ಕಳೆದ ವರ್ಷ ಮೂರು ತಿಂಗಳಲ್ಲಿ ಮೂರು ಪಟ್ಟು ಲಾಭ ತಂದಿದ್ದ ಕೆನ್ವಿ ಜ್ಯುವೆಲ್ಸ್ ಮತ್ತೆ ಏರಿಕೆ ಹಾದಿಯಲ್ಲಿ
Kenvi Jewels Share Price: ಅಹ್ಮದಾಬಾದ್ ಮೂಲದ ಚಿನ್ನಾಭರಣ ಮಾರಾಟ ಕಂಪನಿ ಕೆನ್ವಿ ಜ್ಯುವೆಲ್ಸ್ ಷೇರು ಮತ್ತೆ ಏರಿಕೆಯ ಹಾದಿಗೆ ಬಂದಂತಿದೆ. 10 ರೂ ಒಳಗಿನ ಈ ಪೆನ್ನಿ ಸ್ಟಾಕ್ ಕಳೆದ ಎರಡು ವಾರದಿಂದ ಬೇಡಿಕೆ ಪಡೆದಿದೆ. ಇವತ್ತು ಇದರ ಷೇರುಬೆಲೆ ಕಡಿಮೆ ಆದರೂ ಎರಡು ವಾರದಲ್ಲಿ 5.20 ರೂನಿಂದ 7.13 ರೂಗೆ ಏರಿದೆ. 2023ರಲ್ಲಿ ಮಾರ್ಚ್ನಿಂದ ಜೂನ್ವರೆಗಿನ ಅವಧಿಯಲ್ಲಿ ಇದರ ಷೇರುಬೆಲೆ 4.40 ರೂನಿಂದ 14.70 ರೂಗೆ ಏರಿತ್ತು.
ನವದೆಹಲಿ, ಮಾರ್ಚ್ 27: ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಓಡುವ ಕುದುರೆಗಳಿವೆ. ಹಾಗೆಯೇ, ಷೇರು ಪೇಟೆಯಲ್ಲಿ ಪೆನ್ನಿ ಸ್ಟಾಕ್ಗಳು (penny stocks) ಬಹಳಷ್ಟು ಗಮನ ಸೆಳೆಯುತ್ತವೆ. 10 ರೂಗಿಂತ ಕಡಿಮೆ ಬೆಲೆಗೆ ಸಿಗುವ ಈ ಪೆನ್ನಿ ಸ್ಟಾಕ್ಗಳು ಬಹಳಷ್ಟು ಬಾರಿ ಹೂಡಿಕೆದಾರರಿಗೆ ಭರ್ಜರಿ ಲಾಭ ತರುವುದುಂಟು. ಇಂಥ ಷೇರುಗಳು ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ (multibagger stock) ಎನಿಸುತ್ತವೆ. ಕೆಲ ಷೇರುಗಳು ಅಲ್ಪಾವಧಿಯಲ್ಲೂ ಸಖತ್ ಲಾಭ ತರುತ್ತವೆ. ಇಂಥ ಪೆನ್ನಿ ಸ್ಟಾಕ್ನಲ್ಲಿ ಕೆನ್ವಿ ಜ್ಯೂವೆಲ್ಸ್ ಸಂಸ್ಥೆ (Kenvi Jewels Ltd) ಒಂದು. ಕಳೆದ ವರ್ಷ ಮಾರ್ಚ್ನಿಂದ ಜೂನ್ವರೆಗೆ ಸಖತ್ ಲಾಭ ತಂದಿದ್ದ ಈ ಷೇರು ಈ ವರ್ಷ ಮಾರ್ಚ್ನಿಂದಲೇ ಮತ್ತೆ ಏರಿಕೆ ಹಾದಿಯಲ್ಲಿದೆ.
ಕೆನ್ವಿ ಜ್ಯುವೆಲ್ಸ್ ಷೇರುಬೆಲೆ
ಅಹ್ಮದಾಬಾದ್ನ ಚಿನ್ನಾಭರಣ ಕಂಪನಿಯಾದ ಕೆನ್ವಿ ಜ್ಯುವೆಲ್ಸ್ ಲಿ ಸಂಸ್ಥೆಯ ಷೇರು ಬೆಲೆ ಈಗ 7 ರೂ ಆಸುಪಾಸಿನಲ್ಲಿ ಹೊಯ್ದಾಡುತ್ತಿದೆ. ನಿನ್ನೆ ಮಂಗಳವಾರದ ಕೊನೆಯಲ್ಲಿ ಇದರ ಷೇರುಬೆಲೆ 7.13 ರೂ ಇತ್ತು. ಮಾರ್ಚ್ 13ರಂದು ಇದರ ಷೇರು ಬೆಲೆ 5.20 ರೂ ಇತ್ತು. ಈಗ ಎರಡು ವಾರದಲ್ಲಿ ಶೇ. 40ರಷ್ಟು ಬೆಲೆ ಏರಿದೆ.
ಇದನ್ನೂ ಓದಿ: 1 ರುಪಾಯಿಗೆ 4 ವರ್ಷದಲ್ಲಿ 45 ರುಪಾಯಿ ಲಾಭ; ಇದು ಈ ಪೆನ್ನಿ ಸ್ಟಾಕ್ನ ಮ್ಯಾಜಿಕ್
2023ರಲ್ಲಿ ಹೆಚ್ಚೂಕಡಿಮೆ ಇದೇ ಅವಧಿಯಲ್ಲಿ ಕೆನ್ವಿ ಜ್ಯುವೆಲ್ಸ್ ಸಂಸ್ಥೆ ಮೂರು ತಿಂಗಳ ಕಾಲ ಹೂಡಿಕೆದಾರರಿಗೆ ಒಳ್ಳೆಯ ಲಾಭ ಮಾಡಿಕೊಟ್ಟಿತ್ತು. 2023ರ ಮಾರ್ಚ್ 3ರಂದು 4.40 ರೂ ಇದ್ದ ಇದರ ಷೇರುಬೆಲೆ ಜೂನ್ ಎರಡನೇ ವಾರದೊಳಗೆ 15.70 ರೂಗೆ ಏರಿತ್ತು. ಮೂರು ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಮೂರು ಪಟ್ಟು ಲಾಭ ತಂದಿತ್ತು.
ಒಂದು ವೇಳೆ 2023ರ ಮಾರ್ಚ್ 3ರಂದು ಕೆನ್ವಿ ಜ್ಯುವೆಲ್ಸ್ ಷೇರಿನ ಮೇಲೆ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿ ಜೂನ್ 13ಕ್ಕೆ ಅದನ್ನು ಮಾರಿದ್ದರೆ ಅವರ ಹೂಡಿಕೆ 3.5 ಲಕ್ಷ ರೂ ಆಗಿರುತ್ತಿತ್ತು. 2018ರಲ್ಲಿ ಇದರ ಷೇರುಬೆಲೆ ಕೇವಲ 1 ರೂ ಮಾತ್ರವೇ ಇದ್ದದ್ದು. ಆರು ವರ್ಷದಲ್ಲಿ ಹಲವು ಪಟ್ಟು ಹೆಚ್ಚಾಗಿರುವುದು ಸಾಧಾರಣ ಸಂಗತಿ ಅಲ್ಲ.
ಕೆನ್ವಿ ಜ್ಯುವೆಲ್ಸ್ ಸಂಸ್ಥೆ ಚಿನ್ನ ಮತ್ತು ಚಿನ್ನಾಭರಣದ ತಯಾರಿಕೆ ಮತ್ತು ವ್ಯಾಪಾರ ಎರಡೂ ಮಾಡುತ್ತದೆ. ಹೋಲ್ಸೇಲ್ ಮತ್ತು ರೀಟೇಲ್ ಮಾರುಕಟ್ಟೆಗಳಲ್ಲಿ ಕೆನ್ವಿ ಜ್ಯುವೆಲ್ಸ್ ಮಾರಾಟ ಮಾಡುತ್ತದೆ.
ಇದನ್ನೂ ಓದಿ: ಶ್ರೀಮಂತರಿಗೆ ಪಿಎಂಎಸ್ ಬಾದಾಮಿ; ಮ್ಯೂಚುವಲ್ ಫಂಡ್ ಬಡವರ ಬಾದಾಮಿ
ಈ ಸಂಸ್ಥೆಯ ಶೇ. 64.72ರಷ್ಟು ಷೇರುಗಳು ಮಾಲೀಕರ ಕೈಯಲ್ಲಿ ಇವೆ. ಶೇ. 35ರಷ್ಟು ಷೇರುಗಳು ಸಾರ್ವಜನಿಕರಿಗೆ ಲಭ್ಯ ಇದೆ. ಸದ್ಯ ಇದರ ಮಾರುಕಟ್ಟೆ ಬಂಡವಾಳ ಒಟ್ಟು 87.58 ಕೋಟಿ ರೂನಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ