ಮುಂಬೈ: ಬೆಂಗಳೂರು ಒಂದು ರೀತಿಯಲ್ಲಿ ಸ್ಟಾರ್ಟಪ್ಗಳ ನಗರಿ ಎನಿಸಿದೆ. ದೇಶದ ಬಹುತೇಕ ಸ್ಟಾರ್ಟಪ್ಗಳು ಬೆಂಗಳೂರಿನಲ್ಲೇ ಇವೆ. ಇಲ್ಲಿ ವಿವಿಧ ಕೌಶಲ್ಯಗಳಿರುವ ಜನರು ಕೆಲಸಕ್ಕೆ ಸಿಗುತ್ತಾರೆ. ಒಳ್ಳೆಯ ಹವಾಮಾನದ ಅನುಕೂಲತೆಗಳಿವೆ. ಭಾರೀ ಟ್ರಾಫಿಕ್ ಕಿರಿಕಿರಿ ಹೊರತುಪಡಿಸಿದರೆ ಬೆಂಗಳೂರು ಸರ್ವರನ್ನೂ ಆಕರ್ಷಿಸುವ ನಗರಿ. ಅಂತೆಯೇ ಕಂಪನಿಗಳ ಪ್ರಹಾಹವೇ ಬೆಂಗಳೂರಿನಲ್ಲಿದೆ. ಆದರೆ, ಮುಂಬೈನಲ್ಲಿ ಕಂಪನಿ ಸ್ಥಾಪಿಸುವ ಉದ್ಯಮಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಮುಂಬೈನಲ್ಲಿ ಬಾಡಿಗೆ ತುಸು ದುಬಾರಿಯಾದರೂ ಪರವಾಗಿಲ್ಲ, ಕಂಪನಿ ನಡೆಸಲು ಬೆಂಗಳೂರು, ಗುರುಗ್ರಾಮ್ನಂತಹ ನಗರಗಳಿಗಿಂತ ಮುಂಬೈ ಎಷ್ಟೋ ವಾಸಿ ಎಂದು ಅಲ್ಲಿನ ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ ಆಫೀಸ್ ಸ್ಥಳದ ವೆಚ್ಚವೇನೂ ಸಮಸ್ಯೆ ಅಲ್ಲ. ಬೆಂಗಳೂರಿನಲ್ಲಿ ಕಚೇರಿ ಸ್ಥಳಕ್ಕೆ ಇರುವಷ್ಟೇ ಬೆಲೆ ಮುಂಬೈನಲ್ಲೂ ಇರುವುದು. ಗುರುಗ್ರಾಂಗೆ ಹೋಲಿಸದರೆ ಆಫೀಸ್ ಸ್ಪೇಸ್ ಬೆಲೆ ಶೇ. 10ರಷ್ಟು ಹೆಚ್ಚಿರಬಹುದು. ಆದರೆ, ಉದ್ಯೋಗಿಗಳ ವಿಚಾರವನ್ನು ನೋಡಿದರೆ ಈ ಹೆಚ್ಚುವರಿ ಕಚೇರಿ ವೆಚ್ಚ ದೊಡ್ಡದೇನಲ್ಲ ಎಂದು ವಿವಿಧ ಸಿಇಒಗಳು ಹೇಳಿದ್ದಾರೆ.
ಇದನ್ನೂ ಓದಿ: MSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ
2023ರ ಟಿಐಇ ಕಾನ್ ಮುಂಬೈ (TiE Con Mumbai) ಕಾರ್ಯಕ್ರಮದಲ್ಲಿ ಅಪ್ಗ್ರಾಡ್ ಎಂಡಿ ಮಯಂಕ್ ಕುಮಾರ್, ಎರುಡಿಟಸ್ ಸಂಸ್ಥಾಪಕ ಅಶ್ವಿನ್ ದಮೇರಾ, ಹಾಪ್ಟಿಕ್ ಸಿಇಒ ಆಕೃತ್ ವೈಶ್, ಮುಂಬೈ ತಂತ್ರಜ್ಞಾನ ಉದ್ದಿಮೆದಾರರ ಸಂಘದ ಮುಖ್ಯಸ್ಥ ಶ್ರೀವತ್ಸ ಪ್ರಭಾಕರ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾ ಕಂಪನಿಗಳನ್ನು ನಡೆಸಲು ಬೆಂಗಳೂರಿಗಿಂತ ಮುಂಬೈ ಬೆಟರ್ ಎಂದಿದ್ದಾರೆ.
ಬೆಂಗಳೂರಿನಲ್ಲಿ ಅಟ್ರಿಶನ್ ರೇಟ್ ತೀರಾ ಹೆಚ್ಚಿದೆ. ಅಂದರೆ ಉದ್ಯೋಗಿಗಳು ಬಿಟ್ಟುಹೋಗುವ ಪ್ರಮಾಣ ಬಹಳ ಹೆಚ್ಚು. ಆದರೆ, ಮುಂಬೈನಲ್ಲಿ ಅಟ್ರಿಶನ್ ರೇಟ್ ಬಹಳ ಕಡಿಮೆ. ಇಲ್ಲಿಯ ಕಂಪನಿಗಳು ಬಹಳ ವ್ಯವಸ್ಥಿತವಾಗಿರುತ್ತವೆ. ಬೆಂಗಳೂರಿನಂಥ ನಗರಗಳಿಗೆ ಹೋದರೆ ಅಲ್ಲಿಯ ಟೀಸ್ಟಾಲ್ಗಳಲ್ಲಿ ಉದ್ಯೋಗಿಗಳನ್ನು ಸೆಳೆಯಲು ಐದಾರು ರೆಕ್ರೂಟರುಗಳು ಕಾಯುತ್ತಿರುತ್ತಾರೆ ಎಂದು ಈ ಚರ್ಚೆಯಲ್ಲಿ ಒಬ್ಬರು ತಮಾಷೆ ಮಾಡಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ಇರುವ ಸ್ಟಾರ್ಟಪ್ಗಳು ಹೆಚ್ಚು ಸುಲಭವಾಗಿ ಬಂಡವಾಳ ಸೆಳೆಯುತ್ತವೆ ಎಂಬ ಅಭಿಪ್ರಾಯವನ್ನೂ ಮುಂಬೈನ ಸಿಇಒಗಳು ತಳ್ಳಿಹಾಕಿದ್ದಾರೆ. ಬಂಡವಾಳ ಕಲೆಹಾಕಲು ಬೆಂಗಳೂರಲ್ಲೇ ಇರಬೇಕೆಂದು ಹೇಳುವುದು ತಪ್ಪು. ಅದರ ಅಗತ್ಯ ಇಲ್ಲ ಎಂದೊಬ್ಬರು ಹೇಳಿದ್ದಾರೆ.