ಬೆಳಗ್ಗೆ ಖರೀದಿಸಿ, ಸಂಜೆ ಮಾರುವುದು ಹೂಡಿಕೆಯಲ್ಲ: ಎನ್​ಎಸ್​ಇ ಸಿಇಒ ಆಶೀಷ್ ಚೌಹಾಣ್

|

Updated on: Aug 02, 2024 | 6:44 PM

NSE CEO Ashish Chauhan: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಸಿಇಒ ಆಶೀಷ್ ಚೌಹಾಣ್ ಅವರು ನಿಫ್ಟಿ50 ಸೂಚ್ಯಂಕವನ್ನು ವಾರನ್ ಬಫೆಟ್​ಗೆ ಹೋಲಿಸಿದ್ದಾರೆ. ನಿಫ್ಟಿ50 ಸೂಚ್ಯಂಕ 25,000 ಅಂಕಗಳ ಗಡಿದಾಟಿದ ಹಿನ್ನೆಲೆಯಲ್ಲಿ ಅವರು ಅಮೆರಿಕದ ಯಶಸ್ವಿ ಹೂಡಿಕೆದಾರನಿಗೆ ನಿಫ್ಟಿ50ಯನ್ನು ಹೋಲಿಸಿದ್ದಾರೆ. ಪದೇ ಪದೇ ಷೇರು ವಹಿವಾಟು ನಡೆಸುವುದು, ಬೆಳಗ್ಗೆ ಷೇರು ಖರೀದಿಸಿ ಸಂಜೆ ಮಾರುವುದು ಇವುಗಳನ್ನು ಮಾಡಬಾರದು ಎಂಬುದು ಅವರ ಸಲಹೆ.

ಬೆಳಗ್ಗೆ ಖರೀದಿಸಿ, ಸಂಜೆ ಮಾರುವುದು ಹೂಡಿಕೆಯಲ್ಲ: ಎನ್​ಎಸ್​ಇ ಸಿಇಒ ಆಶೀಷ್ ಚೌಹಾಣ್
ಹೂಡಿಕೆ
Follow us on

ಮುಂಬೈ, ಆಗಸ್ಟ್ 2: ಭಾರತದ ಷೇರುಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಲ್ಲಿ ನಿಫ್ಟಿ50 ಒಂದು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಅತಿಮುಖ್ಯ ಸೂಚ್ಯಂಕ ಎನಿಸಿದ ನಿಫ್ಟಿ50 ಇದೇ ಮೊದಲ ಬಾರಿಗೆ ಇಂದು 25,000 ಅಂಕಗಳ ಮೈಲಿಗಲ್ಲು ಮುಟ್ಟಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ (11 ತಿಂಗಳು) 5,000 ಅಂಕಗಳು ಬೆಳೆದಿವೆ. ನಿಫ್ಟಿ ಇತಿಹಾಸದಲ್ಲೇ 5,000 ಅಂಕಗಳನ್ನು ಅತಿವೇಗವಾಗಿ ಗಳಿಸಿದ ದಾಖಲೆ ಸ್ಥಾಪಿತವಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆಯ ಸಿಇಒ ಆಶೀಷ್ ಚೌಹಾಣ್ ಅವರು ನಿಫ್ಟಿ50 ಸಾಧನೆಯ ಖುಷಿಯಲ್ಲಿ ಇಂದು ಹಂಚಿಕೊಂಡರು. ಇಲ್ಲಿ ನಡೆದ 21ನೇ ವಾರ್ಷಿಕ ಕ್ಯಾಪಿಟಲ್ ಮಾರ್ಕೆಟ್ಸ್ ಕಾನ್ಫೆರನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಿಫ್ಟಿ50ಯನ್ನು ಅಮೆರಿಕದ ವಾರನ್ ಬಫೆಟ್​ಗೆ ಹೋಲಿಕೆ ಮಾಡಿದರು.

ವಾರನ್ ಬಫೆಟ್ ಅವರು ಅಮೆರಿಕದ ಪ್ರಖ್ಯಾತ ಹೂಡಿಕೆದಾರ. ಹೂಡಿಕೆಗೆ ಷೇರುಗಳನ್ನು ಆಯ್ಕೆ ಮಾಡಲು ಬಹಳ ಚಾಣಾಕ್ಷತೆ ತೋರುತ್ತಾರೆ. ವಿಶ್ವದ ಅತ್ಯಂತ ಯಶಸ್ವಿ ಷೇರು ಹೂಡಿಕೆದಾರರೆನಿಸಿದ್ದಾರೆ. ಲಕ್ಷಾಂತರ ಕೋಟಿ ರೂ ಷೇರು ಸಂಪತ್ತಿನ ಅಧಿಪತಿಯಾಗಿದ್ದಾರೆ. ನಿಫ್ಟಿ50 ಕೂಡ ಹೂಡಿಕೆದಾರರಿಗೆ ಅದೇ ರೀತಿ ಲಾಭ ತಂದುಕೊಟ್ಟಿದೆ.

ಇದನ್ನೂ ಓದಿ: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ

ಚೌಹಾಣ್ ಪ್ರಕಾರ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಪ್ರತೀ ದಿನ ಬರೋಬ್ಬರಿ 2,000 ಕೋಟಿಯಷ್ಟು ಆರ್ಡರ್​ಗಳು ಬರುತ್ತವಂತೆ. ಅಂದರೆ ಬೆಳಗ್ಗೆ 9:15ರಿಂದ ಹಿಡಿದು ಮಧ್ಯಾಹ್ನ 3:30ರವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆರ್ಡರ್ ಬರುವುದು ಸಾಮಾನ್ಯದ ಸಂಗತಿಯಲ್ಲ.

ಬೆಳಗ್ಗೆ ಖರೀದಿಸಿ ಸಂಜೆ ಮಾರುವುದು ಹೂಡಿಕೆಯಲ್ಲ

ಎನ್​ಎಸ್​ಇ ಸಿಇಒ ಆಶೀಷ್ ಚೌಹಾಣ್ ಈ ಸಂದರ್ಭದಲ್ಲಿ ಯುವ ಹೂಡಿಕೆದಾರರಿಗೆ ಕಿವಿ ಮಾತು ಹೇಳಿದ್ದಾರೆ. ಪರೋಕ್ಷವಾಗಿ ಇಂಟ್ರಾಡೇ ಟ್ರೇಡಿಂಗ್ ವಿಚಾರ ಎತ್ತಿದ ಅವರು, ಬೆಳಗ್ಗೆ ಷೇರು ಖರೀದಿಸಿ ಸಂಜೆ ಅದನ್ನು ಮಾರುವುದು ಹೂಡಿಕೆ ಎನಿಸುವುದಿಲ್ಲ. ಜನರು ಈ ರೀತಿ ಬಾರಿ ಬಾರಿ ವಹಿವಾಟು ನಡೆಸುವುದರಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಸೂಪರ್​ಸ್ಟಾರ್ ಆಗಿದ್ದ ಎಚ್​ಎಎಲ್​ನ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

ನಿಫ್ಟಿ50 ಸೂಚ್ಯಂಕ 25,000 ಅಂಕಗಳಾಗಿದ್ದರ ಸಿಂಪಲ್ ವಿವರಣೆ

1995ರ ನವೆಂಬರ್ 3ರಂದು ನಿಫ್ಟಿ 1,000 ಅಂಕಗಳಿಂದ ಆರಂಭವಾಯಿತು. 30 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 25 ಪಟ್ಟು ಹೆಚ್ಚು ರಿಟರ್ನ್ ಕೊಟ್ಟಿದೆ. ಈ ಸ್ಟಾಕುಗಳು ಕೊಟ್ಟಿರುವು ಡಿವಿಡೆಂಡ್ ಸೇರಿಸಿದರೆ 28,000 ದಿಂದ 30,000 ಆಗಬಹುದು. ನೀವು ಆಗ 1,000 ರೂ ಹೂಡಿಕೆ ಮಾಡಿದ್ದರೆ ಇವತ್ತು ಆ ಹಣ 28,000 ರೂನಿಂದ 30,000 ರೂ ಆಗುತ್ತದೆ ಎಂದು ಆಶೀಷ್ ಚೌಹಾಣ್ ವಿವರಣೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ