ನವದೆಹಲಿ, ಅಕ್ಟೋಬರ್ 12: ಗಂಗಾಜಲ ಮತ್ತು ಪೂಜಾ ವಸ್ತುಗಳಿಗೆ ಯಾವುದೇ ಜಿಎಸ್ಟಿ ತೆರಿಗೆ ಇಲ್ಲ ಎಂದು ಕೇಂದ್ರ ಸರ್ಕಾರದ ಕಂದಾಯ ಇಲಾಖೆ ಇಂದು (ಅ. 12) ಸ್ಪಷ್ಟಪಡಿಸಿದೆ. ಗಂಗಾ ನದಿಯ ನೀರನ್ನು ಬಾಟಲಿಗಳಲ್ಲಿ ತುಂಬಿಸಿ (Gangajal) ಮಾರಾಟ ಮಾಡಿದರೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂಬಂತಹ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (CBIC- central board of indirect taxes and customs) ಟ್ವೀಟ್ ಮೂಲಕ ಅನುಮಾನಗಳಿಗೆ ತೆರೆ ಎಳೆದಿದೆ.
‘ದೇಶಾದ್ಯಂತ ಪ್ರತೀ ಮನೆಗಳಲ್ಲೂ ಪೂಜೆಗೆ ಬಳಸುವ ಗಂಗಾಜಲ ಹಾಗೂ ಪೂಜಾ ಸಾಮಗ್ರಿಗಳನ್ನು ಜಿಎಸ್ಟಿ ವ್ಯಾಪ್ತಿಯನ್ನು ಹೊರಗಿಡಲಾಗಿದೆ. 2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚಿಸಲಾಗಿದೆ. ಇವುಗಳನ್ನು ಜಿಎಸ್ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಜಿಎಸ್ಟಿ ಜಾರಿಗೆ ಬಂದಾಗಿನಿಂದಲೂ ಈ ಐಟಂಗಳಿಗೆ ಜಿಎಸ್ಟಿ ಇಲ್ಲ,’ ಎಂದು ಸಿಬಿಐಸಿ ಹೇಳಿದೆ.
ಇದನ್ನೂ ಓದಿ: Pranjali Awasthi: 16 ವರ್ಷದ ಬಾಲಕಿ ಪ್ರಾಂಜಲಿ ಅವಸ್ಥಿ ಬಳಿ 100 ಕೋಟಿ ರೂ ಮೌಲ್ಯದ ಕಂಪನಿ
ಕುಂಕುಮ, ಸಿಂದೂರ, ಗಾಜಿನ ಕೈಬಳೆ, ಪ್ಲಾಸ್ಟಿಕ್ ಕೈಬಳೆ, ಕಾಡಿಗೆ, ಅಗರಬತ್ತಿ, ಹಣೆಬೊಟ್ಟು, ಗೋರಂಟಿ, ವಿಭೂತಿ, ಕರ್ಪೂರ ಇತ್ಯಾದಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ಇರುವುದಿಲ್ಲ.
ಸಾಕು ಪ್ರಾಣಿಗಳು, ಮಾಂಸ, ಹಣ್ಣು, ತರಕಾರಿ, ಇತರ ಹಲವು ಅವಶ್ಯಕ ವಸ್ತುಗಳಿಗೂ ಜಿಎಸ್ಟಿ ಇಲ್ಲ.
ಭಾರತದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಜಿಎಸ್ಟಿ ಸಂಗ್ರಹ 1.60 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಕಳೆದ ಏಳು ತಿಂಗಳಿಂದ ಜಿಎಸ್ಟಿ ಸಂಗ್ರಹ 1.5 ಲಕ್ಷ ಕೋಟಿ ರೂ ಗಡಿಗಿಂತ ಮೇಲಿದೆ. ಈ ಹಣಕಾಸು ವರ್ಷದಲ್ಲಿ ಈವರೆಗೆ ಆಗಿರುವ ಸರಾಸರಿ ಮಾಸಿಕ ಜಿಎಸ್ಟಿ ಸಂಗ್ರಹ 1.65 ಲಕ್ಷಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2022-23) ಸರಾಸರಿ ಮಾಸಿಕ ಜಿಎಸ್ಟಿ ಸಂಗ್ರಹ 1.51 ಲಕ್ಷ ಕೋಟಿ ರೂ ಇತ್ತು.
ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ರಾಜ್ಯ ನಂಬರ್ ಒನ್ ಆಗಿದೆ. ವಾಣಿಜ್ಯ ನಗರಿ ಮುಂಬೈನಿಂದ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಆಗುತ್ತದೆ. ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಆಗುವುದು. ಬಹಳಷ್ಟು ಸ್ಟಾರ್ಟಪ್ಗಳು ಮತ್ತು ಉದ್ದಿಮೆಗಳು ಬೆಂಗಳೂರಿನಲ್ಲಿವೆ. ಹೀಗಾಗಿ, ಕರ್ನಾಟಕದಲ್ಲಿ ಜಿಎಸ್ಟಿ ಕಲೆಕ್ಷನ್ಸ್ ಬಹಳ ಅಧಿಕ ಇವೆ. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಹೆಚ್ಚಿನ ಜಿಎಸ್ಟಿ ಸಂಗ್ರಹ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ