ಮಗ ಯಾಕೆ ಮನೆಗೆ ಕರೆದ ಗೊತ್ತಿಲ್ಲ; ಏನೋ ಇದೆ ಮರ್ಮ: ಮಾಜಿ ರೇಮಂಡ್ ಮುಖ್ಯಸ್ಥ ವಿಜಯ್​ಪತ್ ಹೇಳಿಕೆ

Vijaypat Singhania vs Gautam Singhania: ನನ್ನ ತಂದೆ ಮನೆಗೆ ಬಂದು ನನಗೆ ಆಶೀರ್ವದಿಸಿದರು. ಅವರಿಗೆ ಉತ್ತಮ ಆರೋಗ್ಯ ಸಿಗಲೆಂದು ಎಂದಿನಂತೆ ಹಾರೈಸುತ್ತೇನೆ ಎಂದು ರೇಮಂಡ್ ಗ್ರೂಪ್ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರ ತಂದೆ ವಿಜಯ್​ಪತ್ ಸಿಂಘಾನಿಯಾ, ತಾನು ಮಗನ ಜೊತೆ ವೈಮನಸ್ಸು ತೊರೆದಿದ್ದೇನೆ ಎನ್ನುವುದೆಲ್ಲ ಸುಳ್ಳು. ಏನೋ ಚಿತಾವಣೆಯಿಂದ ಮಗ ಮನೆಗೆ ಕರೆಸಿ ಫೋಟೋ ತೆಗೆದು ಕಳುಹಿಸಿದ್ದಾನೆ. ಮತ್ತೆ ಆ ಮನೆಗೆ ಕಾಲಿಡುವುದಿಲ್ಲ ಎಂದು ರೇಮಂಡ್ ಕಂಪನಿಯ ಸಂಸ್ಥಾಪಕರೂ ಆಗಿರುವ ವಿಜಯ್​ಪತ್ ಹೇಳಿದ್ದಾರೆ.

ಮಗ ಯಾಕೆ ಮನೆಗೆ ಕರೆದ ಗೊತ್ತಿಲ್ಲ; ಏನೋ ಇದೆ ಮರ್ಮ: ಮಾಜಿ ರೇಮಂಡ್ ಮುಖ್ಯಸ್ಥ ವಿಜಯ್​ಪತ್ ಹೇಳಿಕೆ
ಗೌತಮ್ ಸಿಂಘಾನಿಯಾ, ವಿಜಯಪತ್ ಸಿಂಘಾನಿಯಾ
Follow us
|

Updated on: Mar 26, 2024 | 12:02 PM

ಮುಂಬೈ, ಮಾರ್ಚ್ 26: ರೇಮಂಡ್ ಸಂಸ್ಥೆಯ ಮುಖ್ಯಸ್ಥ ಗೌತಮ್ ಸಿಂಘಾನಿಯಾ (Gautam Singhania) ಕುಟುಂಬದ ಜಗಳ ಈಗ ಬಹಳ ಜಗಜ್ಜಾಹೀರು ಆಗಿದೆ. ಅಪ್ಪ ಮತ್ತು ಹೆಂಡತಿ ಇಬ್ಬರನ್ನೂ ಗೌತಮ್ ದೂರ ತಳ್ಳಿ ವಿವಾದಿತ ವ್ಯಕ್ತಿ ಎನಿಸಿದ್ದಾರೆ. ಇದೇ ಹೊತ್ತಲ್ಲಿ ತನ್ನ ತಂದೆ ಜೊತೆ ಇರುವ ಫೋಟೋವೊಂದನ್ನು ಗೌತಮ್ ಸಿಂಘಾನಿಯಾ ಕಳೆದ ವಾರ (ಮಾರ್ಚ್ 20) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಗೌತಮ್ ಸಿಂಘಾನಿಯಾ ಮತ್ತು ತಂದೆ ವಿಜಯ್​ಪತ್ (Vijaypat Singhania) ಇಬ್ಬರೂ ಮುನಿಸು ಬಿಟ್ಟು ಮತ್ತೆ ಒಂದಾಗಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಸೃಷ್ಟಿಯಾಗುತ್ತಾ ತೊಡಗಿದೆ. ಈ ಹಿನ್ನೆಲೆಯಲ್ಲಿ ವಿಜಯಪತ್ ಸಿಂಘಾನಿಯಾ ಪ್ರತಿಕ್ರಿಯಿಸಿದ್ದು, ಮಗನ ಜೊತೆ ಮತ್ತೆ ಒಂದಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾನು ಮಗನ ಮನೆಗೆ ಹೋಗಿದ್ದು ನಿಜ. ಆದರೆ, ಅವನ ಜೊತೆ ತಾನು ಭಿನ್ನಾಭಿಪ್ರಾಯ ಬಿಟ್ಟು ಒಂದಾಗುತ್ತಿದ್ದೇನೆ ಎಂಬುದು ಸುಳ್ಳು. ತನ್ನನ್ನು ಉದ್ದೇಶಪೂರ್ವಕವಾಗಿ ಆ ಮನೆಗೆ ಕರೆಸಿಕೊಳ್ಳಲಾಗಿತ್ತು ಎಂದು ಸಂಚಿನ ಶಂಕೆ ಬಿಚ್ಚಿಟ್ಟಿದ್ದಾರೆ ವಿಜಯ್​ಪತ್ ಸಿಂಘಾನಿಯಾ.

‘ನನ್ನ ತಂದೆ ಮನೆಗೆ ಬಂದು ನನಗೆ ಆಶೀರ್ವಾದಿಸಿದ್ದು ಖುಷಿಯಾಗಿದೆ. ನಿಮಗೆ ಒಳ್ಳೆಯ ಆರೋಗ್ಯ ಸಿಗಲಿ ಎಂದು ಎಂದಿನಂತೆ ಹಾರೈಸುತ್ತೇನೆ’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಮತ್ತು ಇನ್ಸ್​ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ತಂದೆ ಜೊತೆ ನಿಂತಿರುವ ಫೋಟೋವನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ

ವಿಜಯಪತ್ ಸಿಂಘಾನಿಯಾ ಪ್ರತಿಕ್ರಿಯೆ

‘ಮಾರ್ಚ್ 20ರಂದು ನಾನು ಏರ್​ಪೋರ್ಟ್​ಗೆ ಹೋಗುತ್ತಿದ್ದೆ. ಆಗ ನನ್ನ ಮಗನ ಸಹಾಯಕರು ಜೆಕೆ ಹೌಸ್​ಗೆ ಬರುವಂತೆ ಮನವಿ ಮಾಡಿದರು. ನಾನು ನಿರಾಕರಿಸಿದ ಬಳಿಕ ಗೌತಮ್ ಆನ್​ಲೈನ್​ಗೆ ಬಂದು, ಮನವಿ ಮಾಡಿದ. ಐದು ನಿಮಿಷ ಬಂದು ಒಂದು ಕಪ್ ಕಾಫಿ ಕುಡಿದು ಹೋಗಿ ಎಂದು ಕೇಳಿಕೊಂಡ.

‘ನಾನು ಒಲ್ಲದ ಮನಸ್ಸಿನಿಂದಲೇ ಹೋದೆ. ಗೌತಮ್ ಜೊತೆ ನಾನಿರುವ ದೃಶ್ಯ ಸೆರೆ ಹಿಡಿಯುವ ಉದ್ದೇಶ ಇದೆ ಎಂಬುದು ಗೊತ್ತಾಗಲಿಲ್ಲ. ಕೆಲ ನಿಮಿಷಗಳ ಬಳಿಕ ನಾನು ಅಲ್ಲಿಂದ ನಿರ್ಗಮಿಸಿ ಏರ್​ಪೋರ್ಟ್​ಗೆ ಹೋದೆ. ಸ್ವಲ್ಪವೇ ಹೊತ್ತಿನಲ್ಲಿ ಇಂಟರ್ನೆಟ್​ನಲ್ಲಿ ನಾನು ಗೌತಮ್ ಜೊತೆ ಇರುವ ಫೋಟೋ ಹರಿದಾಡತೊಡಗಿತ್ತು. ನಾವಿಬ್ಬರು ಮತ್ತೆ ಒಂದಾಗಿದ್ದೇವೆಯಾ ಎಂದು ನನಗೆ ಮೆಸೇಜ್​ಗಳು ಬರತೊಡಗಿದವು. ಇದೆಲ್ಲವೂ ಸಂಪೂರ್ಣ ಸುಳ್ಳು,’ ಎಂದು ವಿಜಯ್​ಪತ್ ಸಿಂಘಾನಿಯಾ ಹೇಳಿದ್ದಾರೆ.

ಮತ್ತೆ ಕಾಲಿಡುವುದಿಲ್ಲ ಎನ್ನುವ ವಿಜಯಪತ್

ಆತನ ನಿಜವಾದ ಉದ್ದೇಶ ಏನು ಎಂದು ಗೊತ್ತಿಲ್ಲ. ಜೆಕೆ ಹೌಸ್​ಗೆ ನನ್ನನ್ನು ಆತ ಕರೆಸಿದ್ದು ಕಾಫಿಗೂ ಅಲ್ಲ, ಅಥವಾ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲೂ ಅಲ್ಲ. 10 ವರ್ಷದಲ್ಲಿ ಮೊದಲ ಬಾರಿಗೆ ನಾನು ಜೆಕೆ ಹೌಸ್​ಗೆ ಕಾಲಿಟ್ಟಿದ್ದು. ಮತ್ತೊಮ್ಮೆ ಅಲ್ಲಿಗೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ ವಿಜಯ್​ಪತ್ ಸಿಂಘಾನಿಯಾ.

ಇದನ್ನೂ ಓದಿ: ಅಮೂಲ್​ನ ತಾಜಾ ಹಾಲು ಮೊದಲ ಬಾರಿಗೆ ಅಮೆರಿಕದಲ್ಲಿ; ಕೆಎಂಎಫ್​ನ ಹಾಲು ವಿದೇಶಗಳಲ್ಲಿ ಸಿಗುತ್ತಾ?

ವಿಜಯ್​ಪತ್ ಸಿಂಘಾನಿಯಾ ಅವರು ರೇಮಂಡ್ ಸಂಸ್ಥೆಯ ಸಂಸ್ಥಾಪಕರು. ತಮ್ಮ ಬಹುತೇಕ ಆಸ್ತಿ ಮತ್ತು ಕಂಪನಿಯ ಆಡಳಿತವನ್ನು ಮಗನಿಗೆ ಕೊಟ್ಟಿದ್ದರು. ಅದಾದ ಬಳಿಕ ಗೌತಮ್ ಸಿಂಘಾನಿಯಾ ತನ್ನ ತಂದೆಯನ್ನು ಕಂಪನಿಯಿಂದ ಮತ್ತು ಮನೆಯಿಂದ ಹೊರಹಾಕಿದರು ಎನ್ನುವಂತಹ ಆರೋಪ ಇದೆ. ಒಂದು ಕಾಲದಲ್ಲಿ ಬಿಲಿಯನೇರ್ ಆಗಿದ್ದ ವಿಜಯ್​ಪತ್ ಈಗ ಸಾಧಾರಣ ಜೀವನ ನಡೆಸುತ್ತಿದ್ದಾರೆ.

ಪತ್ನಿಗೆ ಡಿವೋರ್ಸ್?

ಇದೇ ವೇಳೆ, ಗೌತಮ್ ಸಿಂಘಾನಿಯಾ ಅವರ ವೈವಾಹಿಕ ಜೀವನ ಕೂಡ ವಿವಾದದ ವಿಚಾರವಾಗಿತ್ತು. ಗೌತಮ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಮನೆಗೆ ಸೇರಿಸುತ್ತಿಲ್ಲ ಎಂದು ಅವರ ಪತ್ನಿ ನವಾಜ್ ಮೋದಿ ಕಳೆದ ವರ್ಷ ಆರೋಪ ಮಾಡಿದ್ದರು. ಅದಾದ ಬಳಿಕ ಗೌತಮ್ ಅವರು ತಾನು ಮತ್ತು ನವಾಜ್ ಮೋದಿ ಪರಸ್ಪರ ಸಮ್ಮತವಾಗಿ ಬೇರೆಯಾಗಿದ್ದೇವೆ ಎಂದು ಹೇಳಿದ್ದರು. ಇವರ ವಿವಾಹ ವಿಚ್ಛೇದನ ಪ್ರಕರಣ ಇನ್ನೂ ಸೆಟಲ್ಮೆಂಟ್ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ