
ನವದೆಹಲಿ, ಡಿಸೆಂಬರ್ 23: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India NZ FTA) ಏರ್ಪಟ್ಟಿರುವ ಬಗ್ಗೆ ಕಿವೀಸ್ ನಾಡಿನ ಸರ್ಕಾರದೊಳಗೆ ಅಪಸ್ವರ ಎದ್ದಿದೆ. ನ್ಯೂಜಿಲೆಂಡ್ನ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ (Winston Peters) ಅವರು ತಮ್ಮ ಸರ್ಕಾರದ ನಿಲುವನ್ನು ಟೀಕಿಸಿದ್ದು, ಈ ಎಫ್ಟಿಎಯನ್ನು ಕೆಟ್ಟ ಒಪ್ಪಂದ ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದಕ್ಕೆ ಸಹಿ ಹಾಕುವುದನ್ನು ತಾವು ಹಾಗೂ ತಮ್ಮ ನ್ಯೂಜಿಲ್ಯಾಂಡ್ ಫಸ್ಟ್ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದಿದ್ದಾರೆ.
‘ವಿಷಾದದ ಸಂಗತಿ ಎಂದರೆ ಇದು ನ್ಯೂಜಿಲೆಂಡ್ ಪಾಲಿಗೆ ಕೆಟ್ಟ ಒಪ್ಪಂದವಾಗಿದೆ. ಭಾರತೀಯ ಉತ್ಪನ್ನಗಳಿಗೆ ನ್ಯೂಜಿಲೆಂಡ್ ಮಾರುಕಟ್ಟೆ ಪೂರ್ಣ ತೆರೆಯಲಾಗುತ್ತದೆ. ಆದರೆ, ನ್ಯೂಜಿಲೆಂಡ್ನ ಪ್ರಮುಖ ಡೈರಿ ರಫ್ತುಗಳಿಗೆ ಭಾರತದ ಟ್ಯಾರಿಫ್ ತಡೆ ಇರುತ್ತದೆ. ಇದು ಯಾವ ನ್ಯಾಯ? ನಮ್ಮ ರೈತರು ಮತ್ತು ಕೃಷಿ ಸಮುದಾಯಗಳಿಗೆ ಉತ್ತರಿಸಲು ಸಾಧ್ಯವಾಗದಂಥದ್ದು’ ಎಂದು ನ್ಯೂಜಿಲೆಂಡ್ನ ವಿದೇಶಾಂಗ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?
ವಿನ್ಸ್ಟನ್ ಪೀಟರ್ಸ್ ಅವರು ಎತ್ತಿರುವ ತಕರಾರಿನಲ್ಲಿ ಎರಡು ಪ್ರಮುಖ ಸಂಗತಿಗಳಿವೆ. ಮೊದಲನೆಯದು, ನ್ಯೂಜಿಲ್ಯಾಂಡ್ನ ಪ್ರಮುಖ ರಫ್ತು ಉತ್ಪನ್ನಗಳಾದ ಡೈರಿ ಉತ್ಪನ್ನಗಳಿಗೆ ಭಾರತದಿಂದ ಟ್ಯಾರಿಫ್ ದರ ಇಳಿಕೆ ಆಗಿಲ್ಲ ಎಂಬುದು. ಎರಡನೆಯದು ಎಂದರೆ, ನ್ಯೂಜಿಲ್ಯಾಂಡ್ಗೆ ವಲಸೆ ಹೋಗಲು ಭಾರತೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಈ ಒಪ್ಪಂದದ ಪ್ರಕಾರ ಭಾರತೀಯ ನಾಗರಿಕರಿಗೆಂದೇ ಹೊಸ ಉದ್ಯೋಗ ವೀಸಾ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ವಲಸಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂಬುದು ಅವರ ತಗಾದೆಯಾಗಿದೆ.
ವಿನ್ಸ್ಟನ್ ಪೀಟರ್ಸ್ ಅವರು ತಾನು ಈ ಒಪ್ಪಂದವನ್ನು ವಿರೋಧಿಸುತ್ತಿರುವುದೇ ವಿನಃ ಭಾರತವನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಬಗ್ಗೆಯಾಗಲೀ, ಅಥವಾ ಒಪ್ಪಂದಕ್ಕೆ ಸಂಧಾನ ನಡೆಸಿದವರಾಗಲೀ ತಾನು ಆಕ್ಷೇಪಿಸುತ್ತಿಲ್ಲ. ನ್ಯೂಜಿಲ್ಯಾಂಡ್ಗೆ ಒಪ್ಪುವಂಥದ್ದಲ್ಲದ ಈ ಒಪ್ಪಂದದ ಬಗ್ಗೆಯಷ್ಟೇ ತಮಗೆ ತಕರಾರು ಇರುವುದು. ತಾನು ಈ ವಿಚಾರದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎ ಜೈಶಂಕರ್ ಅವರ ಗಮನಕ್ಕೂ ತಂದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್
ನ್ಯೂಜಿಲ್ಯಾಂಡ್ನಲ್ಲಿ ಸಮ್ಮಿಶ್ರ ಸರ್ಕಾರ ಇದೆ. ವಿನ್ಸ್ಟನ್ ಪೀಟರ್ಸ್ ಅವರು ನ್ಯೂಜಿಲೆಂಡ್ ಫಸ್ಟ್ ಪಕ್ಷದವರು. ಅಲ್ಲಿಯ ಪ್ರಧಾನಿಗಳು ನ್ಯಾಷನಲ್ ಪಾರ್ಟಿಯವರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆಯಾದರೂ ಇನ್ನೂ ಸಹಿ ಹಾಕಲಾಗಿಲ್ಲ. ಸಹಿ ಹಾಕುವ ಮುನ್ನ ನ್ಯೂಜಿಲೆಂಡ್ ಸರ್ಕಾರವು ತನ್ನ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆಯಬೇಕು. ಈ ಹಂತದಲ್ಲಿ ತಾನು ವಿರೋಧಿಸುವುದಾಗಿ ನ್ಯೂಜಿಲೆಂಡ್ ಸಚಿವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ