PMS vs Mutual Funds: ಶ್ರೀಮಂತರಿಗೆ ಪಿಎಂಎಸ್ ಬಾದಾಮಿ; ಮ್ಯೂಚುವಲ್ ಫಂಡ್ ಬಡವರ ಬಾದಾಮಿ
Good Investment Plans: ಮ್ಯೂಚುವಲ್ ಫಂಡ್ ಬಹಳ ಜನಪ್ರಿಯವಾಗಿರುವ ಹೂಡಿಕೆ ಯೋಜನೆ. ಈಕ್ವಿಟಿ, ಬಾಂಡ್, ಚಿನ್ನ ಹೀಗೆ ಬೇರೆ ಬೇರೆ ರೀತಿಯ ಹೂಡಿಕೆ ಪ್ಲಾನ್ಗಳಿರುವ ಮ್ಯುಚುವಲ್ ಫಂಡ್ಗಳಿವೆ. ಇನ್ನು ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ಅಥವಾ ಪಿಎಂಎಸ್ ಕೂಡ ಟ್ರೆಂಡಿಂಗ್ನಲ್ಲಿರುವ ಒಂದು ಹೂಡಿಕೆ ಆಯ್ಕೆ. 25 ಲಕ್ಷ ರೂ ಕನಿಷ್ಠ ಹೂಡಿಕೆ ಇರುವ ಪಿಎಂಎಸ್ನಲ್ಲಿ ರಿಸ್ಕ್ ಸಾಧ್ಯತೆ ಹೆಚ್ಚು. ಅಂತೆಯೇ ಶ್ರೀಮಂತರ ಆಯ್ಕೆಯಾಗಿದೆ ಇದು.
ಎಫ್ಡಿ ಬಳಿಕ ಜನರಿಗೆ ಹೆಚ್ಚು ಆದ್ಯತೆಯ ಹೂಡಿಕೆ ಆಯ್ಕೆ ಎಂದರೆ ಮ್ಯೂಚುವಲ್ ಫಂಡ್. ಇದರ ಜೊತೆಗೆ ಪಿಎಂಎಸ್ (PMS) ಸೇವೆಗಳೂ ಟ್ರೆಂಡಿಂಗ್ನಲ್ಲಿವೆ. ಪಿಎಂಎಸ್ ಎಂದರೆ ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್. ಮ್ಯೂಚುವಲ್ ಫಂಡ್ (Mutual Funds) ರೀತಿಯಲ್ಲೇ ಇರುವ ಒಂದು ವಿಧದ ಹೂಡಿಕೆ ಮಾರ್ಗ. ಮ್ಯೂಚುವಲ್ ಫಂಡ್ ಮತ್ತು ಪಿಎಂಎಸ್ ಎರಡೂ ಕೂಡ ದೀರ್ಘಾವಧಿ ಹೂಡಿಕೆಗೆ (long term investment) ಹೇಳಿ ಮಾಡಿಸಿದ ಯೋಜನೆಗಳಾಗಿವೆ. ಆದರೆ, ಪಿಎಂಎಸ್ ಹೆಚ್ಚು ರಿಸ್ಕ್ ಅಂಶ ಹೊಂದಿರುತ್ತದೆ. ಹೆಚ್ಚು ಲಾಭ ತರುವ ಅವಕಾಶವನ್ನೂ ಒದಗಿಸುತ್ತದೆ. ಅತ್ತ ಮ್ಯೂಚುವಲ್ ಫಂಡ್ನಲ್ಲಿ ರಿಸ್ಕ್ ಸಾಧ್ಯತೆ ಕಡಿಮೆ ಇರುತ್ತದೆ. ಅಂತೆಯೇ, ಪಿಎಂಎಸ್ನಲ್ಲಿ ಶ್ರೀಮಂತರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಮ್ಯೂಚುವಲ್ ಫಂಡ್ನಲ್ಲಿ ಮಧ್ಯಮ ವರ್ಗದವರ ಹೂಡಿಕೆಗಳು ಹೆಚ್ಚಿರುತ್ತವೆ.
ಮ್ಯೂಚುವಲ್ ಫಂಡ್ ಮತ್ತು ಪಿಎಂಎಸ್ ನಡುವೆ ಏನು ವ್ಯತ್ಯಾಸ?
ಮ್ಯೂಚುವಲ್ ಫಂಡ್ನಲ್ಲಿ ಯಾವ್ಯಾವ ಕ್ಷೇತ್ರಗಳ ಷೇರುಗಳ ಮೇಲೆ ಹೂಡಿಕೆ ಆಗಬೇಕು ಎಂದು ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದರ ಪ್ರಕಾರ ಹೂಡಿಕೆ ಹಂಚಿ ಹೋಗುತ್ತದೆ. ಉದಾಹರಣೆಗೆ, ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್ಗಳು ದೊಡ್ಡ ಕಂಪನಿಗಳ ಷೇರುಗಳ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುತ್ತವೆ. ಅಂತೆಯೇ, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಇತ್ಯಾದಿ ವಿವಿಧ ರೀತಿಯ ಮ್ಯೂಚುವಲ್ ಫಂಡ್ಗಳಿಗೆ ಅವುಗಳದ್ದೇ ನಿಬಂಧನೆಗಳಿರುತ್ತವೆ. ಅದರ ಪ್ರಕಾರ ಷೇರುಗಳ ಆಯ್ಕೆ ಇರುತ್ತದೆ. ಹೂಡಿಕೆದಾರರಿಗೂ ಒಂದು ರೀತಿಯಲ್ಲಿ ಪಾರದರ್ಶಕತೆ ಸಿಗುತ್ತದೆ.
ಇದನ್ನೂ ಓದಿ: ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್ಗಳು
ಇನ್ನೊಂದೆಡೆ, ಪಿಎಂಎಸ್ ಅಥವಾ ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ಯಾವುದೇ ನಿರ್ದಿಷ್ಟ ಹೂಡಿಕೆ ಸೂತ್ರಕ್ಕೆ ಒಳಪಡುವಂಥದ್ದಲ್ಲ. ವೈಯಕ್ತಿಕ ಹೂಡಿಕೆದಾರರ ಅಗತ್ಯಗಳಿಗೆ ತಕ್ಕಂತೆ ಇದರ ನಿರ್ವಹಣೆ ಇರುತ್ತದೆ. ಹೂಡಿಕೆದಾರರು ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಾದರೆ ಅದಕ್ಕೆ ಬೇರೆ ರೀತಿಯ ಷೇರುಗಳ ಆಯ್ಕೆ ನಡೆಯುತ್ತದೆ. ಆದರೆ, ಪಿಎಂಎಸ್ಗೆ ಹೆಚ್ಚು ಶುಲ್ಕ ಇರುತ್ತದೆ. ಕನಿಷ್ಠ ಹೂಡಿಕೆಯೂ ಕೂಡ 25 ಲಕ್ಷ ರೂಗೂ ಹೆಚ್ಚು ಇರುತ್ತದೆ. ಹೀಗಾಗಿ, ಶ್ರೀಮಂತರಿಗೆ ಪಿಎಂಎಸ್ ಸೇವೆ ಎಂಬಂತಾಗಿದೆ.
ಪಿಎಂಎಸ್ ಕೂಡ ಯಾರೋ ಅನಾಮಧೇಯರು ನಿರ್ವಹಿಸುವಂಥದ್ದಲ್ಲ. ಮ್ಯೂಚುವಲ್ ಫಂಡ್ನಂತೆ ಪಿಎಂಎಸ್ ಫಂಡ್ಗಳಿಗೂ ಸೆಬಿಯಿಂದ ಅನುಮತಿ ಬೇಕು.
ಹೀಲಿಯೋಸ್ ಇಂಡಿಯಾ ರೈಸಿಂಗ್, ವೈಟ್ ಓಕ್ ಇಂಡಿಯಾ ಈಕ್ವಿಟಿ ಫಂಡ್, ಅಬಾಕ್ಕಸ್ ಆಲ್ ಕ್ಯಾಪ್ ಅಪ್ರೋಚ್, ಆದಿತ್ಯ ಬಿರ್ಲಅ ಐಸಾಪ್ ಇತ್ಯಾದಿ ಹಲವು ಸೆಬಿ ಅನಮೋದಿತ ಪಿಎಂಎಸ್ ಫಂಡ್ಗಳಿವೆ.
ಇದನ್ನೂ ಓದಿ: ಎಲ್ಲಾ ಎಸ್ಐಪಿಗಳು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಲ್ಲ; ಹೂಡಿಕೆ ಮಾಡುವಾಗ ರಿಸ್ಕ್ ನೆನಪಿರಲಿ
ಪಿಎಂಎಸ್ನಲ್ಲಿ ಕನಿಷ್ಠ ಹೂಡಿಕೆ 25 ಲಕ್ಷ ರೂ ಇರುವುದರಿಂದ ಸಾಮಾನ್ಯ ಜನರಿಗೆ ಇದು ತಲುಪುವುದಿಲ್ಲ. ಅತ್ತ ಮ್ಯೂಚುವಲ್ ಫಂಡ್ ಅನ್ನು ಬಹಳ ಅಲ್ಪ ಮೊತ್ತದ ಹೂಡಿಕೆಯಿಂದ ಆರಂಭಿಸಬಹುದು. ಎಸ್ಐಪಿ ಪ್ಲಾನ್ ಮೂಲಕ ಮಾಸಿಕ ಕಂತುಗಳಲ್ಲೂ ಹೂಡಿಕೆ ಮಾಡಬಹುದು. ಮ್ಯೂಚಲ್ ಫಂಡ್ನಲ್ಲಿ ಪಾರದರ್ಶಕತೆ ಹೆಚ್ಚಿರುತ್ತದೆ, ನಷ್ಟವಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ