ಎಐ ಏಜೆಂಟ್‌ಗಳ ಮೂಲಕ ಯುಪಿಐ ಪಾವತಿ: ಕ್ರಾಂತಿಕಾರಿ ತಂತ್ರಜ್ಞಾನಕ್ಕೆ ಎನ್‌ಪಿಸಿಐ ಆಲೋಚನೆ

ಇವತ್ತಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ಎಐ ಏಜೆಂಟ್​ಗಳ ಬಳಕೆ ಸರ್ವೆ ಸಾಮಾನ್ಯವಾಗುತ್ತಿದೆ. ಭಾರತದ ಹೆಮ್ಮೆಯ ಪೇಮೆಂಟ್ ಸಾಧನವಾದ ಯುಪಿಐನಲ್ಲಿ ಎಐ ಏಜೆಂಟ್​ಗಳನ್ನು ಬಳಸುವ ಒಂದು ಆಲೋಚನೆ ನಡೆದಿದೆ ಎನ್ನಲಾಗಿದೆ. ರಾಯ್ಟರ್ಸ್ ವರದಿ ಪ್ರಕಾರ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆಯು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಎಐ ಏಜೆಂಟ್​ಗಳನ್ನು ಅಳವಡಿಸಲು ಯೋಜಿಸುತ್ತಿದೆ.

ಎಐ ಏಜೆಂಟ್‌ಗಳ ಮೂಲಕ ಯುಪಿಐ ಪಾವತಿ: ಕ್ರಾಂತಿಕಾರಿ ತಂತ್ರಜ್ಞಾನಕ್ಕೆ ಎನ್‌ಪಿಸಿಐ ಆಲೋಚನೆ
ಯುಪಿಐ
Image Credit source: Getty Images

Updated on: Sep 10, 2026 | 3:18 PM

ನವದೆಹಲಿ, ಸೆಪ್ಟೆಂಬರ್ 10: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿಯಂತ್ರಿಸುವ ‘ಎನ್‌ಪಿಸಿಐ’ (National Payments Corporation of India), ಯುಪಿಐ (UPI) ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಕ್ರಾಂತಿಕಾರಿ ಹಂತಕ್ಕೆ ಕಾಲಿಡಲು ಆಲೋಚಿಸುತ್ತಿದೆ. ಯುಪಿಐ ಪಾವತಿಯಲ್ಲಿ ಎಐ ಏಜೆಂಟ್​ಗಳನ್ನು ಬಳಸಲು ಎನ್​ಪಿಸಿಐ ಯೋಜಿಸುತ್ತಿದೆ ಎನ್ನುವಂತಹ ಸುದ್ದಿಯನ್ನು ರಾಯ್ಟರ್ಸ್ ಸುದ್ದಿಸಂಸ್ಥೆ ನೀಡಿದೆ. ಇದು ನಿಜಗೊಂಡು, ಯೋಜನೆ ಜಾರಿಗೆ ಬಂದರೆ, ಮೊಬೈಲ್ ಬಳಕೆದಾರರು ಎಐ ಏಜೆಂಟ್​ಗಳಿಗೆ ಟೆಕ್ಸ್ಟ್ ಪ್ರಾಂಪ್ಟ್ ಅಥವಾ ವಾಯ್ಸ್ ಪ್ರಾಂಪ್ಟ್ ಮೂಲಕ ಕಮಾಂಡ್ ಮಾಡಿದರೆ ಸಾಕು, ಹಣ ಪಾವತಿಯನ್ನು ಆ ಏಜೆಂಟ್​ಗಳೇ ನೋಡಿಕೊಳ್ಳುತ್ತವೆ. ಇಂಥದ್ದೊಂದು ತಂತ್ರಜ್ಞಾನವನ್ನು ಯುಪಿಐಗೆ ಅಳವಡಿಸಲು ಎನ್​ಪಿಸಿಐ ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.

ಈ ‘ವಾಯ್ಸ್ ಮತ್ತು ಟೆಕ್ಸ್ಟ್ ಆಧಾರಿತ ಎಐ ಪಾವತಿ’ (Conversational AI Payments) ವ್ಯವಸ್ಥೆಯು ಭಾರತದ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಇದಕ್ಕಾಗಿ ಎನ್​ಪಿಸಿಐ ಒಂದು ಫ್ರೇಮ್​ವರ್ಕ್ ರೂಪಿಸಲಿದೆ. ಇದರಲ್ಲಿ ಏಕೀಕೃತ ಏಜೆಂಟ್ ಪ್ರೋಟೋಕಾಲ್ ಅಥವಾ ಯೂನಿಫೈಡ್ ಏಜೆಂಟ್ ಪ್ರೋಟೋಕಾಲ್​ನ ವ್ಯವಸ್ಥೆ ಇರಲಿದ್ದು, ಏಐ ಏಜೆಂಟ್​ಗಳು ನಿರತಗೊಂಡು ಯುಪಿಐ ಪೇಮೆಂಟ್​ಗಳನ್ನು ನಿಭಾಯಿಸಬಹುದು. ಆಟೊಮೇಟೆಡ್ ಪೇಮೆಂಟ್​ಗಳನ್ನು ಮಾಡಲು ಎಐ ಏಜೆಂಟ್​ಗಳಿಗೆ ಅನುಮತಿಸುವ ಕಾರ್ಯವನ್ನೂ ಈ ಪ್ರೋಟೋಕಾಲ್ ಸಿಸ್ಟಂ ಮೂಲಕ ನಿಯಂತ್ರಿಸಬಹುದು ಎಂದು ರಾಯ್ಟರ್ಸ್ ವರದಿಯಲ್ಲಿ ಹೇಳಲಾಗಿದೆ. ಆರಂಭದಲ್ಲಿ ಸಣ್ಣ ಮೊತ್ತದ ಯುಪಿಐ ಪಾವತಿಗಳಿಗಷ್ಟೇ ಎಐ ಏಜೆಂಟ್​ಗಳಿಗೆ ಅನುಮತಿ ನೀಡಲಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ; ಆರು ವಲಯಗಳ ಉತ್ಕೃಷ್ಟ ಬೆಳವಣಿಗೆ: ಜೆಫರೀಸ್ ವರದಿ

ಸಂಭಾಷಣೆ ಮೂಲಕವೇ ಪಾವತಿ (Conversational Payments): ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ “ನನ್ನ ಸ್ನೇಹಿತನಿಗೆ ₹500 ಕಳುಹಿಸು” ಅಥವಾ “ಕರೆಂಟ್ ಬಿಲ್ ಪಾವತಿಸು” ಎಂದು ಟೈಪ್ ಮಾಡಿದರೆ ಅಥವಾ ಧ್ವನಿ ಸಂದೇಶ ನೀಡಿದರೆ, ಎಐ ಏಜೆಂಟ್ ಆಜ್ಞೆಯನ್ನು ಅರ್ಥೈಸಿಕೊಂಡು ತಕ್ಷಣವೇ ಯುಪಿಐ ವಹಿವಾಟನ್ನು ಸಿದ್ಧಪಡಿಸುತ್ತದೆ.

ಸರಳ ಮತ್ತು ಭದ್ರತೆಯ ಸಮ್ಮಿಲನ: ಎಐ ಏಜೆಂಟ್ ವಹಿವಾಟಿನ ವಿವರಗಳನ್ನು (ಸ್ವೀಕರಿಸುವವರ ಹೆಸರು ಮತ್ತು ಮೊತ್ತ) ಪರದೆಯ ಮೇಲೆ ತೋರಿಸಿದ ನಂತರ, ಬಳಕೆದಾರರು ತಮ್ಮ ಅಧಿಕೃತ ಯುಪಿಐ ಪಿನ್ (UPI PIN) ನಮೂದಿಸುವ ಮೂಲಕ ಹಣ ವರ್ಗಾವಣೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬಹುದು.

ಭಾಷಾ ಅಡೆತಡೆಗಳಿಗೆ ಮುಕ್ತಿ: ಕನ್ನಡ ಸೇರಿದಂತೆ ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಈ ಎಐ ಏಜೆಂಟ್‌ಗಳು ಕಾರ್ಯನಿರ್ವಹಿಸಲಿದ್ದು, ತಂತ್ರಜ್ಞಾನದ ಅರಿವಿಲ್ಲದ ಸಾಮಾನ್ಯ ಜನರು ಮತ್ತು ಗ್ರಾಮೀಣ ಭಾಗದ ಬಳಕೆದಾರರಿಗೂ ಡಿಜಿಟಲ್ ಪಾವತಿ ಸುಲಭವಾಗಲಿದೆ.

ಆಪ್‌ಗಳ ನಡುವೆ ಓಡಾಟದ ಅಗತ್ಯವಿಲ್ಲ: ಪ್ರತ್ಯೇಕವಾಗಿ ಬ್ಯಾಂಕಿಂಗ್ ಅಥವಾ ಯುಪಿಐ ಆಪ್‌ಗಳನ್ನು ತೆರೆದು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲದೇ, ವಾಟ್ಸಾಪ್ ಅಥವಾ ವಾಯ್ಸ್ ಅಸಿಸ್ಟೆಂಟ್ (Voice Assistants) ಮೂಲಕವೇ ನೇರವಾಗಿ ಪಾವತಿ ಮಾಡಲು ಇದು ನೆರವಾಗಲಿದೆ.

ಇದನ್ನೂ ಓದಿ: ಜಾಗತಿಕ ಉದ್ಯಮಶೀಲತೆ ರ‍್ಯಾಂಕಿಂಗ್ 2026: ಪಿಚ್​ಬುಕ್ ಪಟ್ಟಿಯಲ್ಲಿವೆ ಭಾರತದ 8 ಯೂನಿವರ್ಸಿಟಿಗಳು

ಎಐ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (DPI) ಸಂಯೋಜಿಸುವ ಮೂಲಕ ಭಾರತೀಯ ಫಿನ್‌ಟೆಕ್ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಎನ್‌ಪಿಸಿಐನ ಪ್ರಮುಖ ಉದ್ದೇಶವಾಗಿದೆ. ಆದರೆ, ಇದೆಲ್ಲವೂ ಸಾಕಾರಗೊಳ್ಳುವ ಮುನ್ನ, ಬ್ಯಾಕೆಂಡ್​ನಲ್ಲಿ ಬಹಳಷ್ಟು ಕೆಲಸಗಳಾಗಬೇಕಾಗುತ್ತದೆ. ಎಐ ಏಜೆಂಟ್​ಗಳಿಂದ ತಪ್ಪಾಗದಂತೆ ಎಚ್ಚರವಹಿಸಲು ಪಕ್ವವಾದ ಫ್ರೇಮ್​ವರ್ಕ್ ರೂಪಿಸುವುದು ಸವಾಲಿನ ಕೆಲಸ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us