Tax: ಭಾರತದಲ್ಲಿ ಈ ವರ್ಷ ನೇರ ತೆರಿಗೆ ಸಂಗ್ರಹ 14.70 ಲಕ್ಷ ಕೋಟಿ ರೂ; ನಿರೀಕ್ಷೆಮೀರಿ ಹೆಚ್ಚಿದ ಟ್ಯಾಕ್ಸ್ ಕಲೆಕ್ಷನ್

|

Updated on: Jan 12, 2024 | 10:18 AM

Net Direct Tax Collections: ಭಾರತದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. 2023ರ ಏಪ್ರಿಲ್ 1ರಿಂದ 2024ರ ಜನವರಿ 10ರವರೆಗೆ 14.70 ಲಕ್ಷ ಕೋಟಿ ರೂನಷ್ಟು ನಿವ್ವಳ ನೇರ ತೆರಿಗೆ ಕಲೆಕ್ಷನ್ ಆಗಿತ್ತು. ಕಳೆದ ಬಜೆಟ್​ನಲ್ಲಿ 18.23 ಲಕ್ಷ ಕೋಟಿ ರೂ ನೇರ ತೆರಿಗೆ ಸಂಗ್ರಹದ ಗುರಿ ಇತ್ತು. ಆ ಗುರಿಯನ್ನು ಈಗಾಗಲೇ ಶೇ. 81ರಷ್ಟು ದಾಟಲಾಗಿದೆ.

Tax: ಭಾರತದಲ್ಲಿ ಈ ವರ್ಷ ನೇರ ತೆರಿಗೆ ಸಂಗ್ರಹ 14.70 ಲಕ್ಷ ಕೋಟಿ ರೂ; ನಿರೀಕ್ಷೆಮೀರಿ ಹೆಚ್ಚಿದ ಟ್ಯಾಕ್ಸ್ ಕಲೆಕ್ಷನ್
ನೇರ ತೆರಿಗೆ
Follow us on

ನವದೆಹಲಿ, ಜನವರಿ 12: ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ಭಾರತದಲ್ಲಿ ನೇರ ತೆರಿಗೆ ಸಂಗ್ರಹ (Net Direct Tax Collection) 14.70 ಲಕ್ಷ ಕೋಟಿ ರೂನಷ್ಟಾಗಿದೆ ಎಂದು ಆದಾಯ ತೆರಿಗೆ ಇಲಾಖೆ ನಿನ್ನೆ (ಜ. 11) ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದೆ. ಇದು ಏಪ್ರಿಲ್ 1ರಿಂದ ಜನವರಿ 10ರವರೆಗೆ ಆಗಿರುವ ತೆರಿಗೆ ಸಂಗ್ರಹ. ಹಣಕಾಸು ವರ್ಷ ಮುಗಿಯಲು ಇನ್ನೂ 2-3 ತಿಂಗಳು ಬಾಕಿ ಇದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ಆದುದಕ್ಕಿಂತ ತೆರಿಗೆ ಸಂಗ್ರಹ ಶೇ. 19.41ರಷ್ಟು ಹೆಚ್ಚಾಗಿರುವುದು ಗಮನಾರ್ಹ.

ಕಳೆದ ಹಣಕಾಸು ವರ್ಷದಲ್ಲಿ (2022-23) ಒಟ್ಟು 16.61 ಲಕ್ಷ ಕೋಟಿ ರೂನಷ್ಟು ಡೈರೆಕ್ಟ್ ಟ್ಯಾಕ್ಸ್ ಸಂಗ್ರಹವಾಗಿತ್ತು. 2023-24ಕ್ಕೆ ತೆರಿಗೆ ಸಂಗ್ರಹ 18.23 ಲಕ್ಷ ಕೋಟಿ ರೂ ಆಗಬೇಕು ಎಂದು ಕಳೆದ ಬಾರಿಯ ಬಜೆಟ್​ನಲ್ಲಿ ಗುರಿ ಇಡಲಾಗಿತ್ತು. ಇನ್ನೂ 2-3 ತಿಂಗಳು ಬಾಕಿ ಇರುವಂತೆಯೇ 14.70 ಲಕ್ಷ ಕೋಟಿ ರೂನಷ್ಟು ತೆರಿಗೆ ಸಂಗ್ರಹವಾಗಿದೆ. ಆಗಲೇ ಬಜೆಟ್ ಎಸ್ಟಿಮೇಟ್​ನ ಶೇ. 81ರಷ್ಟು ಮಟ್ಟವನ್ನು ಮುಟ್ಟಿದೆ.

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

‘ರೀಫಂಡ್​ಗಳನ್ನು ಕೊಟ್ಟು ಉಳಿದ ನಿವ್ವಳ ನೇರ ತೆರಿಗೆ ಸಂಗ್ರಹ 14.70 ಲಕ್ಷ ಕೋಟಿ ರೂ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ನಿವ್ವಳ ತೆರಿಗೆ ಸಂಗ್ರಹಕ್ಕಿಂತ ಶೇ. 19.41ರಷ್ಟು ಹೆಚ್ಚಿದೆ. 2023-24ರ ಹಣಕಾಸು ವರ್ಷಕ್ಕೆ ಬಜೆಟ್​ನಲ್ಲಿ ಇಡಲಾಗಿದ್ದ ಗುರಿಯಲ್ಲಿ ಶೇ. 80.61ರಷ್ಟಿದೆ,’ ಎಂದು ಆದಾಯ ತೆರಿಗೆ ಇಲಾಖೆಗೆ ಸೇರಿದ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಜನವರಿ 11ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

2023ರ ಏಪ್ರಿಲ್ 1ರಿಂದ 2024ರ ಜನವರಿ 10ರವರೆಗೂ 2.48 ಲಕ್ಷ ಕೋಟಿ ರೂನಷ್ಟು ಟ್ಯಾಕ್ಸ್ ರೀಫಂಡ್ ಕೊಡಲಾಗಿದೆ. ಹಾಗೆಯೇ, ಒಟ್ಟು ನೇರ ತೆರಿಗೆ ಸಂಗ್ರಹವೂ ಗಣನೀಯವಾಗಿ ಹೆಚ್ಚಾಗಿದೆ. ಜನವರಿ 10ರವರೆಗೂ ಒಟ್ಟು 17.18 ಲಕ್ಷ ಕೋಟಿ ರೂನಷ್ಟು ಗ್ರಾಸ್ ಡೈರೆಕ್ಟ್ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಇದೇ ಅವಧಿಗಿಂತ ಶೇ. 16.77ರಷ್ಟು ಹೆಚ್ಚಿದೆ.

ಇದನ್ನೂ ಓದಿ: ಭಾರತದ ಈಗಿನ ಪಠ್ಯಕ್ರಮದಿಂದ ಚಿಪ್ ಎಂಜಿನಿಯರ್​ಗಳ ನಿರ್ಮಾಣ ಸಾಧ್ಯವಿಲ್ಲವಾ? ಮೈಕ್ರೋನ್ ಸಿಇಒ ಬಿಚ್ಚಿಟ್ಟಿದ್ದಾರೆ ವಾಸ್ತವ ಸ್ಥಿತಿ

ಕಾರ್ಪೊರೇಟ್ ಆದಾಯ ತೆರಿಗೆಯಲ್ಲಿ (ಸಿಐಟಿ) ಶೇ. 8.32ರಷ್ಟು ಹೆಚ್ಚಳವಾಗಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ (ಪಿಐಟಿ) ಶೇ. 26.11ರಷ್ಟು ಹೆಚ್ಚಳವಾಗಿದೆ. ರೀಫಂಡ್​ಗಳನ್ನು ಕಳೆದು ನೋಡಿದರೆ ಸಿಐಟಿ ನಿವ್ವಳ ಸಂಗ್ರಹದಲ್ಲಿ ಶೇ. 12.37 ಮತ್ತು ಪಿಐಟಿ ನಿವ್ವಳ ಸಂಗ್ರಹದಲ್ಲಿ ಶೇ. 27.26ರಷ್ಟು ಹೆಚ್ಚಳವಾಗಿದೆ.

ನೇರ ತೆರಿಗೆ ಎಂದರೇನು?

ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ಆದಾಯಕ್ಕೆ ಕಟ್ಟುವ ತೆರಿಗೆಯೇ ನೇರ ತೆರಿಗೆ. ಉದಾಹರಣೆಗೆ, ಇನ್ಕಮ್ ಟ್ಯಾಕ್ಸ್, ಪ್ರಾಪರ್ಟಿ ಟ್ಯಾಕ್ಸ್, ರೋಡ್ ಟ್ಯಾಕ್ಸ್ ಇತ್ಯಾದಿ ಇವೆ. ಜಿಎಸ್​ಟಿ ಇತ್ಯಾದಿಯವು ಪರೋಕ್ಷ ತೆರಿಗೆಯ ಗುಂಪಿಗೆ ಸೇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ