
ನವದೆಹಲಿ, ಜುಲೈ 15: ನೀವು ಫಾಸ್ಟ್ಯಾಗ್ (FASTag) ಹೊಂದಿದ್ದು ಅದನ್ನು ಕಾರಿನ ವಿಂಡ್ಸ್ಕ್ರೀನ್ನಲ್ಲಿ ಅಂಟಿಸಿಲ್ಲವಾ? ಹೆದ್ದಾರಿ ಟೋಲ್ಬೂತ್ಗಳಿಗೆ ಹೋದಾಗ ಕೈಯಲ್ಲಿ ಫಾಸ್ಟ್ಯಾಗ್ ಹಿಡಿದು ಸ್ಕ್ಯಾನಿಂಗ್ಗೆ ತೋರಿಸುತ್ತಿದ್ದೀರಾ? ಹಾಗಾದರೆ, ನಿಮ್ಮ ಫಾಸ್ಟ್ಯಾಗ್ ಮುಂದಿನ ದಿನಗಳಲ್ಲಿ ನಿಷ್ಕ್ರಿಯಗೊಳ್ಳಬಹುದು. ಹಾಗೊಂದು ನಿಯಮವನ್ನು ಸರ್ಕಾರ ರೂಪಿಸಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೂಸ್ ಫಾಸ್ಟ್ಯಾಗ್ಗಳನ್ನು ಬ್ಲ್ಯಾಕ್ಲಿಸ್ಟ್ಗೆ (blacklisting loose fastag) ಸೇರಿಸಲು ನಿರ್ಧರಿಸಿದೆ. ಲೂಸ್ ಫಾಸ್ಟ್ಯಾಗ್ ಎಂದರೆ ಆಗಲೇ ಹೇಳಿದಂತೆ ವಾಹನದ ವಿಂಡ್ಶೀಲ್ಡ್ ಮೇಲೆ ಅಂಟಿಸದೇ ಇರುವಂಥದ್ದು.
‘ವಾಹನದ ಮಾಲೀಕರು ತಮ್ಮ ಫಾಸ್ಟ್ಯಾಗ್ಗಳನ್ನು ಬೇಕಂತಲೇ ವಿಂಡ್ಸ್ಕ್ರೀನ್ ಮೇಲೆ ಅಂಟಿಸಿರುವುದಿಲ್ಲ. ಇದರಿಂದಾಗಿ, ಟೋಲ್ ಬೂತ್ಗಳಲ್ಲಿ ವಾಹನ ದಟ್ಟನೆ, ತಪ್ಪಾದ ಚಾರ್ಜ್ಬ್ಯಾಕ್, ಟೋಲಿಂಗ್ ಸಿಸ್ಟಂ ದುರ್ಬಳಕೆ ಇತ್ಯಾದಿ ಮೂಲಕ ಒಟ್ಟಾರೆ ಟೋಲಿಂಗ್ ಸಿಸ್ಟಂ ಮೇಲೆ ಋಣಾತ್ಮಕ ಪರಿಣಾ ಬೀರುತ್ತದೆ. ಟೋಲ್ ಬೂತ್ಗಳಲ್ಲಿ ವಾಹನ ಸಾಗುವುದು ವಿಳಂಬವಾಗಿ, ಇತರ ಹೆದ್ದಾರಿ ಬಳಕೆದಾರರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಎನ್ಎಚ್ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್ಬಿಐ ವರದಿಯಲ್ಲಿ ಆತಂಕ
ಲೂಸ್ ಫಾಸ್ಟ್ಯಾಗ್ಗಳನ್ನು ರಿಪೋರ್ಟ್ ಮಾಡುವುದಕ್ಕೆಂದೇ ಹೆದ್ದಾರಿ ಪ್ರಾಧಿಕಾರವು ಪ್ರತ್ಯೇಕವಾದ ಇಮೇಲ್ ಐಡಿ ರಚಿಸಿದೆ. ಟೋಲ್ ಬೂತ್ಗಳಲ್ಲಿ ಲೂಸ್ ಫಾಸ್ಟ್ಯಾಗ್ಗಳನ್ನು ಕಂಡಾಗ ಕಲೆಕ್ಷನ್ ಏಜೆನ್ಸಿಗಳು, ಕನ್ಸೆಶನರಿಗಳು ಕೂಡಲೇ ಮಾಹಿತಿಯನ್ನು ಆ ಇಮೇಲ್ಗೆ ಕಳುಹಿಸುವಂತೆ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಇಂಥ ಫಾಸ್ಟ್ಯಾಗ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
ವಾಹನಗಳ ಪ್ರಾಕಾರವಾಗಿ ಫಾಸ್ಟ್ಯಾಗ್ಗಳು ವ್ಯತ್ಯಾಸವಾಗಿರುತ್ತವೆ. ದೊಡ್ಡ ವಾಹನಗಳಿಗೆ ಟೋಲ್ ದರ ಹೆಚ್ಚಿರುವಂತೆ ಅಂಥ ವಾಹನಗಳಿಗೆ ಬೇರೆ ಫಾಸ್ಟ್ಯಾಗ್ಗಳಿರುತ್ತವೆ. ಸಣ್ಣ ಕಾರುಗಳಿಗೆ ಬೇರೆ ಫಾಸ್ಟ್ಯಾಗ್ಗಳಿರುತ್ತವೆ. ಆದರೆ, ದೊಡ್ಡ ವಾಹನದವರು ಸಣ್ಣ ವಾಹನಗಳಿಗೆ ನೀಡುವ ಫಾಸ್ಟ್ಯಾಗ್ಗಳನ್ನು ಬಳಸುವುದುಂಟು. ಈ ಮೂಲಕ ವಂಚನೆ ನಡೆಯಬಹುದು.
ಹಾಗೆಯೇ, ಕ್ಲೋಸ್ಡ್ ಲೂಪ್ ಟೋಲಿಂಗ್ ವ್ಯವಸ್ಥೆಯಲ್ಲಿ ವಿವಿಧ ವಾಹನಗಳ ಮಧ್ಯೆ ಫಾಸ್ಟ್ಯಾಗ್ ಅನ್ನು ಅದಲುಬದಲು ಮಾಡಿಕೊಳ್ಳಬಹುದು. ಇದರಿಂದ ಟೋಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದು. ಇಂಥ ಪ್ರಕರಣಗಳೂ ಕೂಡ ಸಾಕಷ್ಟು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಯುಪಿಐ ಚಾರ್ಜ್ಬ್ಯಾಕ್; ಜುಲೈ 15ರಿಂದ ಹೊಸ ನಿಯಮ; ಪೇಮೆಂಟ್ ವ್ಯಾಜ್ಯಕ್ಕೆ ಸಿಗಲಿದೆ ತ್ವರಿತ ಪರಿಹಾರ
ಹಾಗೆಯೇ, ಫಾಸ್ಟ್ಯಾಗ್ ವಿತರಿಸಿದ ಬ್ಯಾಂಕುಗಳು ಮತ್ತು ಟೋಲ್ ಆಪರೇಟರುಗಳಿಂದ ಚಾರ್ಜ್ಬ್ಯಾಕ್ ಮನವಿ ಹೆಚ್ಚುತ್ತಿದೆಯಂತೆ. ಅಂದರೆ, ವಾಹನದ ವರ್ಗಕ್ಕೆ ತಕ್ಕುದಾದುದಲ್ಲದ ಫಾಸ್ಟ್ಯಾಗ್ಗಳನ್ನು ಬಳಸಿದಾಗ ಟೋಲ್ ಪ್ಲಾಜಾದಲ್ಲಿ ಅದು ಗೊತ್ತಾಗುತ್ತದೆ. ಆಗ ಚಾರ್ಜ್ಬ್ಯಾಕ್ ಸಮಸ್ಯೆ ಉದ್ಭವವಾಗುತ್ತದೆ. ಫಾಸ್ಟ್ಯಾಗ್ ಮತ್ತು ವಾಹನದ ನೊಂದಣಿ ಸಂಖ್ಯೆ ತಾಳೆಯಾಗುತ್ತಿದೆಯಾ ಎಂದು ಪರಿಶೀಲಿಸುವ ಟೆಕ್ನಾಲಜಿ ಇದೆ. ಆದರೆ, ಟೋಲ್ ಪ್ಲಾಜಾಗಳಲ್ಲಿ ಸದ್ಯ ಇರುವ ಸ್ಕ್ಯಾನರ್ಗಳು ಟ್ಯಾಗ್ ಮಾಹಿತಿಯನ್ನು ಮಾತ್ರ ರೀಡ್ ಮಾಡುತ್ತವೆ. ವಾಹನ ನೊಂದಣಿ ಸಂಖ್ಯೆಗೆ ಟ್ಯಾಗ್ ಹೊಂದಿಕೆಯಾಗುತ್ತದಾ ಎಂದು ತುಲನೆ ಮಾಡುವುದಿಲ್ಲ.
ಟೋಲ್ ಬೂತ್ಗಳಲ್ಲಿ ನಂಬರ್ ಪ್ಲೇಟ್ಗಳನ್ನು ಗುರುತಿಸುವ ಎಎನ್ಪಿಆರ್ ಟೆಕ್ನಾಲಜಿ ಅಳವಡಿಕೆ ಆಗಿದೆ. ಆದರೆ, ಬಹಳಷ್ಟು ವಾಹನಗಳು ಇನ್ನೂ ಈ ಹೊಸ ನಂಬರ್ ಪ್ಲೇಟ್ಗಳನ್ನು ಅಳವಡಿಸಿಲ್ಲ. ಹಲವು ವಾಹನಗಳು ಎಎನ್ಪಿಆರ್ ನಂಬರ್ ಪ್ಲೇಟ್ಗಳನ್ನು ಅಳವಡಿಸಿದರೂ ಸರಿಯಾಗಿ ಕಾಣುವ ಜಾಗದಲ್ಲಿ ಹಾಕಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ