AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು

Kalyani Family legal dispute: ಭಾರತ್ ಫೋರ್ಜ್​ನ ಮುಖ್ಯಸ್ಥ ಬಾಬಾಸಾಹೇಬ ಕಲ್ಯಾಣಿ ಹಾಗೂ ಇತರ ಕೆಲವರ ಮೇಲೆ ಅವರ ಸೋದರ ಕುಟುಂಬದವರು ಆಸ್ತಿಗಾಗಿ ಕಾನೂನು ಮೊರೆ ಹೋಗಿದ್ದಾರೆ. ಸಮೀರ್ ಜೈ ಹಿರೇಮಠ್ ಮತ್ತು ಪಲ್ಲವಿ ಅನೀಶ್ ಸ್ವಾದಿ ಎಂಬುವವರು ಬಾಬಾ ಕಲ್ಯಾಣಿ, ಅವರ ಮಗ ಅಮಿತ್, ಇತರ ಸದಸ್ಯರಾದ ಗೌರಿಶಂಕರ್, ಶೀತಲ್, ವಿರಾಜ್, ಸುಗಂಧಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೂಡು ಕುಟುಂಬ ಇದ್ದಾಗ ಶುರುವಾಗಿದ್ದ ಬಿಸಿನೆಸ್​ನಲ್ಲಿ ಆ ಆಸ್ತಿಯ ಹಕ್ಕನ್ನು ನ್ಯಾಯಯುತವಾಗಿ ಹಂಚಲಾಗಿಲ್ಲ ಎಂಬುದು ದೂರುದಾರರು ಮಾಡುತ್ತಿರುವ ಆರೋಪ.

ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು
ಬಾಬಾ ಕಲ್ಯಾಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 27, 2024 | 12:47 PM

Share

ಪುಣೆ, ಮಾರ್ಚ್ 27: ವಿಶ್ವದ ಎರಡನೇ ಅತಿದೊಡ್ಡ ಫೋರ್ಜಿಂಗ್ ತಯಾರಕ ಸಂಸ್ಥೆಯಾದ ಭಾರತ್ ಫೋರ್ಜ್​ನ ಛೇರ್ಮನ್ ಮತ್ತು ಎಂಡಿ ಬಾಬಾ ಕಲ್ಯಾಣಿಯ (Babasaheb Kalyani) ಆಸ್ತಿಯಲ್ಲಿ ಪಾಲು ಕೇಳಿ ಸಂಬಂಧಿಗಳು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕಲ್ಯಾಣಿ ಕುಟುಂಬದ ಆಸ್ತಿಗಳಲ್ಲಿ ತಮಗೆ ಪಾಲು ಬರಬೇಕಿದೆ ಎಂದು ಅವರ ಸೋದರಿ ಮಕ್ಕಳಾದ ಸಮೀರ್ ಜೈ ಹಿರೇಮಠ ಮತ್ತು ಪಲ್ಲವಿ ಅನೀಶ್ ಸ್ವಾದಿ ಅವರು ಮೊಕದ್ದಮೆ ಹಾಕಿದ್ದಾರೆ. ಕುಟುಂಬದ ಆಸ್ತಿಗಳನ್ನು ಸರಿಯಾಗಿ ಹಂಚದೆ ಬಾಬಾ ಕಲ್ಯಾಣಿ ತಾವೇ ಎಲ್ಲವನ್ನೂ ಅನುಭವಿಸುತ್ತಿದ್ದಾರೆ. ಈ ಆಸ್ತಿ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಮುಚ್ಚಿಡುತ್ತಿದ್ದಾರೆ ಎಂದು ಸಮೀರ್ ಮತ್ತು ಪಲ್ಲವಿ ಆರೋಪ ಮಾಡುತ್ತಿದ್ದಾರೆ.

ಬಾಬಾ ಕಲ್ಯಾಣಿ, ಅಮಿತ್ ಕಲ್ಯಾಣಿ, ಗೌರಿಶಂಕರ್ ಕಲ್ಯಾಣಿ, ಶೀತಲ್ ಗೌರಿಶಂಕರ್ ಕಲ್ಯಾಣಿ, ವಿರಾಜ್ ಗೌರಿಶಂಕರ್ ಕಲ್ಯಾಣಿ, ಸುಗಂಧಾ ಜೈ ಹಿರೇಮಠ ಅವರ ಬಳಿ ಇರುವ ಅವಿಭಜಿತ ಕಲ್ಯಾಣಿ ಕುಟುಂಬದ ಆಸ್ತಿಗಳಲ್ಲಿನ ಸರಿಯಾದ ಪಾಲನ್ನು ತಮಗೆ ನೀಡಬೇಕೆಂದು ನಿರ್ದೇಶಿಸಬೇಕು ಎಂದು ಸಮೀರ್ ಮತ್ತು ಪಲ್ಲವಿ ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್

ಕಲ್ಯಾಣಿ ಗ್ರೂಪ್ ಪ್ರತಿಕ್ರಿಯೆ

‘ನಮಗೆ ಇನ್ನೂ ಯಾವ ನೋಟೀಸ್ ಬಂದಿಲ್ಲ. ನಮ್ಮ ಬಗ್ಗೆ ಮಾಡಲಾಗಿರುವ ಆರೋಪದ ಬಗ್ಗೆ ಈಗಲೇ ಮಾತನಾಡುವುದು ತಪ್ಪಾಗುತ್ತದೆ. ಈ ಆರೋಪ ವಾಸ್ತವಕ್ಕೆ ದೂರವಾಗಿದೆ. ದುರುದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ,’ ಎಂದು ಕಲ್ಯಾಣಿ ಗ್ರೂಪ್​ನ ವಕ್ತಾರರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕಲ್ಯಾಣಿ ಗ್ರೂಪ್ ಹಾಗೂ ಭಾರತ್ ಫೋರ್ಜ್ ಸಂಸ್ಥೆಯನ್ನು 1961ರ ಜೂನ್ 19ರಂದು ನೀಲಕಂಠರಾವ್ ಕಲ್ಯಾಣಿ ಸ್ಥಾಪಿಸಿದ್ದರು. ಆಗ ಇವರ ಕೂಡು ಕುಟುಂಬದ ಮುಖ್ಯಸ್ಥರಾಗಿದ್ದವರು ಅಣ್ಣಪ್ಪ ಕಲ್ಯಾಣಿ. ಇವರ ಮಾರ್ಗದರ್ಶನದಲ್ಲಿ ವ್ಯವಹಾರ ಆರಂಭಿಸಲಾಯಿತು ಎನ್ನಲಾಗಿದೆ. ಈಗಿನ ಛೇರ್ಮನ್ ಆಗಿರುವ ಬಾಬಾ ಕಲ್ಯಾಣಿ ಅವರು ನೀಲಕಂಠರಾವ್ ಅವರ ಮಗ. ಆಗ ಜಾಯಿಂಟ್ ಫ್ಯಾಮಿಲಿಯ ಭಾಗವಾಗಿದ್ದ ಸದಸ್ಯರ ಸಂತಾನದವರು ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ

ಕಲ್ಯಾಣಿ ಕುಟುಂಬದವರು ಪುಣೆಯವರಾದರೂ ಕರ್ನಾಟಕದ ನಂಟಿರುವವರಾಗಿದ್ದಾರೆ. ಕಲ್ಯಾಣಿ ಗ್ರೂಪ್ ಅಡಿಯಲ್ಲಿ ಬಹಳಷ್ಟು ಕಂಪನಿಗಳು ನಡೆಯುತ್ತಿವೆ. ಭಾರತ್ ಫೋರ್ಜ್ ಅತಿದೊಡ್ಡ ಕಂಪನಿ. ಜರ್ಮನಿಯ ಟಿಸನ್​ಕ್ರುಪ್ (ThyssenKrupp) ಬಿಟ್ಟರೆ ಫೋರ್ಜಿಂಗ್ ತಯಾರಿಕೆಯಲ್ಲಿ ಭಾರತ್ ಫೋರ್ಜ್ ಅತಿದೊಡ್ಡ ಕಂಪನಿ.

ಬಾಬಾ ಕಲ್ಯಾಣಿ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನಲ್ಲಿ ಓದಿದವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ