AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪೇಪರ್ ವೆಲ್ತ್ ಹೆಚ್ಚು; ನಿಜವಾದ ಸಂಪತ್ತಲ್ಲ: ನಿಖಿಲ್ ಕಾಮತ್ ಹೀಗಂದಿದ್ದು ಯಾಕೆ?

Nikhil Kamath on Bengaluru's Wealth: ಬೆಂಗಳೂರಿನಲ್ಲಿರುವವರು ಮೇಲ್ನೋಟಕ್ಕೆ ಶ್ರೀಮಂತರು ಅಷ್ಟೇ. ನಿಜವಾದ ಶ್ರೀಮಂತಿಕೆ ಅವರಲ್ಲಿಲ್ಲ ಎಂದು ಝೀರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಪೇಪರ್ ವೆಲ್ತ್ ಇದೆಯೇ ಹೊರತು ರಿಯಲ್ ಮನಿ ಇಲ್ಲ ಎನ್ನುವುದು ಅವರ ಅನಿಸಿಕೆ. ರಿಯಲ್ ಎಸ್ಟೇಟ್ ಆಸ್ತಿಮೌಲ್ಯ ಅಸ್ವಾಭಾವಿಕವಾಗಿ ಹೆಚ್ಚಾಗುವುದರ ಬಗ್ಗೆ ಕಾಮತ್ ಈ ಹಿಂದೆ ಒಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬೆಂಗಳೂರಿನಲ್ಲಿ ಪೇಪರ್ ವೆಲ್ತ್ ಹೆಚ್ಚು; ನಿಜವಾದ ಸಂಪತ್ತಲ್ಲ: ನಿಖಿಲ್ ಕಾಮತ್ ಹೀಗಂದಿದ್ದು ಯಾಕೆ?
ನಿಖಿಲ್ ಕಾಮತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2024 | 12:58 PM

Share

ನವದೆಹಲಿ, ಮಾರ್ಚ್ 26: ಮಾಧ್ಯಮಗಳಲ್ಲಿ ಬಹಳಷ್ಟು ಮಾತನಾಡುವ ಮತ್ತು ನೇರಾ ನೇರವಾಗಿ ವಿಚಾರಗಳನ್ನು ಮಂಡಿಸುವ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಈಗ ಬೆಂಗಳೂರಿನ ವಾಸ್ತವ ಚಿತ್ರಣವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ದಿ ಪ್ರಿಂಟ್ ವೆಬ್​ಸೈಟ್​ಗೆ ನೀಡಿದ ಸಂದರ್ಶನವೊಂದರಲ್ಲಿ ನಿಖಿಲ್ ಕಾಮತ್ ಅವರು ಬೆಂಗಳೂರಿಗರು ಮೇಲ್ನೋಟಕ್ಕೆ ಮಾತ್ರ ಸಿರಿವಂತರಂತೆ ಕಾಣುತ್ತಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಕಾಗದ ಸಂಪತ್ತು (paper wealth) ಇದೆ. ಇದರಿಂದ ಹೆಚ್ಚು ಶ್ರೀಮಂತ ಎಂಬಂತೆ ತೋರುತ್ತದೆ ಎಂಬುದು ಅವರ ಅನಿಸಿಕೆ.

‘ಇದು ರಿಯಲ್ ಹಣ ಅಲ್ಲ. ಬೆಂಗಳೂರಿನಲ್ಲಿ ಅತಿಹೆಚ್ಚು ಪೇಪರ್ ವೆಲ್ತ್ ಇದೆ. ಆದರೆ, ಬಳಕೆಯೋಗ್ಯ ಸಂಪತ್ತು ಇಲ್ಲ’ ಎಂದು ನಿಖಿಲ್ ಕಾಮತ್ ಹೇಳುತ್ತಾರೆ. ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುವ ಎಂಜಿನಿಯರುಗಳಿಗೆ ಕಂಪನಿಯ ಷೇರುಗಳನ್ನು ಪರಿಹಾರವಾಗಿ ಕೊಡಲಾಗುತ್ತದೆ. ಇಂಥ ಷೇರುಗಳು ಮೇಲ್ನೋಟಕ್ಕೆ ಶ್ರೀಮಂತರನ್ನಾಗಿಸುತ್ತದೆ. ಆದರೆ, ವಾಸ್ತವದಲ್ಲಿ ಈ ಷೇರುಗಳನ್ನು ಹಣಕ್ಕೆ ಪರಿವರ್ತಿಸಲು ಆಗುವುದಿಲ್ಲ. ನಿಖಿಲ್ ಕಾಮತ್ ಈ ವಿಚಾರವನ್ನು ಪ್ರಸ್ತಾಪಿಸಿರಬಹುದು.

ಪೇಪರ್ ವೆಲ್ತ್ ಮತ್ತು ರಿಯಲ್ ವೆಲ್ತ್​ಗೂ ಏನು ವ್ಯತ್ಯಾಸ?

ಹಲವು ವರ್ಷಗಳ ಹಿಂದೆ ನೀವು ಖರೀದಿಸಿದ ಆಸ್ತಿಯ ಮೌಲ್ಯ ಈಗ 10 ಪಟ್ಟು ಹೆಚ್ಚಾಗಿರುತ್ತದೆ. ನೀವು ಆ ಆಸ್ತಿಯನ್ನು ಮಾರಲಿದ್ದರೆ ಅದು ರಿಯಲ್ ಮೌಲ್ಯವೇ. ಆದರೆ, ನೀವು ಅದನ್ನು ಮಾರದೇ ಹಾಗೇ ಇಟ್ಟುಕೊಳ್ಳಬೇಕೆಂದಿದ್ದರೆ ಅದು ಎಷ್ಟೇ ಮೌಲ್ಯ ಹೆಚ್ಚಾದರೂ ಪೇಪರ್ ವೆಲ್ತ್ ಆಗಿಯೇ ಪರಿಗಣಿತವಾಗುತ್ತದೆ. ನಿಜವಾದ ಸಂಪತ್ತು ಎನಿಸುವುದಿಲ್ಲ.

ಇದನ್ನೂ ಓದಿ: ಮಗ ಯಾಕೆ ಮನೆಗೆ ಕರೆದ ಗೊತ್ತಿಲ್ಲ; ಏನೋ ಇದೆ ಮರ್ಮ: ಮಾಜಿ ರೇಮಂಡ್ ಮುಖ್ಯಸ್ಥ ವಿಜಯ್​ಪತ್ ಹೇಳಿಕೆ

ನಿಖಿಲ್ ಕಾಮತ್ ಈ ರೀತಿ ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಅಸ್ವಾಭಾವಿಕವಾಗಿ ಏರಿಕೆ ಆಗುವುದರ ಬಗ್ಗೆ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ಆಸ್ತಿ ಖರೀದಿಗೆ ಮತ್ತು ಅಭಿವೃದ್ಧಿಗೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಆ ಆಸ್ತಿಯ ಬಾಡಿಗೆಯಿಂದ ಸಿಗುವ ಆದಾಯ ಬಹಳ ಕಡಿಮೆ. ಬ್ಯಾಂಕ್ ಬಡ್ಡಿದರಕ್ಕೆ ಹೋಲಿಸಿದರೂ ಬಾಡಿಗೆ ದರ ಬಹಳ ಕಡಿಮೆ ಆಯಿತು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದ ಅವರು, ಸ್ವಂತ ಮನೆ ಬದಲು ಬಾಡಿಗೆ ಮನೆಯೇ ಲೇಸು ಎಂದಿದ್ದರು.

ಕಾಲ್ ಸೆಂಟರ್ ಕೆಲಸ ನೆನಪಿಸಿಕೊಂಡ ಕಾಮತ್

ಕೆಲ ಸಂಕೀರ್ಣ ಮನಸ್ಥಿತಿಯನ್ನು ಸರಳವಾಗಿ ವ್ಯಕ್ತಪಡಿಸುವ ಸ್ವಭಾವದ ನಿಖಿಲ್ ಕಾಮತ್, ತಾವು ಹಿಂದೆ ಕಾಲ್ ಸೆಂಟರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ

ಹದಿನೇಳನೇ ವಯಸ್ಸಿನಲ್ಲಿ ಕಾಮತ್ ಅವರು ಸ್ಟೋನ್ ಬ್ರಿಡ್ಜ್ ಎಂಬ ಆಕ್ಸಿಡೆಂಟ್ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಅದು ಅವರಿಗೆ ಮೊದಲ ಉದ್ಯೋಗ. ಎಂಟು ಸಾವಿರ ರೂ ಸಂಬಳ ಪಡೆಯುತ್ತಿದ್ದರು. ಆಗ ಅವರಿಗೆ ಏನೋ ತೃಪ್ತಭಾವನೆ ನೆಲಸಿತ್ತು. ಯಾವಾಗ ಇವರ ಸ್ನೇಹಿತರು ಓದು ಪೂರ್ಣಗೊಳಿಸಿ ಕೆಲಸ ಮಾಡಲು ಆರಂಭಿಸಿದರೋ ಕಾಮತ್​ಗೆ ಅಭದ್ರ ಭಾವನೆ ಕಾಡತೊಡಗಿತಂತೆ. ಹಾಗಂತ ಅವರು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ