ಡಿಎ, ಡಿಆರ್ ಶೇ. 4ರಷ್ಟು ಹೆಚ್ಚಳ; ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಖುಷಿ ಸುದ್ದಿ
7th Pay Commission Update: DA and DR Hike to 50%: ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ತುಟ್ಟಿಭತ್ಯೆಯು ಮೂಲ ವೇತನದ ಮೇಲೆ ಶೇ. 50ಕ್ಕೆ ಏರಿದೆ. 49.18 ಲಕ್ಷ ಸರ್ಕಾರಿ ಉದ್ಯೋಗಿಗಳು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಹೆಚ್ಚು ಸಂಬಳ ಸಿಗಲಿದೆ. ಈ ತುಟ್ಟಿಭತ್ಯೆ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 12,868 ಕೋಟಿ ರೂ ವೆಚ್ಚವಾಗಲಿದೆ.
ನವದೆಹಲಿ, ಮಾರ್ಚ್ 14: ನಿರೀಕ್ಷೆಯಂತೆ ಡಿಎ ಮತ್ತು ಡಿಆರ್ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಎ ಮತ್ತು ಡಿಆರ್ ಅನ್ನು 4 ಪ್ರತಿಶತದಷ್ಟು ಏರಿಕೆ ಮಾಡಲಾಗಿದೆ. ಪಿಐಬಿ ಪ್ರಕಟಣೆಯಲ್ಲಿ ಇದನ್ನು ಖಚಿತಪಡಿಸಲಾಗಿದೆ. ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಇದರಿಂದ ಅನುಕೂಲವಾಗಲಿದ್ದು, ಕೈಗೆ ಸಿಗುವ ಸಂಬಳ ಹೆಚ್ಚಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ (DA and DR hike) ಎರಡೂ ಕೂಡ ಶೇ. 50ಕ್ಕೆ ಏರಿವೆ.
ಡಿಯರ್ನೆಸ್ ಅಲೋಯನ್ಸ್ ಶೇ. 46 ಇದ್ದದ್ದು ಶೇ. 50 ಆಗಲಿದೆ. ಡಿಯರ್ನೆಸ್ ರಿಲೀಫ್ ಕೂಡ ಶೇ. 50ಕ್ಕೆ ಏರಿದೆ. 2024ರ ಜನವರಿಯಿಂದ ಈ ಏರಿಕೆ ಅನ್ವಯ ಆಗಲಿದೆ. ಏಪ್ರಿಲ್ನಲ್ಲಿ ಸಿಗುವ ಸಂಬಳ ಮತ್ತು ಪಿಂಚಣಿಯಲ್ಲಿ ಈ ಏರಿಕೆ ಸಿಗುತ್ತದೆ. ಜನವರಿಯಿಂದ ಮಾರ್ಚ್ವರೆಗಿನ ಡಿಎ ಮತ್ತು ಡಿಆರ್ ಹೆಚ್ಚಳದ ಹಣವು ಅರಿಯರ್ಸ್ ಸಮೇತ ಸಿಗಲಿದೆ.
ಡಿಎ ಮತ್ತು ಡಿಆರ್ ಹೆಚ್ಚಳದ ಜೊತೆ ಜೊತೆಗೆ ಟ್ರಾನ್ಸ್ಪೋರ್ಟ್, ಡೆಪ್ಯುಟೇಶನ್ ಮತ್ತು ಕ್ಯಾಂಟೀನ್ ಅಲೋಯನ್ಸ್ ಶೇ. 25ರಷ್ಟು ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಕ್ಕೆ ಈ ಡಿಎ ಮತ್ತು ಡಿಆರ್ ನೀಡಿಕೆಯಿಂದ ವರ್ಷಕ್ಕೆ 12,868.72 ಕೋಟಿ ರೂ ವೆಚ್ಚವಾಗುತ್ತದೆ.
ಡಿಎ, ಡಿಆರ್ ಯಾಕೆ ನೀಡಲಾಗುತ್ತದೆ?
ಹಣದುಬ್ಬರದಿಂದಾಗಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಪ್ರಯೋಜನಕ್ಕೆ ಬಾರದೇ ಹೋಗುತ್ತದೆ. ಇದನ್ನು ತಪ್ಪಿಸಲು ಹಣಕಾಸು ಆಯೋಗದ ಶಿಫಾರಸು ಪ್ರಕಾರ ಡಿಎ ಮತ್ತು ಡಿಆರ್ಗಳನ್ನು ನೀಡುವ ಕ್ರಮ ಜಾರಿಯಲ್ಲಿದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಇರುವ ಹಣದುಬ್ಬರ ದರದ ಆಧಾರವಾಗಿ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ಎಷ್ಟು ಹೆಚ್ಚಿಸಬೇಕೆಂದು ನಿರ್ಧರಿಸಲಾಗುತ್ತದೆ. ಕಳೆದ ಹಲವು ಅವಧಿಗಳಿಂದಲೂ ನಾಲ್ಕು ಪ್ರತಿಶತದಷ್ಟು ತುಟ್ಟಿಭತ್ಯೆ ಹೆಚ್ಚಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ
ಡಿಎ ಹೆಚ್ಚಳ ಹೇಗೆ?
ಜನವರಿ ತಿಂಗಳಲ್ಲಿ ಉದ್ಯೋಗಿ ಹೊಂದಿರುವ ಮೂಲ ವೇತನಕ್ಕೆ ಹೆಚ್ಚುವರಿಯಾಗಿ ಡಿಎ ಕೊಡಲಾಗುತ್ತದೆ. ಇದನ್ನು ಸಂಬಳದ ಭಾಗವೆಂದು ಅಧಿಕೃತವಾಗಿ ಪರಿಗಣಿಸಲಾಗುವುದಿಲ್ಲ. ಉದ್ಯೋಗಿಯ ಮೂಲ ವೇತನ 20,000 ರೂ ಇದ್ದರೆ, ಶೇ. 50ರಷ್ಟು ಡಿಎ ಎಂದರೆ 10,000 ರೂ ಹೆಚ್ಚುವರಿಯಾಗಿ ಬರುತ್ತದೆ. ಶೇ. 4ರಷ್ಟು ಡಿಎ ಹೆಚ್ಚಳ ಎಂದರೆ, 20,000 ರೂ ಮೂಲವೇತನಕ್ಕೆ 800 ರೂ ಹೆಚ್ಚುವರಿ ಸಿಗುತ್ತದೆ. ಅಂದರೆ ಸಂಬಳದಲ್ಲಿ 800 ರೂನಷ್ಟು ಹೆಚ್ಚಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ