ನವದೆಹಲಿ, ಫೆಬ್ರುವರಿ 16: ನಿರೀಕ್ಷೆಯಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಫಾಸ್ಟ್ಯಾಗ್ (FASTag) ನೀಡುವ ಮಾನ್ಯತೆ ಕಳೆದುಕೊಂಡಿದೆ. ಇದರೊಂದಿಗೆ ಇನ್ಮುಂದೆ ಪೇಟಿಎಂ ಮೂಲಕ ಹೊಸ ಫಾಸ್ಟ್ಯಾಗ್ ಖರೀದಿಸಲು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್ಎಐ ಹೊಸ ಫಾಸ್ಟ್ಯಾಗ್ ವಿತರಿಸಲು ಮಾನ್ಯತೆ ಪಡೆದಿರುವ ಬ್ಯಾಂಕುಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಪೇಟಿಎಂ ಹೆಸರನ್ನು ಕೈಬಿಡಲಾಗಿದೆ. ಈ ಪಟ್ಟಿಯಲ್ಲಿ ಏರ್ಟೇಲ್ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ 32 ಬ್ಯಾಂಕುಗಳ ಪಟ್ಟಿ ಇದೆ. ಇದರಲ್ಲಿ ಕರ್ಣಾಟಕ ಬ್ಯಾಂಕ್, ಎಸ್ಬಿಐ ಇತ್ಯಾದಿ ಪ್ರಮುಖ ಬ್ಯಾಂಕುಗಳೆಲ್ಲವೂ ಇವೆ.
ವರದಿ ಪ್ರಕಾರ, ಪೇಟಿಎಂ ಫಾಸ್ಟ್ಯಾಗ್ ಅನ್ನು ಹೊಂದಿರುವವರು ಅದನ್ನು ಮರಳಿಸಿ ಬೇರೆ ಬ್ಯಾಂಕುಗಳಿಂದ ಫಾಸ್ಟ್ಯಾಗ್ ಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಈಗಾಗಲೇ ಪೇಟಿಎಂ ಫಾಸ್ಟ್ಯಾಗ್ ಹೊಂದಿರುವವರು, ಅದರಲ್ಲಿ ಬ್ಯಾಲನ್ಸ್ ಹೊಂದಿದ್ದರೆ ಫೆಬ್ರುವರಿ 29ರವರೆಗೂ ಅದನ್ನು ಬಳಸಬಹುದು. ಅದಾದ ಬಳಿಕ ಅದರ ಬಳಕೆ ಸಾಧ್ಯವಾಗುವುದಿಲ್ಲ.
ದೇಶಾದ್ಯಂತ ಸುಮಾರು ಎರಡು ಕೋಟಿ ವಾಹನಗಳಿಗೆ ಪೇಟಿಎಂನ ಫಾಸ್ಟ್ಯಾಗ್ ಇದೆ. ಈಗ ಇಷ್ಟೂ ಜನರು ಹೊಸ ಆರ್ಎಫ್ಐಡಿ ಸ್ಟಿಕರ್ಗಳನ್ನು ಪಡೆದು ಅಳವಡಿಸಿಕೊಳ್ಳಬೇಕಾಗುತ್ತದೆ. ಬೇರೆ ಮಾನ್ಯ ಬ್ಯಾಂಕುಗಳಿಂದ ಫಾಸ್ಟ್ಯಾಗ್ ಪಡೆಯಬೇಕಾಗುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ನಿಂದ ಫಾಸ್ಟ್ಯಾಗ್ ಪಡೆಯುವಂತೆ ಪೇಟಿಎಂ ತನ್ನ ಗ್ರಾಹಕರಿಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ