ಅದಾನಿ ಪಾಲಾಗುತ್ತಿದೆ ಗೋಪಾಲಪುರ್ ಪೋರ್ಟ್; ಎಸ್ಪಿ ಗ್ರೂಪ್ನಿಂದ ಷೇರುಪಾಲು ಖರೀದಿ; ಏರುತ್ತಿರುವ ಅದಾನಿ ಪೋರ್ಟ್ಸ್ ಷೇರುಬೆಲೆ
Adani Ports buying Gopalpur ports: ಅದಾನಿ ಪೋರ್ಟ್ಸ್ ಅಂಡ್ ಎಸ್ಇಝಡ್ ಸಂಸ್ಥೆ ಈಗ ಒಡಿಶಾದ ಗೋಪಾಲಪುರ್ ಬಂದರನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಶಾಪೂರ್ಜಿ ಪಲ್ಲಾನ್ಜೀ ಒಡೆತನದಲ್ಲಿರುವ ಗೋಪಾಲಪುರ್ ಪೋರ್ಟ್ಸ್ ಸಂಸ್ಥೆಯ ಬಹುಪಾಲು ಷೇರನ್ನು ಅದಾನಿಯ ಕಂಪನಿ ಖರೀದಿಸುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಅದಾನಿ ಪೋರ್ಟ್ಸ್ನ ಷೇರುಬೆಲೆ ಶುಕ್ರವಾರದಿಂದ ಏರತೊಡಗಿದೆ. ಇದೀಗ ಷೇರುಬೆಲೆ 1,300 ರೂ ದಾಟಿ ಹೋಗಿದೆ.
ನವದೆಹಲಿ, ಮಾರ್ಚ್ 26: ಭಾರತದಲ್ಲಿ ಈಗಾಗಲೇ ಅತಿದೊಡ್ಡ ಬಂದರು ನಿರ್ವಾಹಕ ಎನಿಸಿರುವ ಅದಾನಿ ಪೋರ್ಟ್ಸ್ ಅಂಡ್ ಎಸ್ಇಝಡ್ (Adani Ports & SEZ) ಸಂಸ್ಥೆ ಈಗ ಒಡಿಶಾದ ಗೋಪಾಲಪುರ್ ಪೋರ್ಟ್ಸ್ (Gopalpur Ports) ಕಂಪನಿಯ ಬಹುಪಾಲು ಷೇರನ್ನು ಖರೀದಿಸಲು ಹೊರಟಿದೆ. ಇಂದು ಮಂಗಳವಾರ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ಅದಾನಿ ಪೋರ್ಟ್ಸ್ ನೀಡಿರುವ ಮಾಹಿತಿ ಪ್ರಕಾರ, ಒಡಿಶಾದ ಗೋಪಾಲಪುರ್ ಪೋರ್ಟ್ಸ್ನಲ್ಲಿನ ಶೇ. 95ರಷ್ಟು ಷೇರುಪಾಲನ್ನು 1,349 ಕೋಟಿ ರೂಗೆ ಅದು ಖರೀದಿ ಮಾಡಲಿದೆ. ಈ ಸಂಬಂಧ ಗೋಪಾಲಪುರ್ ಪೋರ್ಟ್ಸ್ನ ಷೇರುದಾರರೊಂದಿಗೆ ಅದಾನಿ ಪೋರ್ಟ್ಸ್ ಒಪ್ಪಂದ ಮಾಡಿಕೊಂಡಿದೆ. ಈ ಗೋಪಾಲ್ಪುರ್ ಪೋರ್ಟ್ಸ್ ಎಸ್ಪಿ ಗ್ರೂಪ್ ಅಥವಾ ಶಾಪೂರ್ಜಿ ಪಲ್ಲಾನ್ಜಿ ಗ್ರೂಪ್ನ ಒಡೆತನದಲ್ಲಿದೆ.
ಗೋಪಾಲಪುರ್ ಪೋರ್ಟ್ಸ್ ಲಿ ಸಂಸ್ಥೆಯಲ್ಲಿ ಎಸ್ಪಿ ಗ್ರೂಪ್ ಹೊಂದಿರುವ ಶೇ. 56ರಷ್ಟು ಷೇರು ಪಾಲು ಹಾಗೂ ಒಡಿಶಾ ಸ್ಟೀವ್ಡೋರ್ಸ್ ಲಿ ಹೊಂದಿರುವ ಶೇ. 39ರಷ್ಟು ಷೇರುಪಾಲನ್ನು ಅದಾನಿ ಪೋರ್ಟ್ಸ್ ಅಂಡ್ ಎಸ್ಇಜಡ್ ಖರೀದಿಸುತ್ತಿದೆ. ಒಡಿಶಾ ಸರ್ಕಾರದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯಿಂದ ಇನ್ನೂ ಅನುಮೋದನೆ ಸಿಗಬೇಕಿದ್ದು, 2025ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನೊಳಗೆ (2025ರ ಜೂನ್ನೊಳಗೆ) ವ್ಯವಹಾರ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮಗ ಯಾಕೆ ಮನೆಗೆ ಕರೆದ ಗೊತ್ತಿಲ್ಲ; ಏನೋ ಇದೆ ಮರ್ಮ: ಮಾಜಿ ರೇಮಂಡ್ ಮುಖ್ಯಸ್ಥ ವಿಜಯ್ಪತ್ ಹೇಳಿಕೆ
ಗೋಪಾಲಪುರ್ ಪೋರ್ಟ್ಸ್ ಅನ್ನು ಖರೀದಿಸಲಾಗುವ ಸುದ್ದಿ ಬಂದ ಬೆನ್ನಲ್ಲೇ ಅದಾನಿ ಪೋರ್ಟ್ಸ್ನ ಷೇರುಬೆಲೆ ಏರತೊಡಗಿದೆ. ಕಳೆದ ವಾರಾಂತ್ಯವಾದ ಶುಕ್ರವಾರ ಅದಾನಿ ಪೋರ್ಟ್ಸ್ ಷೇರುಬೆಲೆ ಶೇ. 1.1ರಷ್ಟು ಹೆಚ್ಚಾಗಿ 1,276 ರೂ ತಲುಪಿತ್ತು. ಇವತ್ತು ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ಅದರ ಷೇರುಬೆಲೆ ಶೇ. 1.6ರಷ್ಟು ಹೆಚ್ಚಾಗಿ 1,302 ರೂ ತಲುಪಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಅದಾನಿ ಪೋರ್ಟ್ಸ್ ಷೇರುಬೆಲೆ ಎರಡು ಪಟ್ಟು ಹೆಚ್ಚಾಗಿರುವುದು ಗಮನಾರ್ಹ.
ಅದಾನಿ ಪೋರ್ಟ್ಸ್ ನಿರ್ವಹಣೆಯಲ್ಲಿ ಎಷ್ಟು ಬಂದರುಗಳಿವೆ?
ಅದಾನಿ ಪೋರ್ಟ್ಸ್ ಸಂಸ್ಥೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಸಾಲಿನಲ್ಲಿ ಸಮಾನವಾಗಿ ಬಂದರುಗಳನ್ನು ಹೊಂದಿದೆ. ದೇಶದ ಎಂಟು ರಾಜ್ಯಗಳ ಕರಾವಳಿಯಲ್ಲಿ ಅದು ಪೋರ್ಟ್ಗಳನ್ನು ನಿರ್ವಹಿಸುತ್ತಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಒಟ್ಟು 13 ಬಂದರುಗಳನ್ನು ಅದು ಆಪರೇಟ್ ಮಾಡುತ್ತದೆ. ಒಡಿಶಾದಲ್ಲಿ ಧಾಮ್ರಾ ಪೋರ್ಟ್ ಜೊತೆಗೆ ಈಗ ಗೋಪಾಲಪುರ್ ಪೋರ್ಟ್ಸ್ ಕೂಡ ಅದಾನಿ ಬುಟ್ಟಿಗೆ ಸೇರಿಕೊಂಡಂತಾಗಿದೆ.
ಇದನ್ನೂ ಓದಿ: ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ
ಪೂರ್ವ ಕರಾವಳಿ ಭಾಗದಲ್ಲಿರುವ ಬಂದರುಗಳು ಬಹಳಷ್ಟು ಮೈನಿಂಗ್ ಅಡ್ಡೆಗಳಿಗೆ ಹತ್ತಿರ ಇದೆ. ಹೀಗಾಗಿ, ಸರಕು ಸಾಗಣೆ ವ್ಯವಹಾರಗಳು ಬಹಳಷ್ಟು ನಡೆಯುತ್ತವೆ. ಅದಾನಿ ಪೋರ್ಟ್ಸ್ ಸಂಸ್ಥೆಗೆ ಇದು ಬಹಳ ಲಾಭದಾಯಕವಾಗಿ ಪರಿಣಮಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ