವಾನ್ ಕರೆನ್ಸಿ ಬಳಸುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ.
ನವದೆಹಲಿ: ಕಡಿಮೆ ಬೆಲೆಗೆ ಲಭ್ಯ ಇರುವ ರಷ್ಯಾದ ಕಚ್ಛಾ ತೈಲವನ್ನು (Russian Crude Oil) ಖರೀದಿಸುವಾಗ ಉಂಟಾದ ಕರೆನ್ಸಿ ಬಿಕ್ಕಟ್ಟಿಗೆ ಭಾರತೀಯ ಕಂಪನಿಗಳು ಪರಿಹಾರ ಕಂಡುಕೊಂಡಿವೆ. ಚೀನಾದ ಯುವಾನ್ ಕರೆನ್ಸಿ ಬಳಸಿ ರಷ್ಯಾದ ತೈಲವನ್ನು ಖರೀದಿಸಲಾಗುತ್ತಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾ ತೈಲ ಖರೀದಿಸಲು ಚೀನಾದ ಕರೆನ್ಸಿ ಬಳಸದೇ ಪರ್ಯಾಯ ಮಾರ್ಗ ಅವಲೋಕಿಸಿ ಎಂದು ಭಾರತೀಯ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿತ್ತು ಎಂಬಂತಹ ವರದಿಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ, ಚೀನಾದ ಯುವಾನ್ ಕರೆನ್ಸಿ (Chinese Yuan) ಸದ್ಯಕ್ಕೆ ರಷ್ಯಾ ತೈಲ ಖರೀದಿಗೆ ಸೂಕ್ತ ಎಂದು ಪರಿಗಣಿಸಲಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ರಷ್ಯಾ ತೈಲ ಖರೀದಿಗೆ ಕರೆನ್ಸಿ ಸಮಸ್ಯೆ ಯಾಕೆ?
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡಿದ ಪರಿಣಾಮ ಅಮೆರಿಕ ಇತ್ಯಾದಿ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿಷೇಧ ಹೇರಿವೆ. ಅಮೆರಿಕದ ಡಾಲರ್ ಕರೆನ್ಸಿಯನ್ನು ರಷ್ಯಾ ಬಳಸಲು ಆಗುವುದಿಲ್ಲ. ಆದರೆ, ವಿಶ್ವದ ಬಹುತೇಕ ವ್ಯವಹಾರಗಳು ಅಮೆರಿಕನ್ ಡಾಲರ್ನಿಂದಲೇ ನಡೆಯುತ್ತವೆ. ರಷ್ಯಾ ಆರ್ಥಿಕವಾಗಿ ಉಳಿಯಬೇಕಾದರೆ ಬೇರೆ ಪರ್ಯಾಯ ಕರೆನ್ಸಿ ಬೇಕು.
ಇದನ್ನೂ ಓದಿ: Mumbai: ಮುಂಬೈನಲ್ಲಿ 4,000 ಮನೆಗಳಿಗೆ 1 ಲಕ್ಷದಷ್ಟು ಅರ್ಜಿಗಳ ಸಲ್ಲಿಕೆ; ಲಾಟರಿ ಮೂಲಕ ಅಲಾಟ್ ಆಗಲಿದೆ ಅಪಾರ್ಟ್ಮೆಂಟ್
ಭಾರತ ಇಷ್ಟು ದಿನ ರಷ್ಯಾದೊಂದಿಗೆ ರುಪಾಯಿ ಕರೆನ್ಸಿ ಬಳಸಿ ವಹಿವಾಟು ನಡೆಸಿತ್ತು. ಆದರೆ, ರುಪಾಯಿ ಬೇರೆಲ್ಲೂ ವಹಿವಾಟು ಆಗುತ್ತಿಲ್ಲವಾದ್ದರಿಂದ ರಷ್ಯಾಗೆ ರುಪಾಯಿ ಅನಗತ್ಯ ಹೊರೆಯಾಗಿದೆ. ಭಾರತದಲ್ಲಿ ರಷ್ಯಾ ಹೂಡಿಕೆ ಯೋಜನೆಗಳಿದ್ದಿದ್ದರೆ ರುಪಾಯಿಯನ್ನು ಬಳಸಬಹುದಿತ್ತು.
ಇದೇ ವೇಳೆ, ಚೀನಾದ ಯುವಾನ್ ಕರೆನ್ಸಿ ರಷ್ಯಾಗೆ ಆಪದ್ಬಾಂಧವ ಎನಿಸಿದೆ. ವಿಶ್ವಾದ್ಯಂತ ಹಲವು ದೇಶಗಳ ಜೊತೆ ಚೀನಾ ತನ್ನ ಕರೆನ್ಸಿ ಮೂಲಕವೇ ವ್ಯವಹಾರ ನಡೆಸುತ್ತದೆ. ಹಾಗೆಯೇ, ಚೀನಾ ಮತ್ತು ರಷ್ಯಾ ಮಧ್ಯೆ ಆರ್ಥಿಕವಾಗಿ ಕೊಡು ಕೊಳ್ಳು ವ್ಯವಹಾರ ಬಹಳ ಆಳವಾಗಿದೆ. ಹೀಗಾಗಿ, ರಷ್ಯಾಗೆ ಚೀನಾದ ಯುವಾನ್ ಕರೆನ್ಸಿ ವರದಾನವಾಗಿ ಪರಿಣಮಿಸಿದೆ.
ಇದನ್ನೂ ಓದಿ: PIL: 2,000 ರೂ ನೋಟು ಹಿಂಪಡೆಯುವ ಆರ್ಬಿಐ ನಿರ್ಧಾರಕ್ಕೆ ಆಕ್ಷೇಪಣೆ; ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ ವಜಾ
ರಷ್ಯಾದಿಂದ ತೈಲ ಖರೀರಿಸಲು ಪಾಕಿಸ್ತಾನ ಕೂಡ ಚೀನಾದ ಯುವಾನ್ ಕರೆನ್ಸಿಯನ್ನು ಬಳಸುತ್ತದೆ. ಈಗ ಭಾರತೀಯ ಕಂಪನಿಗಳೂ ಕೂಡ ರಷ್ಯಾದ ತೈಲ ಖರೀದಿಗೆ ಚೀನಾದ ಯುವಾನ್ ಕರೆನ್ಸಿ ಬಳಸುತ್ತಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ಇಂಡಿಯನ್ ಆಯಿಲ್, ರಿಲಾಯನ್ಸ್ ಇತ್ಯಾದಿ ಭಾರತೀಯ ಕಂಪನಿಗಳು ಪ್ರತಿಕ್ರಿಯೆ ನೀಡಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ