ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ

|

Updated on: Mar 15, 2024 | 11:51 AM

Uniform Code for Pharmaceuticals Marketing Practices: ಫಾರ್ಮಾ ಸಂಸ್ಥೆಗಳು ಮತ್ತು ವೈದ್ಯರ ಮಧ್ಯೆ ಇದೆ ಎನ್ನಲಾಗುತ್ತಿರುವ ಅನೈತಿಕ ಮತ್ತು ಅಕ್ರಮ ಸಂಬಂಧಕ್ಕೆ ಕಡಿವಾಣ ಹಾಕಲು ಸರ್ಕಾರ ಹೊಸ ಮಾರ್ಕೆಟಿಂಗ್ ಕೋಡ್ ರೂಪಿಸಿದೆ. ಫಾರ್ಮಾ ಕಂಪನಿಗಳು ವೈದ್ಯರಿಗೆ ಉಚಿತ ಔಷಧ ಸ್ಯಾಂಪಲ್ ನೀಡುವುದರಿಂದ ಹಿಡಿದು ವಿವಿಧ ರೀತಿಯ ಗಿಫ್ಟ್, ವಿದೇಶೀ ಪ್ರವಾಸ ಸೌಲಭ್ಯ ಇತ್ಯಾದಿ ಪ್ರಲೋಬನೆಗಳನ್ನು ನೀಡುವಂತಿಲ್ಲ ಎಂದು ಸರ್ಕಾರ ನಿಯಮ ಹಾಕಿದೆ.

ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ
ವೈದ್ಯ
Follow us on

ನವದೆಹಲಿ, ಮಾರ್ಚ್ 15: ಫಾರ್ಮಾ ಸಂಸ್ಥೆಗಳು ವೈದ್ಯರಿಗೆ ಮತ್ತವರ ಕುಟುಂಬಕ್ಕೆ ವಿವಿಧ ಗಿಫ್ಟ್, ವಿದೇಶೀ ಪ್ರವಾಸ ಪ್ಯಾಕೇಜ್ ಇತ್ಯಾದಿ ಕೊಡುವುದನ್ನು ಸರ್ಕಾರ ನಿರ್ಬಂಧಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅನೈತಿಕ ನಡಾವಳಿಗೆ (unethical practices) ತಡೆ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ಮಾರ್ಕೆಟಿಂಗ್ ನಿಬಂಧನೆಗಳನ್ನು ಹೊರಡಿಸಿದೆ. ಯೂನಿಫಾರ್ಮ್ ಕೋಡ್ ಫಾರ್ ಫಾರ್ಮಸ್ಯೂಟಿಕಲ್ಸ್ ಮಾರ್ಕೆಟಿಂಗ್ ಪ್ರಾಕ್ಟಿಸಸ್ (UCPMP) ಎಂಬ ಈ ನಿಯಮಾವಳಿಯು ಫಾರ್ಮಾ ಕಂಪನಿಗಳು ವೈದ್ಯರ ಜೊತೆ ಯಾವ ರೀತಿಯ ಸಂಬಂಧ ಹೊಂದಿರಬೇಕು, ಅಥವಾ ಹೊಂದಿರಬಾರದು ಎಂಬ ನಿಯಮಗಳನ್ನು ತಿಳಿಸುತ್ತದೆ. ಅದರ ಪ್ರಕಾರ, ಫಾರ್ಮಾ ಕಂಪನಿಗಳು ವೈದ್ಯರಿಗೆ ಅಥವಾ ಅವರ ಕುಟುಂಬದವರಿಗೆ ಗಿಫ್ಟ್​ಗಳು, ಪ್ರವಾಸ ಪ್ಯಾಕೇಜ್ (foreign trip package) ಮತ್ತಿತರ ಹಲವು ಕೊಡುಗೆಗಳನ್ನು ನೀಡುತ್ತವೆ. ಅದಕ್ಕೆ ಬದಲಾಗಿ, ಆ ಫಾರ್ಮಾ ಕಂಪನಿಗಳ ಉತ್ಪನ್ನಗಳನ್ನು ವೈದ್ಯರು ತಮ್ಮ ರೋಗಿಗಳಿಗೆ ಪ್ರಿಸ್ಕ್ರೈಬ್ ಮಾಡುತ್ತಾರೆ.

ಈ ರೀತಿಯಾಗಿ ಫಾರ್ಮಾ ಕಂಪನಿಗಳು ಮತ್ತು ವೈದ್ಯರ ಮಧ್ಯೆ ಅನೈತಿಕ ಸಂಬಂಧ ಏರ್ಪಟ್ಟಿದೆ ಎನ್ನುವಂತಹ ಆರೋಪ ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ವೈದ್ಯರಿಗೆ ಕೇವಲ ಉತ್ಪನ್ನಗಳ ಉಚಿತ ಸ್ಯಾಂಪಲ್ ನೀಡುವುದು ಮಾತ್ರವಲ್ಲ ನಾನಾ ರೀತಿಯ ಕೊಡುಗೆಗಳನ್ನು ಕೊಡಲಾಗುತ್ತದೆ. ಸೆಮಿನಾರ್ ಇತ್ಯಾದಿ ಹೆಸರಿನಲ್ಲಿ ವೈದ್ಯರು ಮತ್ತವರ ಕುಟುಂಬ ಸದಸ್ಯರಿಗೆ ವಿದೇಶ ಪ್ರವಾಸದ ವ್ಯವಸ್ಥೆ ಮಾಡಲಾಗುವುದು, ರಿಸಾರ್ಟ್ ಬುಕ್ ಮಾಡುವುದು ಇತ್ಯಾದಿ ನಡೆಯುತ್ತದೆ. ಇವೆಲ್ಲಕ್ಕೂ ತಡೆ ನೀಡಿ, ಈ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಮಾರ್ಕೆಟಿಂಗ್ ನಿಯಮಾವಳಿಯನ್ನು ಸರ್ಕಾರ ತಂದಿದೆ ಎಂದು ಹೇಲಾಗುತ್ತಿದೆ.

ಇದನ್ನೂ ಓದಿ: ಪೇಟಿಎಂ ಬಚಾವ್; ಥರ್ಡ್ ಪಾರ್ಟಿ ಆ್ಯಪ್ ಆಗಿ ಮುಂದುವರಿಯಲು ಅವಕಾಶ; ಷೇರು ಬೆಲೆಯೂ ಏರಿಕೆಯ ಹಾದಿಯಲ್ಲಿ

ಸಿಎಂಇ ಎಂಬ ಪ್ರಲೋಬನೆ

ವೈದ್ಯಕೀಯ ಶಿಕ್ಷಣದ ಮುಂದುವರಿದ ತರಬೇತಿ ಅಥವಾ ಸಿಎಂಇ ಹೆಸರಿನಲ್ಲಿ ವಿದೇಶಗಳಲ್ಲಿ ಸೆಮಿನಾರ್, ಕಾರ್ಯಾಗಾರ ಇತ್ಯಾದಿಗಳನ್ನು ಏರ್ಪಡಿಸಲಾಗುತ್ತದೆ. ಬಹಳಷ್ಟು ಬಾರಿ ಫಾರ್ಮಾ ಲಾಬಿಗಳು ಇದರ ಹಿಂದಿರುತ್ತವೆ. ಸಿಎಂಇಗಳಿಗೆ ಆಹ್ವಾನಿಸುವ ಮೂಲಕ ವೈದ್ಯರಿಗೆ ವಿದೇಶಗಳಿಗೆ ಪ್ರವಾಸ ಏರ್ಪಡಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಫಾರ್ಮಾ ಕಂಪನಿಗಳು ವೈದ್ಯರಿಗೆ ಒಡ್ಡುವ ಪ್ರಲೋಬನೆ ಮತ್ತು ಗಿಫ್ಟ್. ಸರ್ಕಾರದ ಹೊಸ ಕಾನೂನು ಪ್ರಕಾರ ಇಂಥ ಸಿಎಂಇಗಳನ್ನು ವಿದೇಶಗಳಲ್ಲಿ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಸ್ಥಳೀಯವಾಗಿ ಮೆಡಿಕಲ್ ಕಾಲೇಜುಗಳಲ್ಲೋ, ಶಿಕ್ಷಣ ಸಂಸ್ಥೆಗಳಲ್ಲೂ, ವಿವಿಗಳಲ್ಲೋ ಇತ್ಯಾದಿ ಕಡೆ ಇಂಥ ಸೆಮಿನಾರ್ ಮತ್ತು ಕಾರ್ಯಾಗಾರಗಳನ್ನು ನಡೆಸಲು ಅವಕಾಶ ಇರುತ್ತದೆ.

ಎಲ್ಲಾ ಫಾರ್ಮಾ ಕಂಪನಿಗಳು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ ಅದರ ವಿವರಗಳನ್ನು ಒದಗಿಸಬೇಕು. ಆ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ಆಗುತ್ತದೆ ಇತ್ಯಾದಿ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ಸರ್ಕಾರದ ನೂತನ ಮಾರ್ಕೆಟಿಂಗ್ ಕೋಡ್ ತಿಳಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ