ಅಮೂಲ್ನ ತಾಜಾ ಹಾಲು ಮೊದಲ ಬಾರಿಗೆ ಅಮೆರಿಕದಲ್ಲಿ; ಕೆಎಂಎಫ್ನ ಹಾಲು ವಿದೇಶಗಳಲ್ಲಿ ಸಿಗುತ್ತಾ?
AMUL Milk in US Market: ದೇಶದ ಅತಿದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾದ ಜಿಸಿಎಂಎಂಎಫ್ ತನ್ನ ಅಮೂಲ್ ತಾಜಾ ಹಾಲನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಮಿಶಿಗನ್ ಹಾಲು ಉತ್ಪಾದಕರ ಸಂಘದ ಜೊತೆ ಒಪ್ಪಂದ ಜಿಸಿಎಂಎಂಎಫ್ ಒಪ್ಪಂದ ಮಾಡಿಕೊಂಡಿದೆ. ಹಾಲಿನ ಸಂಗ್ರಹ ಮತ್ತು ಸಂಸ್ಕರಣೆಯನ್ನು ಮಿಶಿಗನ್ ಸಂಘ ಮಾಡುತ್ತದೆ. ಅದರ ರೆಸಿಪಿ ಒದಗಿಸುವುದು ಮತ್ತು ಹಾಲಿನ ಮಾರ್ಕೆಟಿಂಗ್ ಮತ್ತು ವಿತರಣೆಯನ್ನು ಜಿಸಿಎಂಎಂಎಫ್ ಮಾಡಲಿದೆ.
ನವದೆಹಲಿ, ಮಾರ್ಚ್ 26: ಕರ್ನಾಟಕದಲ್ಲಿ ಹಾಲು ಮಾರಾಟಕ್ಕೆ ವಿರೋಧ ಎದುರಿಸಿದ ಅಮೂಲ್ಗೆ ಅಮೆರಿಕದ ಮಾರುಕಟ್ಟೆ ಸಿಕ್ಕಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತನ್ನ ಅಮೂಲ್ ಬ್ರ್ಯಾಂಡ್ ಹಾಲನ್ನು ಅಮೆರಿಕಕ್ಕೆ ಬಿಡುಗಡೆ ಮಾಡುತ್ತಿದೆ. ಅಮೂಲ್ ತಾಜಾ, ಅಮೂಲ್ ಗೋಲ್ಡ್, ಅಮೂಲ್ ಶಕ್ತಿ ಮತ್ತು ಅಮೂಲ್ ಸ್ಲಿಮ್ ಅಂಡ್ ಟ್ರಿಮ್ ಹಾಲು ಇನ್ಮುಂದೆ ಅಮೆರಿಕದಲ್ಲೂ ಸಿಗಲಿದೆ. ಇನ್ನೊಂದು ವಾರದಲ್ಲಿ ಅಮೂಲ್ ಹಾಲನ್ನು ಅಮೆರಿಕದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಜಿಸಿಎಂಎಂಎಫ್ನ ಎಂಡಿ ಜಯೇನ್ ಮೆಹ್ತಾ ಸೋಮವಾರ (ಮಾ. 25) ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಹಾಗೂ ಏಷ್ಯನ್ ಸಮುದಾಯಗಳಿಂದ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಅಮೂಲ್ ಹಾಲನ್ನು ಆ ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸದ್ಯಕ್ಕೆ ನ್ಯೂಯಾರ್ಕ್, ನ್ಯೂಜೆರ್ಸಿ, ಚಿಕಾಗೋ, ವಾಷಿಂಗ್ಟನ್, ಡಲ್ಲಾಸ್, ಟೆಕ್ಸಾಸ್ ಮೊದಲಾದ ಕೆಲ ಅಮೆರಿಕನ್ ರಾಜ್ಯಗಳಲ್ಲಿ ಇದರ ಲಭ್ಯತೆ ಇರಲಿದೆ.
ಅಮೂಲ್ನ ವಿವಿಧ ಡೈರಿ ಉತ್ಪನ್ನಗಳು 50 ದೇಶಗಳಿಗೆ ರಫ್ತಾಗುತ್ತಿವೆ. ಆದರೆ, ತಾಜಾ ಹಾಲು ಅಮೆರಿಕದಲ್ಲಿ ಮಾತ್ರವಲ್ಲ, ಯಾವುದೇ ವಿದೇಶದಲ್ಲಿ ಸಿಗಲಿರುವುದು ಇದೇ ಮೊದಲು. ಅಮೆರಿಕದಲ್ಲಿ ಮಿಶಿಗಲ್ ಹಾಲು ಉತ್ಪಾದಕರ ಸಂಘದ (MMPA) ಜೊತೆ ಜಿಸಿಎಂಎಂಎಫ್ ಸಹಕಾರ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಮಿಶಿಗನ್ ಹಾಲು ಉತ್ಪಾದಕರ ಸಂಸ್ಥೆಯು ಅಮೂಲ್ನ ಹಾಲನ್ನು ಸಂಗ್ರಹಿಸಿ ಸಂಸ್ಕರಿಸುತ್ತದೆ. ಹಾಲಿನ ರಿಸಿಪಿಯನ್ನು ಒದಗಿಸುವ ಜಿಸಿಎಂಎಂಎಫ್ ಆ ಹಾಲಿನ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನೂ ಮಾಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಸಂಬಂಧ ಮರಳಿ ಸ್ಥಾಪಿಸಲು ಪಾಕಿಸ್ತಾನ ಒಲವು
ಮುಂದಿನ ದಿನಗಳಲ್ಲಿ ತಾಜಾ ಹಾಲಿನ ಜೊತೆಗೆ ಮೊಸರು, ಮಜ್ಜಿಗೆ, ಪನೀರ್ ಇತ್ಯಾದಿ ಇತರ ತಾಜಾ ಹಾಲು ಉತ್ಪನ್ನಗಳು ಸಿಗುತ್ತವೆ.
ಕೆಎಂಎಫ್ ಹಾಲು ಕೂಡ ವಿದೇಶಗಳಲ್ಲಿ ಲಭ್ಯ
ಅಮೂಲ್ ಬ್ರ್ಯಾಂಡ್ ಹೊಂದಿರುವ ಜಿಸಿಎಂಎಂಫ್ ಸಂಸ್ಥೆ ದೇಶದ ಅತಿದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾದರೆ, ಕರ್ನಾಟಕದ ಕೆಎಂಎಫ್ ಎರಡನೇ ಸ್ಥಾನದಲ್ಲಿದೆ. ಕೆಎಂಎಫ್ನ ನಂದಿನಿ ಗುಡ್ಲೈಫ್ ಹಾಲು ಹಲವಾರು ದೇಶಗಳಿಗೆ ರಫ್ತಾಗುತ್ತದೆ. ಈ ಗುಡ್ಲೈಫ್ ಹಾಲು ಟೆಟ್ರಾಪ್ಯಾಕ್ಗಳಲ್ಲಿ ಇರುವುದರಿಂದ ಹೆಚ್ಚಿನ ದಿನಗಳ ಕಾಲ ಫ್ರಿಜ್ ಇಲ್ಲದೆಯೂ ಇರಿಸಬಹುದು.
ಇದನ್ನೂ ಓದಿ: ಭಾರತದಲ್ಲಿ ಎಐ ಯೋಜನೆಗಳಿಗೆ ಭವಿಷ್ಯ ಇಲ್ಲ: ಮಾಜಿ ಗೂಗಲ್ ಉದ್ಯೋಗಿ ಹತಾಶೆಯಿಂದ ಹೇಳಿದ್ದು ಯಾಕೆ ಗೊತ್ತಾ?
ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ನಂದಿನಿ ಗುಡ್ಲೈಫ್ ಹಾಲು ಸಿಗುತ್ತದೆ. ಸಿಂಗಾಪುರ, ದುಬೈ ಮೊದಲಾದೆಡೆಯೂ ಕೆಎಂಎಫ್ನ ಹಾಲು ಸಿಗುತ್ತದೆ. ಕೆಎಂಎಫ್ನ ಹಾಲು ಉತ್ಪನ್ನಗಳು ಹಲವು ದೇಶಗಳಿಗೆ ರಫ್ತಾಗುತ್ತವೆ. ಕೆಲ ದೇಶಗಳಲ್ಲಿ ನಂದಿನಿ ಕೆಫೆ ಔಟ್ಲೆಟ್ಗಳೂ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ