
ನವದೆಹಲಿ, ಜೂನ್ 18: ಭಾರತದ ಷೇರು ಮಾರುಕಟ್ಟೆ (Indian Stock Market) ಇತಿಹಾಸದಲ್ಲೆ ಅತಿದೊಡ್ಡ ಐಪಿಒ ಆಗಮಿಸುತ್ತಿದೆ. ಸುಮಾರು ಒಂದು ದಶಕದ ಸುದೀರ್ಘ ಕಾಯುವಿಕೆ ಮತ್ತು ಕಾನೂನು ಪ್ರಕ್ರಿಯೆಗಳ ನಂತರ, ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ತನ್ನ ಐಪಿಒನತ್ತ ಪ್ರಮುಖ ಹೆಜ್ಜೆ ಹಾಕಿದೆ. ಐಪಿಒಗಾಗಿ (IPO) ಸೆಬಿಗೆ ಪ್ರಾಥಮಿಕ ದಾಖಲೆಗಳನ್ನು (DRHP) ಸಲ್ಲಿಸಿದೆ. ಈ ಮೂಲಕ ಎನ್‌ಎಸ್‌ಇ ಪಬ್ಲಿಕ್ ಲಿಸ್ಟಿಂಗ್ ಆಗುವ ದಾರಿ ಸುಗಮವಾಗಿದೆ. ಹೂಡಿಕೆದಾರರು ಈ ಮೆಗಾ-ಐಪಿಒನಲ್ಲಿ ಹಣ ಹೂಡುವ ಮುನ್ನ ತಿಳಿದುಕೊಂಡಿರಬೇಕಾದ 5 ಪ್ರಮುಖ ವಿಷಯಗಳು ಇಲ್ಲಿವೆ:
ಈ ಐಪಿಒನ ದೊಡ್ಡ ವೈಶಿಷ್ಟ್ಯವೆಂದರೆ ಕಂಪನಿಯು ಯಾವುದೇ ಹೊಸ ಷೇರುಗಳನ್ನು (Fresh Issue) ಬಿಡುಗಡೆ ಮಾಡುತ್ತಿಲ್ಲ. ಇದು ಸಂಪೂರ್ಣವಾಗಿ ಆಫರ್ ಫಾರ್ ಸೇಲ್ (Offer for Sale – OFS) ಆಗಿದೆ. ಅಂದರೆ ಎನ್‌ಎಸ್‌ಇಯ ಪ್ರಸ್ತುತ ಷೇರುದಾರರು ತಮ್ಮ ಬಳಿ ಇರುವ ಸುಮಾರು 14.89 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬರುವ ಸಂಪೂರ್ಣ ಹಣವು ಷೇರು ಮಾರಾಟ ಮಾಡುವ ಹೂಡಿಕೆದಾರರಿಗೆ ಹೋಗುತ್ತದೆಯೇ ವಿನಃ ಎನ್‌ಎಸ್‌ಇ ಕಂಪನಿಗೆ ಯಾವುದೇ ಹೊಸ ಫಂಡ್ ಸಿಗುವುದಿಲ್ಲ.
ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ
ಒಎಫ್‌ಎಸ್ (OFS) ಮೂಲಕ ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ವಿದೇಶಿ ಹೂಡಿಕೆ ಸಂಸ್ಥೆಗಳು ತಮ್ಮ ಪಾಲನ್ನು ಮಾರಾಟ ಮಾಡುತ್ತಿವೆ. ಇದರಲ್ಲಿ ಪ್ರಮುಖವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಹಲವು ದೊಡ್ಡ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಮಾರುಕಟ್ಟೆಯು ಎನ್‌ಎಸ್‌ಇ ಐಪಿಒಗಾಗಿ ಕಾಯುತ್ತಿತ್ತು. ವಿವಿಧ ತಾಂತ್ರಿಕ ಮತ್ತು ಕಾನೂನು ಅಡಚಣೆಗಳಿಂದಾಗಿ ಇದು ವಿಳಂಬವಾಗಿತ್ತು. ಈಗ ಜೂನ್ 17 ರಂದು ಡಿಆರ್‌ಎಚ್‌ಪಿ (DRHP) ಸಲ್ಲಿಸಿರುವುದು ಭಾರತೀಯ ಮಾರುಕಟ್ಟೆಯ ಇತಿಹಾಸದಲ್ಲೇ ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ.
ಎನ್‌ಎಸ್‌ಇ ಪ್ರಸ್ತುತ ಪ್ರಾಥಮಿಕ ದಾಖಲೆಗಳನ್ನು ಮಾತ್ರ ಸಲ್ಲಿಸಿದೆ. ಇನ್ನು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಇದನ್ನು ಪರಿಶೀಲಿಸಿ, ಅನುಮೋದನೆ ನೀಡಬೇಕಾಗಿದೆ. ಸೆಬಿ ಗ್ರೀನ್ ಸಿಗ್ನಲ್ ನೀಡಿದ ನಂತರವಷ್ಟೇ ಐಪಿಒ ಲಾಂಚ್ ಆಗುವ ಅಂತಿಮ ದಿನಾಂಕಗಳು ಮತ್ತು ಪ್ರೈಸ್ ಬ್ಯಾಂಡ್ (Price Band) ಪ್ರಕಟವಾಗಲಿವೆ.
ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ
ಭಾರತದ ಅತಿ ದೊಡ್ಡ ಎಕ್ಸ್‌ಚೇಂಜ್ ಮಾರುಕಟ್ಟೆಗೆ ಲಿಸ್ಟ್ ಆಗುತ್ತಿರುವುದರಿಂದ, ಇದು ಇಡೀ ಶೇರು ಮಾರುಕಟ್ಟೆಯ ಮೇಲೆ ಮತ್ತು ಹೂಡಿಕೆದಾರರ ವಲಯದಲ್ಲಿ ಭಾರಿ ಸಂಚಲನ ಮೂಡಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ಮತ್ತೊಂದು ಸ್ಟಾಕ್ ಎಕ್ಸ್‌ಚೇಂಜ್ ಆಗಿರುವ ಮತ್ತು ಭಾರತದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್‌ಚೇಂಜ್ ಆಗಿರುವ ಬಿಎಸ್ಇ 2017ರಲ್ಲೇ ಐಪಿಒ ಮುಗಿಸಿ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಕಳೆದ 9 ವರ್ಷದಲ್ಲಿ ಬಿಎಸ್ಇ ಷೇರುಬೆಲೆ 300 ಪಟ್ಟು ಹೆಚ್ಚು ಲಾಭ ತಂದಿದೆ. ಎನ್‌ಎಸ್‌ಇ ಕೂಡ ಹೂಡಿಕೆದಾರರಿಗೆ ಭರ್ಜರಿ ಲಾಭ ತರುವ ನಿರೀಕ್ಷೆಯಂತೂ ಇದೆ.
(ಗಮನಿಸಿ: ಹೂಡಿಕೆ ಮಾಡುವ ಮುನ್ನ ಕಂಪನಿಯ ಸಂಪೂರ್ಣ ಆರ್ಥಿಕ ಸ್ಥಿತಿಗತಿ ಹಾಗೂ ಮಾರುಕಟ್ಟೆಯ ಅಪಾಯಗಳನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ