AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಿಎಂ ಬಚಾವ್; ಥರ್ಡ್ ಪಾರ್ಟಿ ಆ್ಯಪ್ ಆಗಿ ಮುಂದುವರಿಯಲು ಅವಕಾಶ; ಷೇರು ಬೆಲೆಯೂ ಏರಿಕೆಯ ಹಾದಿಯಲ್ಲಿ

Paytm Latest News: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ಪೇಟಿಎಂಗೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗಿ ಮುಂದುವರಿಯಲು ಅನುಮತಿ ನೀಡಿತ್ತು. ಇದರೊಂದಿಗೆ ಪೇಟಿಎಂ ಭವಿಷ್ಯದ ಬಗ್ಗೆ ಇದ್ದ ಆತಂಕ ತಾತ್ಕಾಲಿಕವಾಗಿ ಮರೆಯಾಗಿದೆ. ಇಂದು ಶುಕ್ರವಾರ ಬೆಳಗಿನ ಕೆಲವೇ ನಿಮಿಷಗಳಲ್ಲಿ ಪೇಟಿಎಂ ಷೇರುಬೆಲೆ ಗರಿಷ್ಠ ಮಿತಿಗೆ ಹೆಚ್ಚಳಗೊಂಡಿದೆ. 350 ರೂ ಇದ್ದ ಷೇರುಬೆಲೆ 370 ರೂಗೆ ಹೆಚ್ಚಾಗಿದೆ.

ಪೇಟಿಎಂ ಬಚಾವ್; ಥರ್ಡ್ ಪಾರ್ಟಿ ಆ್ಯಪ್ ಆಗಿ ಮುಂದುವರಿಯಲು ಅವಕಾಶ; ಷೇರು ಬೆಲೆಯೂ ಏರಿಕೆಯ ಹಾದಿಯಲ್ಲಿ
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2024 | 10:59 AM

ನವದೆಹಲಿ, ಮಾರ್ಚ್ 15: ಪೇಟಿಎಂ ಸಂಸ್ಥೆಗೆ ಯುಪಿಐನ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (TPAP) ಆಗಿ ಮುಂದುವರಿಯಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ (NPCI) ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದರ ಷೇರುಬೆಲೆ ಏರತೊಡಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಪೇಟಿಎಂ ಆ್ಯಪ್ ಬಗ್ಗೆಯೂ ಬಹಳಷ್ಟು ಅನುಮಾನಗಳಿದ್ದವು. ಆದರೆ, ಟಿಪಿಎಪಿ ಸೇವೆ ಮುಂದುವರಿಸಲು ಎನ್​ಪಿಸಿಐ ನಿನ್ನೆ ಅನುಮತಿಸಿರುವುದರೊಂದಿಗೆ ಪೇಟಿಎಂ ಮೇಲಿದ್ದ ಕರಿನೆರಳು ಮಾಯವಾಗಿದೆ. ಇವತ್ತು ಷೇರು ಮಾರುಕಟ್ಟೆಯಲ್ಲಿ ಪೇಟಿಎಂ ಷೇರಿಗೆ ಒಳ್ಳೆಯ ಬೇಡಿಕೆ ಸೃಷ್ಟಿಯಾಯಿತು. ಒಂದು ಗಂಟೆಯೊಳಗೆ ಏರಿಕೆ ಮಿತಿಯಾದ ಶೇ. 5ರಷ್ಟು ಹೆಚ್ಚು ಬೆಲೆ ಗಳಿಸಿದೆ. ಗುರುವಾರ ಸಂಜೆ 350 ರೂನಷ್ಟು ಇದ್ದ ಅದರ ಷೇರುಬೆಲೆ ವಾರಾಂತ್ಯದ ದಿನ ಗರಿಷ್ಠ 370.70 ರೂ ಬೆಲೆ ಮುಟ್ಟಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ (ಎನ್​ಪಿಸಿಐ) ನಿನ್ನೆ ಗುರುವಾರ ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗಿ ಕಾರ್ಯವಹಿಸಲು ಪೇಟಿಎಂ ಮಾಲೀಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ (ಒಸಿಎಲ್) ಸಂಸ್ಥೆಗೆ ಅನುಮತಿ ನೀಡಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ, ಯೆಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಈ ನಾಲ್ಕು ಬ್ಯಾಂಕುಗಳು ಪೇಟಿಎಂಗೆ ಪೇಮೆಂಟ್ ಸರ್ವಿಸ್ ಪ್ರೊವೈಡರ್​ಗಳಾಗಿ ಸೇವೆ ನೀಡಲಿವೆ.

ಇದನ್ನೂ ಓದಿ: ಡಿಎ, ಡಿಆರ್ ಶೇ. 4ರಷ್ಟು ಹೆಚ್ಚಳ; ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಖುಷಿ ಸುದ್ದಿ

ಇದರೊಂದಿಗೆ, ಪೇಟಿಎಂನಲ್ಲಿ ಅದರ ಬಳಕೆದಾರರಿಗೆ ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ, ಈವರೆಗೆ ಯಾವ್ಯಾವ ಸೇವೆಗಳನ್ನು ಪಡೆಯುತ್ತಿದ್ದರೋ ಅವೆಲ್ಲವೂ ಮೊದಲಿನಂತೆಯೇ ಮುಂದುವರಿಯಲಿವೆ. ವ್ಯಾಲಟ್, ಆಟೊಪೇ ಇತ್ಯಾದಿ ಸೇವೆಗಳನ್ನು ಅಬಾಧಿತವಾಗಿ ಪಡೆಯಬಹುದು.

@Paytm ಹ್ಯಾಂಡಲ್ ಅನ್ನು ಯೆಸ್ ಬ್ಯಾಂಕ್​ಗೆ ರೀಡೈರೆಕ್ಟ್ ಮಾಡಲಾಗಿದೆ. ಯೆಸ್ ಬ್ಯಾಂಕ್​ಗೆ ವರ್ಗಾವಣೆ ಆದರೂ ಕೂಡ @ybl ಬದಲು @Paytm ಹ್ಯಾಂಡಲ್​ ಮುಂದುವರಿಯುತ್ತದೆ. ಹೀಗಾಗಿ, ಆ ಪೇಟಿಎಂನ ಯುಪಿಐ ಐಡಿ ಹೊಂದಿರುವ ವರ್ತಕರು ಮತ್ತು ಬಳಕೆದಾರರು ಯುಪಿಐ ವಹಿವಾಟು ಮುಂದುವರಿಸಬಹುದಾಗಿದೆ.

ಪೇಟಿಎಂನ ಈಗಿನ ಮತ್ತು ಹೊಸ ಯುಪಿಐ ವರ್ತಕರಿಗೆ ಮರ್ಚಂಟ್ ಅಕ್ವೈರಿಂಗ್ ಬ್ಯಾಂಕ್ ಆಗಿ ಯೆಸ್ ಬ್ಯಾಂಕ್ ಇರಲಿದೆ. ಯೆಸ್ ಬ್ಯಾಂಕ್ ಸೇರಿದಂತೆ ಮೇಲಿನ ನಾಲ್ಕು ಪಿಎಸ್​ಪಿ ಬ್ಯಾಂಕುಗಳಿಗೆ ಪೇಟಿಎಂನ ಎಲ್ಲಾ ಹ್ಯಾಂಡಲ್​ಗಳನ್ನು ವರ್ಗಾವಣೆ ಮಾಡಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಐಬಿಎಂನಲ್ಲಿ ಲೇ ಆಫ್; ಏಳು ನಿಮಿಷದ ಸಭೆಯಲ್ಲಿ ಪ್ರಕಟವಾದ ನಿರ್ಧಾರಕ್ಕೆ ಬೆಚ್ಚಿಬಿದ್ದ ಉದ್ಯೋಗಿಗಳು

ಏನಿದು ಟಿಪಿಎಪಿ, ಪಿಎಸ್​ಪಿ?

ಟಿಪಿಎಪಿ ಎಂದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್. ಯುಪಿಐ ಸೇವೆ ಒದಗಿಸುವ ಆ್ಯಪ್ ಇದು. ಫೋನ್ ಪೇ, ಗೂಗಲ್ ಪೇ, ಅಮೇಜಾನ್ ಪೇ, ಕ್ರೆಡ್, ವಾಟ್ಸಾಪ್, ಟೈಮ್​ಪೇ, ಸ್ಯಾಮ್ಸುಂಗ್ ಪೇ, ಮೋಬಿಕ್ವಿಕ್ ಇತ್ಯಾದಿ 25 ಟಿಪಿಎಪಿಗಳಿಗೆ ಎನ್​ಪಿಸಿಐ ಅನುಮತಿ ನೀಡಿದೆ.

ಈ ಟಿಪಿಎಪಿಗಳಿಗೆ ಬ್ಯಾಂಕಿಂಗ್ ಸೇವೆಯ ನೆರವು ಒದಗಿಸುವುದು ಪೇಮೆಂಟ್ಸ್ ಸರ್ವಿಸ್ ಪ್ರೊವೈಡರ್​ಗಳು. ಒಂದೊಂದು ಟಿಪಿಎಪಿಗಳು ಒಂದು ಅಥವಾ ಹೆಚ್ಚು ಪಿಎಸ್​ಪಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಎಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಆರ್​ಬಿಎಲ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್, ಐಸಿಐಸಿಐ, ಎಸ್​ಬಿಐ, ಎಚ್​ಡಿಎಫ್​ಸಿ, ಇಂಡಸ್​ಇಂಡ್ ಮೊದಲಾದವು ಪೇಮೆಂಟ್ ಸರ್ವಿಸ್ ಪ್ರೊವೈಡರ್​ಗಳಾಗಿವೆ. ನೀವು ಯಾವುದೇ ಟಿಪಿಎಪಿ ಪ್ಲಾಟ್​ಫಾರ್ಮ್​ನಲ್ಲಿ ಯುಪಿಐ ಐಡಿ ಮೂಲಕ ಪಿಎಸ್​ಪಿ ಯಾವುದೆಂದು ತಿಳಿಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ