ಗಾನವಿ ವಿರುದ್ಧ ಸಿಡಿದೆದ್ದ ಸೋನಿಕಾ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ನಡುವೆಯೇ ಜಗಳ
ಸಣ್ಣ ಕಾರಣದಿಂದ ಶುರುವಾದ ಮನಸ್ತಾಪ ಈಗ ದೊಡ್ಡದಾಗಿ ಬೆಳೆಯುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಬಂದಿರುವ ಗಾನವಿ ಮತ್ತು ಸೋನಿಕಾ ಅವರು ಪರಸ್ಪರ ಜಗಳ ಆರಂಭಿಸಿದ್ದಾರೆ. ಮಾತುಮಾತಿಗೂ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಹೊಸ ಸಂಚಿಕೆಯಲ್ಲಿ ಇಬ್ಬರ ನಡುವಿನ ಜಗಳ ತೀವ್ರವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ಸೋನಿಕಾ ಮತ್ತು ಗಾನವಿ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಆರಂಭದಿಂದಲೂ ಅವರಿಬ್ಬರು ಹಾವು ಮುಂಗುಸಿ ರೀತಿ ವರ್ತಿಸುತ್ತಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಟಾಸ್ಕ್ ನಡೆಯುವಾಗಲೂ ಕೂಡ ಇಬ್ಬರ ನಡುವಿನ ದ್ವೇಷ ಎದ್ದು ಕಾಣಿಸುತ್ತಿದೆ. ಸೆಪ್ಟೆಂಬರ್ 30ರ ಸಂಚಿಕೆಯಲ್ಲಿ ಸೋನಿಕಾ ಮತ್ತು ಗಾನವಿ ಅವರು ಜಗಳ ಮಾಡಿಕೊಂಡಿದ್ದಾರೆ. ಏರುಧ್ವನಿಯಲ್ಲಿ ಬೈದುಕೊಂಡಿದ್ದಾರೆ.
ಟಾಸ್ಕ್ ಆಡುವಾಗ ಗಾನವಿ ವಿರುದ್ಧ ಇಡೀ ಟೀಮ್ ತಿರುಗಿ ಬಿದ್ದಿತ್ತು. ಇನ್ನುಳಿದ ಸ್ಪರ್ಧಿಗಳ ಹಿತಕ್ಕಾಗಿ ಗಾನವಿ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು. ಆದರೆ ಆ ಮಾತನ್ನು ಕೇಳಿಸಿಕೊಳ್ಳಲು ಗಾನವಿ ರೆಡಿ ಇರಲಿಲ್ಲ. ಸೌಂದರ್ಯಾ ಶೆಟ್ಟಿ, ಗಗನ್, ಸೋನಿಕಾ ಮುಂತಾದವರು ಗಾನವಿಗೆ ವಿರೋಧ ವ್ಯಕ್ತಪಡಿಸಿದರು.
ಬೇರೆ ಯಾರು ಒತ್ತಾಯಿಸಿದಾಗಲೂ ಗಾನವಿ ಅವರು ಅಷ್ಟೊಂದು ಟ್ರಿಗರ್ ಆಗಲಿಲ್ಲ. ಆದರೆ ಸೋನಿಕಾ ಅವರು ಮಾತನಾಡುತ್ತಿದ್ದಂತೆಯೇ ಗಾನವಿ ತಿರುಗಿ ಬಿದ್ದರು. ಆಗ ಇಬ್ಬರ ನಡುವೆ ತೀವ್ರ ವಾಗ್ದಾಳಿ ನಡೆಯಿತು. ಇಬ್ಬರೂ ಪರಸ್ಪರ ಖಾರದ ಮಾತುಗಳನ್ನು ಬಳಸಿ ಜಗಳ ಮಾಡಿದರು. ಸಿಟ್ಟಿಗೆದ್ದ ಸೋನಿಕಾ ಅವರನ್ನು ಸಮಾಧಾನ ಮಾಡಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದರು.
ನಾಲ್ಕನೇ ವಾರದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ನೀಡಿದ ಬಳಿಕ ಆಟದ ವೇಗ ಹೆಚ್ಚಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಿಂದಾಗಿ ಇನ್ನುಳಿದ ಸದಸ್ಯರಿಗೆ ಟೆನ್ಷನ್ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮಧ್ಯೆಯೇ ಜಟಾಪಟಿ ಶುರುವಾಗಿದೆ. ಗಾನವಿಯ ಬಗ್ಗೆ ಪ್ರಶಾಂತ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಗಾನವಿ ತುಂಬಾ ಫೇಕ್ ವ್ಯಕ್ತಿತ್ವ ಇರುವ ಸ್ಪರ್ಧಿ’ ಎಂದು ಸೌಂದರ್ಯಾ ಶೆಟ್ಟಿ ಅವರು ಹೇಳಿದ್ದಾರೆ. ‘ಇವಳು ಜಾಸ್ತಿ ಮಾತನಾಡುತ್ತಿದ್ದಾಳೆ’ ಎಂದು ಗಗನ್ ಅವರು ಗಾನವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗಾನವಿ ಬಗ್ಗೆ ದೊಡ್ಮನೆಯ ಸದಸ್ಯರ ವಿರೋಧ ಹೆಚ್ಚಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




