Layoffs: ನ್ಯಾಷನಲ್ ಜಿಯೋಗ್ರಾಫಿಕ್​ನ ಎಲ್ಲಾ ಸಿಬ್ಬಂದಿಯೂ ಲೇ ಆಫ್; ಬಂದ್ ಆಗುತ್ತಾ ಪ್ರತಿಷ್ಠಿತ ಪತ್ರಿಕೆ?

|

Updated on: Jun 29, 2023 | 5:27 PM

National Geographic Magazine: ವಿಶ್ವಖ್ಯಾತಿಯ ನ್ಯಾಷನಲ್ ಜಿಯೋಗ್ರಾಫಿಕ್ ನಿಯತಕಾಲಿಕೆಯಲ್ಲಿ ಎಲ್ಲರೂ ಕೆಲಸ ಕಳೆದುಕೊಂಡಿದ್ದಾರೆ. ನಾಲ್ಕನೇ ಬಾರಿ ನಡೆದ ಲೇ ಆಫ್​ನಲ್ಲಿ 19 ಮಂದಿ ಎಡಿಟೋರಿಯಲ್ ಸ್ಟ್ಯಾಫ್ ಅನ್ನು ಲೇ ಆಫ್ ಮಾಡಲಾಗಿದೆ.

Layoffs: ನ್ಯಾಷನಲ್ ಜಿಯೋಗ್ರಾಫಿಕ್​ನ ಎಲ್ಲಾ ಸಿಬ್ಬಂದಿಯೂ ಲೇ ಆಫ್; ಬಂದ್ ಆಗುತ್ತಾ ಪ್ರತಿಷ್ಠಿತ ಪತ್ರಿಕೆ?
ನ್ಯಾಷನಲ್ ಜಿಯೋಗ್ರಾಫಿಕ್
Follow us on

ವಾಷಿಂಗ್ಟನ್: ಅಮೆರಿಕದ ಜಗದ್ವಿಖ್ಯಾತಿಯ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಝಿನ್ (National Geographic Magazine) ತನ್ನ ಅಳಿದುಳಿದ ಎಲ್ಲಾ ಸಿಬ್ಬಂದಿಯನ್ನೂ ಲೇ ಆಫ್ (Layoffs) ಮಾಡಿರುವುದು ಬೆಳಕಿಗೆ ಬಂದಿದೆ. ಪತ್ರಿಕೆಯಲ್ಲಿ 19 ಎಡಿಟೋರಿಯಲ್ ಸ್ಟಾಫ್ ಉಳಿದಿದ್ದರು. ಎಲ್ಲರನ್ನೂ ಕೆಲಸದಿಂದ ತೆಗೆಯಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಈ ವರದಿ ಪ್ರಕಾರ ಮುಂದಿನ ವರ್ಷ, ಅಂದರೆ 2024ರಲ್ಲಿ ಮ್ಯಾಗಝಿನ್ ಮುಚ್ಚಲಿದೆ. ಅದರ ಮುದ್ರಣ ನಿಂತುಹೋಗಲಿದೆ. ಅಲ್ಲಿಯವರೆಗೆ ಫ್ರೀಲ್ಯಾನ್ಸ್ ಬರಹಗಾರರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ವಾಷಿಂಗ್ಟನ್​ನಲ್ಲಿ ಮುಖ್ಯಕಚೇರಿ ಹೊಂದಿರುವ ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಯಲ್ಲಿ ಲೇ ಆಫ್ ಪ್ರಕ್ರಿಯೆ 2015ರಿಂದಲೇ ನಡೆಯುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಲೇ ಆಫ್ ಆಗಿದೆ. 9 ತಿಂಗಳ ಹಿಂದೆ 3ನೇ ಲೇ ಆಫ್ ಆಗಿತ್ತು. ಇದೇ ಏಪ್ರಿಲ್ ತಿಂಗಳಲ್ಲಿ ಉಳಿದ ಉದ್ಯೋಗಿಗಳಿಗೆ ಕೆಲಸ ಹೋಗುವ ಬಗ್ಗೆ ಎಚ್ಚರಿಸಲಾಗಿತ್ತೆನ್ನಲಾಗಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆ ಮುಚ್ಚಲು ಕಾರಣ ಏನೆಂದು ಸ್ಪಷ್ಟವಾಗಿಲ್ಲ. ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿರುವುದು ತಿಳಿದುಬಂದಿದೆ. 19ನೇ ಶತಮಾನದಲ್ಲಿ ಆರಂಭಗೊಂಡಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. 2022ರ ಡಿಸೆಂಬರ್ ತಿಂಗಳ ಮಾಹಿತಿ ಪ್ರಕಾರ 1.8 ಕೋಟಿ ಪ್ರತಿಗಳು ಮುದ್ರಣಗೊಳ್ಳುತ್ತವೆ. ಅದರ ಇನ್ಸ್​ಟಾಗ್ರಾಂ ಅಕೌಂಟ್​ಗೆ 24 ಕೋಟಿಗೂ ಹೆಚ್ಚು ಮಂದಿ ಫಾಲೋಯರ್ಸ್ ಇದ್ದಾರೆ.

ಇದನ್ನೂ ಓದಿ: Alexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ

ದೂರವಾಣಿ ಕಂಡುಹಿಡಿದ ವಿಜ್ಞಾನಿ ಗ್ರಹಾಂ ಬೆಲ್ ಸೇರಿದಂತೆ 33 ವಿವಿಧ ವಿಜ್ಞಾನಿಗಳು, ಶಿಕ್ಷಣತಜ್ಞರು, ಸಾಹಸಿಗಳು ಸೇರಿ 1880ರ ದಶಕದಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಿಸಿದ್ದರು. ಈ ಸೊಸೈಟಿಯ ಸದಸ್ಯರಿಗೆಂದು ಮ್ಯಾಗಝಿನ್ ಆರಂಭಿಸಲಾಯಿತು. ಆದರೆ, ದಿನೇ ದಿನೇ ಇದರ ಜನಪ್ರಿಯತೆ ಹೆಚ್ಚುತ್ತಾ ಸೊಸೈಟಿಯಾಚೆ ಇದರ ಸರ್ಕ್ಯುಲೇಶನ್ ವಿಸ್ತರಣೆ ಆಯಿತು. 1930ರ ದಶಕದಷ್ಟರಲ್ಲಿ ಚಂದಾದಾರರ ಸಂಖ್ಯೆ 10 ಲಕ್ಷ ಮುಟ್ಟಿತು.

2015ರಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಮತ್ತು ಟ್ವೆಂಟಿ ಫಸ್ಟ್ ಸೆಂಚುರಿ ಫಾಕ್ಸ್ ಕಂಪನಿ ಜೊತೆಯಾದವು. 2019ರಲ್ಲಿ ಸೆಂಚುರಿ ಫಾಕ್ಸ್ ಮತ್ತು ಡಿಸ್ನಿ ಮಧ್ಯೆ ಒಪ್ಪಂದವಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ