ನಾಲ್ಕು ವರ್ಷದಲ್ಲಿ ನೊಂದಣಿಯಾದ 2.76 ಕೋಟಿ ಎಂಎಸ್​ಎಂಇಗಳಲ್ಲಿ ಬಂದ್ ಆಗಿದ್ದೆಷ್ಟು? ಕೆಲಸ ಕಳೆದುಕೊಂಡವರೆಷ್ಟು? ಇಲ್ಲಿದೆ ವರದಿ

|

Updated on: Jul 28, 2024 | 6:50 PM

Data of MSMEs registered on Udyam Portal: 2020ರ ಜುಲೈ 1ರಿಂದ ಆರಂಭವಾದ ಉದ್ಯಮ್ ಪೋರ್ಟಲ್​ನಲ್ಲಿ ಈವರೆಗೆ 2.76 ಕೋಟಿ ಎಂಎಸ್​ಎಂಇಗಳು ನೊಂದಣಿಯಾಗಿವೆ. ಈ ಪೈಕಿ 49,342 ಎಂಎಸ್​ಎಂಇಗಳು ಬೇರೆ ಬೇರೆ ಕಾರಣಕ್ಕೆ ಪೋರ್ಟಲ್ ನೊಂದಣಿಯಿಂದ ಹೊರಬಿದ್ದಿವೆ. ಈ ನೊಂದಾಯಿತ ಎಂಎಸ್​ಎಂಇಗಳಿಂದ 20 ಕೋಟಿ ಮಂದಿಗೆ ಉದ್ಯೋಗ ಸಿಕ್ಕಿದೆ. 3 ಲಕ್ಷಕ್ಕಿಂತ ತುಸು ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ನಾಲ್ಕು ವರ್ಷದಲ್ಲಿ ನೊಂದಣಿಯಾದ 2.76 ಕೋಟಿ ಎಂಎಸ್​ಎಂಇಗಳಲ್ಲಿ ಬಂದ್ ಆಗಿದ್ದೆಷ್ಟು? ಕೆಲಸ ಕಳೆದುಕೊಂಡವರೆಷ್ಟು? ಇಲ್ಲಿದೆ ವರದಿ
ಎಂಎಸ್​ಎಂಇ
Follow us on

ನವದೆಹಲಿ, ಜುಲೈ 28: ಉದ್ಯಮ್ ಪೋರ್ಟಲ್​ನಲ್ಲಿ ನೊಂದಣಿಯಾದ ಎಂಎಸ್​ಎಂಇ ಸಂಸ್ಥೆಗಳಲ್ಲಿ ಬಾಗಿಲು ಮುಚ್ಚಿನ ಉದ್ದಿಮೆಗಳ ಸಂಖ್ಯೆ 50,000 ಸಮೀಪದಷ್ಟಿದೆ. ನಾಲ್ಕು ವರ್ಷದಲ್ಲಿ 49,342 ಎಂಎಸ್​ಎಂಇಗಳು ಬಂದ್ ಆಗಿವೆ. 2020ರ ಜುಲೈ 1ರಂದು ಎಂಎಸ್​ಎಂಇಗಳ ನೊಂದಣಿಗಾಗಿ ಉದ್ಯಮ್ ಪೋರ್ಟಲ್ ಆರಂಭವಾಗಿತ್ತು. ಆ ಪೋರ್ಟಲ್​ನಲ್ಲಿ ಇದೂವರೆಗೆ 2.76 ಕೋಟಿ ಎಂಎಸ್​ಎಂಇಗಳು ನೊಂದಣಿಯಾಗಿವೆ. ಈ ಪೈಕಿ ಶೇ. 0.18ರಷ್ಟು ಉದ್ದಿಮೆಗಳು ಬಾಗಿಲು ಮುಚ್ಚಿವೆ. ಅಂದರೆ ಪ್ರತೀ 10,000 ಎಂಎಸ್​ಎಂಇಗಳಲ್ಲಿ ಬಂದ್ ಆಗಿರುವಂಥವು 17-18 ಮಾತ್ರ ಮಾತ್ರ. ಈ ಅಂಕಿ ಅಂಶವನ್ನು ಎಂಎಸ್​ಎಂಇ ಸಚಿವ ಜಿತನ್ ರಾಮ್ ಮಾಂಝಿ ಮೊನ್ನೆ ಲೋಕಸಭೆ ಪ್ರಶ್ನೋತರ ವೇಳೆ ಪ್ರಸ್ತುಪಡಿಸಿದ್ದಾರೆ.

ಮೂರು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗನಷ್ಟ

49,342 ಸಣ್ಣ ಉದ್ದಿಮೆಗಳು ಉದ್ಯಮ್ ಪೋರ್ಟಲ್ ನೊಂದಣಿಯಿಂದ ಹೊರಲು ಅಥವಾ ಬಾಗಿಲು ಮುಚ್ಚಲು ವಿವಿಧ ಕಾರಣಗಳನ್ನು ನೀಡಲಾಗಿದೆ. ವ್ಯವಹಾರ ನಷ್ಟ ಕಾರಣ ಮಾತ್ರವಲ್ಲದೆ, ಕಂಪನಿ ಮಾಲೀಕರ ಹೆಸರು ಬದಲಾವಣೆ, ನಕಲು ನೊಂದಣಿ ಮತ್ತಿತರ ಕಾರಣಗಳಿಗೂ ಉದ್ಯಮ್ ಪೋರ್ಟಲ್​ನಿಂದ ಎಂಎಸ್​ಎಂಇಗಳ ನೊಂದಣಿ ರದ್ದುಗೊಂಡಿವೆ.

ಇದನ್ನೂ ಓದಿ: ದೇಶ ಬಿಟ್ಟುಹೋಗುವವರಿಗೆ ಟ್ಯಾಕ್ಸ್ ಕ್ಲಿಯರೆನ್ಸ್ ನಿಯಮ; ಇದು ಎಲ್ಲರಿಗೂ ಕಡ್ಡಾಯವಲ್ಲ ಎಂದ ಸಿಬಿಡಿಟಿ

ಉದ್ಯಮ್ ಪೋರ್ಟಲ್​ನಲ್ಲಿ ನೊಂದಾಯಿತವಾಗಿರುವ ಸಣ್ಣ ಉದ್ದಿಮೆಗಳು ಸೃಷ್ಟಿ ಮಾಡಿರುವ ಉದ್ಯೋಗಗಳ ಸಂಖ್ಯೆ 20 ಕೋಟಿ ಮೈಲಿಗಲ್ಲು ದಾಟಿದೆ. 4.77 ಕೋಟಿ ಸಣ್ಣ ಉದ್ದಿಮೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಪ್ರಸಕ್ತ 20.61 ಕೋಟಿ ಇದೆ ಎನ್ನಲಾಗಿದೆ.

ನಾಲ್ಕು ವರ್ಷಗಳಿಂದ 49,432 ಎಂಎಸ್​ಎಂಇಗಳು ಬಂದ್ ಆಗಿರುವುದರಿಂದ ಕೆಲಸ ಕಳೆದುಕೊಂಡವರ ಸಂಖ್ಯೆ 3,17,641 ಇದೆ. ಒಟ್ಟು ಉದ್ಯೋಗಸೃಷ್ಟಿಯಲ್ಲಿ ಉದ್ಯೋಗನಷ್ಟದ ಪ್ರಮಾಣ ಶೇ. 0.15 ಮಾತ್ರ ಇರುವುದು ಗೊತ್ತಾಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಎಂಎಸ್​ಎಂಇಗಳ ಸ್ಥಗಿತ

ನಾಲ್ಕು ವರ್ಷದಲ್ಲಿ ಬಾಗಿಲು ಬಂದ್ ಆಗಿರುವ ಉದ್ಯಮ್ ನೊಂದಾಯಿತ 49,432 ಸಣ್ಣ ಉದ್ದಿಮೆಗಳ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 12,233 ಘಟಕಗಳು ಮುಚ್ಚಿವೆ. ರಾಜ್ಯಗಳ ಪೈಕಿ ಇದು ಗರಿಷ್ಠ. ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ನಂತರದ ಸ್ಥಾನ ಪಡೆದಿವೆ. ಈ ರಾಜ್ಯಗಳಲ್ಲಿ ಕ್ರಮವಾಗಿ 6,298 ಘಟಕಗಳು, 4,861 ಘಟಕಗಳು,ಮತ್ತು 3,857 ಘಟಕಗಳು ಬಂದ್ ಆಗಿವೆ.

ಇದನ್ನೂ ಓದಿ: ವಿಜಯ್​​​ ಮಲ್ಯಗೆ ಬಿಗ್​​ ಶಾಕ್​ ನೀಡಿದ ಸೆಬಿ, ಸೆಕ್ಯುರಿಟೀಸ್ ಮಾರುಕಟ್ಟೆಯಿಂದ 3 ವರ್ಷಗಳ ಕಾಲ ನಿಷೇಧ

2022-23ರ ಹಣಕಾಸು ವರ್ಷದಲ್ಲಿ ಹೆಚ್ಚು ಎಂಎಸ್​ಎಂಇಗಳು ಬಂದ್ ಆಗಿರುವುದೂ ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ