ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ; ಆರು ವಲಯಗಳ ಉತ್ಕೃಷ್ಟ ಬೆಳವಣಿಗೆ: ಜೆಫರೀಸ್ ವರದಿ
ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ಮುಕ್ತಗೊಳಿಸಿದ್ದು, ಡೇಟಾ ಸೆಂಟರ್ಸ್ಗೆ ತೆರಿಗೆ ವಿನಾಯಿತಿ ನೀಡಿದ್ದು ಇತ್ಯಾದಿ ಸುಧಾರಣಾ ಕ್ರಮಗಳಾಗಿವೆ. ಸರ್ಕಾರದ ಈ ಕ್ರಮಗಳು ಆರು ಕ್ಷೇತ್ರಗಳಲ್ಲಿ ಅದ್ವಿತೀಯ ಬೆಳವಣಿಗೆಗೆ ಕಾರಣವಾಗಿವೆ ಎಂದು ಜೆಫರೀಸ್ ವರದಿಯಲ್ಲಿ ಹೇಳಲಾಗಿದೆ. ಈ ಜಾಗತಿಕ ಹೂಡಿಕೆ ಬ್ಯಾಂಕ್ನ ವರದಿ ಪ್ರಕಾರ, ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ ಶುರುವಾಗಿದೆ.

ನವದೆಹಲಿ, ಸೆಪ್ಟೆಂಬರ್ 10: ಜಾಗತಿಕ ಹೂಡಿಕೆ ಬ್ಯಾಂಕ್ ಆದ ‘ಜೆಫರೀಸ್’ (Jefferies) ಸಂಸ್ಥೆ ಭಾರತದ ಅದ್ವಿತೀಯ ವೇಗದ ಬೆಳವಣಿಗೆಯನ್ನು ಗುರುತಿಸಿದೆ. ತನ್ನ ಇತ್ತೀಚಿನ ವರದಿಯಲ್ಲಿ ಭಾರತವು “ನೂತನ ಕೈಗಾರಿಕಾ ಕ್ರಾಂತಿ”ಗೆ (Industrial Revolution) ಸಾಕ್ಷಿಯಾಗುತ್ತಿದೆ ಎಂದು ತಿಳಿಸಿದೆ. ಬೃಹತ್ ದೇಶೀಯ ಮಾರುಕಟ್ಟೆ, ಖಾಸಗಿ ವಲಯದ ಸಕ್ರಿಯ ಭಾಗಿತ್ವ ಮತ್ತು ಸರ್ಕಾರದ ಬೆಂಬಲಿತ ನೀತಿಗಳು ದೇಶದ ಆರ್ಥಿಕತೆಗೆ ಹೊಸ ಶಕ್ತಿ ತುಂಬುತ್ತಿವೆ ಎಂದು ವರದಿ ಹೇಳಿದೆ.
ಖಾಸಗಿ ರಂಗಕ್ಕೆ ಬಾಹ್ಯಾಕಾಶ ಉದ್ಯಮ ಮುಕ್ತಗೊಳಿಸಿದ್ದು, ಡೇಟಾ ಸೆಂಟರ್‌ಗಳಿಗೆ ತೆರಿಗೆ ವಿನಾಯಿತಿ, ಸೆಮಿಕಂಡಕ್ಟರ್ ಮತ್ತು ಸೋಲಾರ್ ಉತ್ಪಾದನೆಗೆ ಪಿಎಲ್‌ಐ (PLI) ಪ್ರೋತ್ಸಾಹಕಗಳಂತಹ ಕ್ರಮಗಳು ಈ ಸುಧಾರಣೆಗೆ ಮುಖ್ಯ ಕಾರಣಗಳಾಗಿವೆ. ಸರ್ಕಾರದ ಕ್ರಮಗಳಿಂದ ಪುಷ್ಟಿ ಹೊಂದುವ ಆರು ಅಧಿಕ ಬೆಳವಣಿಗೆಯ ವಲಯಗಳನ್ನು ಅದು ಗುರುತಿಸಿದೆ:
ಇದನ್ನೂ ಓದಿ: ಕೇಂದ್ರ ಸಂಪುಟದಿಂದ 10,783 ಕೋಟಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಅನುಮೋದನೆ: 5 ರಾಜ್ಯಗಳಲ್ಲಿ 656 ಕಿ.ಮೀ ರೈಲು ಜಾಲ ವಿಸ್ತರಣೆ
- ಬಾಹ್ಯಾಕಾಶ ರಂಗ: ಜಾಗತಿಕವಾಗಿ ಸ್ಪರ್ಧಾತ್ಮಕ ಬಾಹ್ಯಾಕಾಶ ಸಾಮರ್ಥ್ಯ ಹೊಂದಿರುವ ಬೆರಳೆಣಿಕೆಯ ದೇಶಗಳಲ್ಲಿ ಭಾರತವೂ ಒಂದಾಗಿದೆ. 2030 ರ ವೇಳೆಗೆ ಭಾರತದ ಬಾಹ್ಯಾಕಾಶ ಆರ್ಥಿಕತೆಯು 5 ಪಟ್ಟು ಬೆಳೆದು $40-45 ಬಿಲಿಯನ್ ತಲುಪುವ ಗುರಿಯಿದೆ. ಸ್ಕೈರೂಟ್ (Skyroot), ಪಿಕ್ಸೆಲ್ (Pixxel) ಮತ್ತು ಅಗ್ನಿಕುಲ್ (Agnikul) ನಂತಹ ಖಾಸಗಿ ಕಂಪನಿಗಳು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ ಎಂದು ಜೆಫರೀಸ್ ವರದಿಯಲ್ಲಿ ಹೇಳಲಾಗಿದೆ.
- ಸೆಮಿಕಂಡಕ್ಟರ್: ಭಾರತವು ನೀತಿ ನಿರೂಪಣೆಯಿಂದ ಪ್ರತ್ಯಕ್ಷ ಜಾರಿಯತ್ತ ಹೆಜ್ಜೆ ಇಟ್ಟಿದ್ದು, ಸುಮಾರು $20 ಬಿಲಿಯನ್ ಹೂಡಿಕೆ ಹರಿದುಬಂದಿದೆ. ಚಾಲ್ತಿಯಲ್ಲಿರುವ ಚಿಪ್ ಫ್ಯಾಬ್ ಮತ್ತು ಒಎಸ್‌ಎಟಿ (OSAT) ಯೋಜನೆಗಳಿಗೆ ಬೆಂಬಲವಾಗಿ ಮುಂಬರುವ ದಿನಗಳಲ್ಲಿ ಮತ್ತೆ $13 ಬಿಲಿಯನ್ ಇನ್ಸೆಂಟಿವ್ ಯೋಜನೆ ನಿರೀಕ್ಷಿಸಲಾಗಿದೆ.
- ಡೇಟಾ ಸೆಂಟರ್‌ಗಳು: ದೇಶದಲ್ಲಿ ಡೇಟಾ ಸೆಂಟರ್ ಸಾಮರ್ಥ್ಯವು ಕಳೆದ 5 ವರ್ಷಗಳಲ್ಲಿ 5 ಪಟ್ಟು ಹೆಚ್ಚಿದ್ದು (~2 ಗಿಗಾವಾಟ್), ಮುಂಬರುವ 5 ವರ್ಷಗಳಲ್ಲಿ 10 ಗಿಗಾವಾಟ್‌ಗೆ ಏರಿಕೆಯಾಗುವ ಅಂದಾಜಿದೆ. ಇದು ವಿದ್ಯುತ್, ಕೂಲಿಂಗ್ ಮತ್ತು ನೆಟ್‌ವರ್ಕ್ ರಂಗದಲ್ಲಿ $45 ಶತಕೋಟಿ ಹೂಡಿಕೆ ಅವಕಾಶ ಸೃಷ್ಟಿಸಲಿದೆ.
- ಎಲೆಕ್ಟ್ರಾನಿಕ್ಸ್: ಭಾರತವು ಕೇವಲ ಭಾಗಗಳನ್ನು ಜೋಡಿಸುವುದರಿಂದ (Assembly) ದೇಶೀಯವಾಗಿ ಬಿಡಿಭಾಗಗಳನ್ನು ತಯಾರಿಸುವತ್ತ ದಾಪುಗಾಲು ಹಾಕುತ್ತಿದೆ. ಮೊಬೈಲ್ ಬಿಡಿಭಾಗಗಳ ದೇಶೀಯ ಮೌಲ್ಯವರ್ಧನೆ (Domestic Value Addition) ಮುಂದಿನ 6 ವರ್ಷಗಳಲ್ಲಿ ಶೇ. 20 ರಿಂದ ಶೇ. 50 ಕ್ಕೆ ಏರಿಕೆಯಾಗಲಿದೆ.
- ಸೌರಶಕ್ತಿ: ಭಾರತವು ಪ್ರಸ್ತುತ ವಿಶ್ವದ 2ನೇ ಅತಿದೊಡ್ಡ ಸೋಲಾರ್ ಪಿವಿ (Solar PV) ತಯಾರಕ ದೇಶವಾಗಿದೆ. ಪ್ರಸ್ತುತ 35 ಗಿಗಾವಾಟ್ ಸಾಮರ್ಥ್ಯ ಕಾರ್ಯಾಚರಣೆಯಲ್ಲಿದ್ದು, ಇನ್ನೂ 100 ಗಿಗಾವಾಟ್ ನಿರ್ಮಾಣ ಹಂತದಲ್ಲಿದೆ. 2030 ರ ವೇಳೆಗೆ ಶೇ. 90 ರಷ್ಟು ಸಪ್ಲೈ ಚೈನ್ ಭಾರತದಲ್ಲೇ ಸಿದ್ಧವಾಗಲಿದೆ.
- ಏರೋಸ್ಪೇಸ್: ಜಾಗತಿಕ ಏರೋಸ್ಪೇಸ್ ಪೂರೈಕೆಯ ಅಭಾವದ ಲಾಭ ಭಾರತಕ್ಕೆ ಸಿಗುತ್ತಿದ್ದು, ಬೋಯಿಂಗ್ ಮತ್ತು ಏರ್‌ಬಸ್‌ನಂತಹ ಜಾಗತಿಕ ಸಂಸ್ಥೆಗಳು ವಾರ್ಷಿಕವಾಗಿ $1.4-1.6 ಬಿಲಿಯನ್ ಮೌಲ್ಯದ ಬಿಡಿಭಾಗಗಳನ್ನು ಭಾರತೀಯ ಕಂಪನಿಗಳಿಂದ ಖರೀದಿಸುತ್ತಿವೆ.
ಇದನ್ನೂ ಓದಿ: ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್ ದುಬಾರಿ, ಹಣದುಬ್ಬರ ಹೆಚ್ಚಳ ಇತ್ಯಾದಿ ಇದರ ಎಫೆಕ್ಟ್ ಹಲವು
ಜೆಫರೀಸ್ ವರದಿಯ ಪ್ರಕಾರ, ಈ 6 ಪ್ರಮುಖ ಕ್ಷೇತ್ರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ವಾವಲಂಬಿ ಮತ್ತು ಅತ್ಯಂತ ಸ್ಪರ್ಧಾತ್ಮಕ ಕೈಗಾರಿಕಾ ಶಕ್ತಿಯನ್ನಾಗಿ ಪರಿವರ್ತಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




