
ನಾಗಪುರ್, ಮಾರ್ಚ್ 28: ಟೋಲ್ ಬೂತ್ ವ್ಯವಸ್ಥೆಯನ್ನು (toll booth system) ಸದ್ಯದಲ್ಲೇ ಅಂತ್ಯಗೊಳಿಸಿ ಹೊಸ ಸೆಟಿಲೈಟ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು (satellite toll collection system) ಜಾರಿಗೆ ತರಲಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಇದರೊಂದಿಗೆ ಫಾಸ್ಟ್ಯಾಗ್ ಇದ್ದರೂ ಟೋಲ್ ಬೂತ್ ಮೂಲಕ ಸಾಗಲು ವಿಳಂಬ ಆಗುತ್ತಿರುವ ಸಮಸ್ಯೆಗೆ ಮುಕ್ತಿ ಸಿಗಲಿದೆ. ಹೆದ್ದಾರಿ ಬಳಕೆದಾರರಿಗೆ ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ.
‘ಈಗ ಟೋಲ್ ಅಂತ್ಯಗೊಳಿಸುತ್ತಿದ್ದೇವೆ. ಸೆಟಿಲೈಟ್ ಟೋಲ್ ಕಲೆಕ್ಷನ್ ಸಿಸ್ಟಂ ಬರಲಿದೆ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ನೀವು ರಸ್ತೆಯಲ್ಲಿ ಎಷ್ಟು ಸಮಯ ವಾಹನ ಚಲಾಯಿಸುತ್ತೀರೋ ಅಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ,’ ಎಂದು ನಿತಿನ್ ಗಡ್ಕರಿ ಹೇಳಿದರೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಿತಿನ್ ಗಡ್ಕರಿ ಹೇಳಿಕೆ
ಸದ್ಯ ಟೋಲ್ ತೆರಿಗೆ ತೀರಾ ಹೆಚ್ಚಾಗಿದೆ ಎಂದು ಬರುತ್ತಿರುವ ಆಕ್ಷೇಪಗಳಿಗೆ ಸಚಿವರು ಇದೇ ವೇಳೆ ಪ್ರತಿಕ್ರಿಯಿಸಿದ್ದು, ಟೋಲ್ ದರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಟೋಲ್ ದರ ಹೆಚ್ಚಾದರೂ ಇದರಿಂದ ವಾಹನ ಸವಾರರಿಗೆ ಸಮಯ ಮತ್ತು ಇಂಧನ ಎರಡೂ ಉಳಿತಾಯ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು
‘ಈ ಮುಂಚೆ ಮುಂಬೈನಿಂದ ಪುಣೆಗೆ ರಸ್ತೆ ಮೂಲಕ ಹೋಗಲು ಒಂಬತ್ತು ಗಂಟೆ ಬೇಕಾಗುತ್ತಿತ್ತು. ಈಗ ಇದು ಎರಡು ಗಂಟೆಯ ಪ್ರಯಾಣ ಮಾತ್ರವೇ ಆಗಿದೆ. ಏಳು ಗಂಟೆಗಳ ಡೀಸಲ್ ಖರ್ಚು ಉಳಿದಿದೆ. ಸ್ವಾಭಾವಿಕವಾಗಿ ನಾವು ಇದಕ್ಕೆ ಬೆಲೆ ಕೊಡಲೇ ಬೇಕಲ್ಲವಾ. ನಾವಿದನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಹೂಡಿಕೆಯ ಮೂಲಕ ಮಾಡುತ್ತಿದ್ದೇವೆ. ಇದಕ್ಕೆ ಹಣ ತೆರಬೇಕಾಗುತ್ತದೆ,’ ಎಂದಿದ್ದಾರೆ ಕೇಂದ್ರ ಸಾರಿಗೆ ಸಚಿವರು.
‘ದೇಶದ ಹಣೆಬರಹ 2024ರ ಅಂತ್ಯದಲ್ಲಿ ಬದಲಾಗುತ್ತದೆ. ಅಮೆರಿಕದಲ್ಲಿರುವ ಹೆದ್ದಾರಿಗಳಿಗೆ ಸರಿಸಮವಾಗಿ ನಮ್ಮ ರಾಷ್ಟ್ರೀಯ ಹೆದ್ದಾರಿ ಜಾಲ ಸಿದ್ಧವಾಗುತ್ತಿದೆ. ಇದು ನನ್ನ ಗುರಿ. ಇದರಲ್ಲಿ ನಾನು ಖಂಡಿತವಾಗಿ ಯಶಸ್ವಿಯಾಗುತ್ತೇನೆ’ ಎಂದು ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು
ಭಾರತಮಾಲ ಪರಿಯೋಜನದಲ್ಲಿ 26,000 ಕಿಮೀ ಆರ್ಥಿಕ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವ ಗುರಿ ಇದೆ. ಗೋಲ್ಡನ್ ಕ್ವಾಡ್ರಿಲಾಟರಲ್ ಮತ್ತು ನಾರ್ತ್ ಸೌತ್ ಈಸ್ಟ್ ವೆಸ್ಟ್ ಕಾರಿಡಾರ್ ಹಅಗೂ ಭಾರತಮಾಲ ಪರಿಯೋಜನ ಕಾರಿಡಾರ್ಗಳು ಬಹಳ ಮಹತ್ವದಿದ್ದು, ಇವು 2024ರೊಳಗೆ ಭಾರತದ ಹೊಸ ಭವಿಷ್ಯಕ್ಕೆ ನಾಂದಿ ಹಾಡಬಲ್ಲುವು ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Thu, 28 March 24