ಅಮೆರಿಕದಲ್ಲಿ ಟಾಪ್ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ; ಭಾರತದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ವಿವರಣೆ

|

Updated on: Sep 23, 2024 | 10:49 AM

Narendra Modi meets top US tec CEOs: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ನ್ಯೂಯಾರ್ಕ್​ನಲ್ಲಿ ಅಮೆರಿಕನ್ ಟೆಕ್ ಸೆಕ್ಟರ್ ಕಂಪನಿಗಳ 15 ಸಿಇಒಗಳೊಂದಿಗೆ ಸಭೆ ನಡೆಸಿದರು. ಬೆಳೆಯುತ್ತಿರುವ ಮಾರುಕಟ್ಟೆ, ಪ್ರತಿಭಾನ್ವಿತ ಸಂಪನ್ಮೂಲಗಳ ಲಭ್ಯತೆ ಮತ್ತು ಪ್ರಜಾತಾಂತ್ರಿಕ ಚೌಕಟ್ಟು ಈ ಮೂರು ಸಮ್ಮಿಶ್ರಣ ಇರುವ ಅಪೂರ್ವ ವಾತಾವರಣ ಭಾರತದ್ದಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಟಾಪ್ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ; ಭಾರತದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ವಿವರಣೆ
ನರೇಂದ್ರ ಮೋದಿ
Follow us on

ನ್ಯೂಯಾರ್ಕ್, ಸೆಪ್ಟೆಂಬರ್ 23: ಸೆಮಿಕಂಡಕ್ಟರ್ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಹೆಜ್ಜೆಗಳನ್ನು ಇರಿಸುತ್ತಿದೆ. ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬೆಳವಣಿಗೆ ಬಗ್ಗೆ ಅಲ್ಲಿನ ಸಿಇಒಗಳೊಂದಿಗೆ ಚರ್ಚೆ ನಡೆಸಿದರು. ನ್ಯೂಯಾರ್ಕ್​ನಲ್ಲಿ ಅಮೆರಿಕದ ಅಗ್ರಗಣ್ಯ 15 ಟೆಕ್ ಕಂಪನಿಗಳ ಸಿಇಒಗಳ ಸಭೆ ನಡೆಸಿದ ಮೋದಿ, ನವೀನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ತಿಳಿಸಿದರು. ಹಾಗೆಯೇ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಗ್ಲೋಬಲ್ ಪಾರ್ಟ್ನರ್ ಆಗುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿಗಳು ನಿವೇದಿಸಿದರು.

ಲಾಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್​ನಲ್ಲಿ ಮೋದಿ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡ 15 ಸಿಇಒಗಳಲ್ಲಿ ಗೂಗಲ್​ನ ಸುಂದರ್ ಪಿಚೈ, ನಿವಿಡಿಯಾದ ಜೆನ್ಸೆನ್ ಹುವಾಂಗ್ ಕೂಡ ಇದ್ದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ವಾಂಟಂ ಟೆಕ್ನಾಲಜಿ, ಬಯೋಟೆಕ್ನಾಲಜಿ, ಲೈಫ್ ಸೈನ್ಸ್, ಐಟಿ ಮತ್ತು ಕಮ್ಯುನಿಕೇಶನ್ಸ್, ಸೆಮಿಕಂಡ್ಟರ್ ಟೆಕ್ನಾಲಜಿ ಮೊದಲದ ಪ್ರಮುಖ ಕ್ಷೇತ್ರಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳಾದವು. ನರೇಂದ್ರ ಮೋದಿ ಸೆಮಿಕಂಡಕ್ಟರ್ ವಲಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದರು.

ಇದನ್ನೂ ಓದಿ: PM Modi US Visit: ಕ್ವಾಡ್ ಶೃಂಗಸಭೆಗಾಗಿ ಅಮೆರಿಕದ ಫಿಲಡೆಲ್ಫಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

‘ಸೆಮಿಕಂಡಕ್ಟರ್ ಮತ್ತು ಚಿಪ್ ತಯಾರಿಕೆ ಬಗ್ಗೆ ನಾವು ರೂಪಿಸಿದ ನೀತಿಗೆ ಭಾರತದಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಕ್ಷೇತ್ರದಲ್ಲಿರುವವರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿದ್ದಾರೆ. ಭಾರತದಲ್ಲಿ ಚಿಪ್ ಡಿಸೈನ್​ಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಜಾಗತಿಕ ಸೆಮಿಕಂಡಕ್ಟರ್​ನ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತವೂ ಪ್ರಮುಖ ಭಾಗವಾಗಬಲ್ಲುದು’ ಎಂದು ನರೇಂದ್ರ ಮೋದಿ ಹೇಳಿದರು.

ಭಾರತದಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಬೆಳೆಯುತ್ತಿರುವ ಮಾರುಕಟ್ಟೆ ಇದೆ. ಪ್ರಜಾತಾಂತ್ರಿಕ ಚೌಕಟ್ಟು ಇದೆ. ಈ ಮೂರು ಸಂಯೋಜನೆಯ ವಾತಾವರಣ ಹೊಂದಿರುವ ಭಾರತವು ಹೂಡಿಕೆದಾರರಿಗೆ ಅಪೂರ್ವ ಅವಕಾಶ ಒದಗಿಸುತ್ತದೆ ಎಂದು ಭಾರತದ ಪ್ರಧಾನಿ ಅಭಿಪ್ರಾಯಪಟ್ಟರು.

‘ನೀವೆಲ್ಲಾ ಭಾರತ ಹಾಗೂ ಇತರ ಜಾಗತಿಕ ಪಾಲುದಾರರ ಜೊತೆ ಕೆಲಸ ಮಾಡಿದ್ದೀರಿ. ಭಾರತ ಹಾಗೂ ಇತರ ದೇಶಗಳನ್ನು ನೀವು ಹೋಲಿಕೆ ಮಾಡಿ ನೋಡಬಹುದು… ಯಾವುದೇ ದೇಶವಾದರೂ ರಾಜಕೀಯ ಸ್ಥಿರತೆ ಬಹಳ ಮುಖ್ಯ. ಈ ವಿಚಾರದಲ್ಲಿ ಭಾರತ ಮೇಲುಗೈ ಹೊಂದಿದೆ,’ ಎಂದು ಮೋದಿ ಈ ಟೆಕ್ ಸಿಇಒಗಳ ಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು: ಪ್ರಧಾನಿ ಮೋದಿ

ಕಳೆದ ವರ್ಷ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ವೇಳೆ ವಾಷಿಂಗ್ಟನ್​ನಲ್ಲಿ ಟೆಕ್ನಾಲಜಿ ಕಂಪನಿಗಳ ಸಿಇಒಗಳ ಸಭೆ ನಡೆಸಿದ್ದರು. ಈ ವರ್ಷ ನಿನ್ನೆಯಿಂದ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸ ಆರಂಭಿಸಿದ್ದಾರೆ. ನಾಳೆ (ಸೆ 24) ಅಲ್ಲಿಂದ ಮರಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ