2018ರ ಷೇರು ಮಾರುಕಟ್ಟೆ ತಿರುಚಿದ ಪ್ರಕರಣದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ ಅವರನ್ನು ಗುರುವಾರ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ ಎಂದು ಈ ವಿಚಾರವಾಗಿ ನೇರ ಮಾಹಿತಿ ಇರುವವರು ತಿಳಿಸಿದ್ದಾರೆ. “ಸತತವಾಗಿ ಮೂರು ದಿನಗಳ ಕಾಲ ಚೆನ್ನೈನಲ್ಲಿ ವಿಚಾರಣೆ ಮಾಡಿದ ಮೇಲೆ ಬಂಧಿಸಲಾಗಿದ್ದು, ವಶಕ್ಕೆ ಪಡೆಯುವ ಕಾರಣಕ್ಕೆ ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಬಹುದು,” ಎಂದು ಮಾಹಿತಿ ನೀಡಿದ್ದಾರೆ. ಎನ್‌ಎಸ್‌ಇಯ ಹೈ-ಸ್ಪೀಡ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅಥವಾ ಆಲ್ಗೋ ಟ್ರೇಡಿಂಗ್ ಮತ್ತು ಕೋ-ಲೊಕೇಶನ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿ, ಕೆಲವು ದಲ್ಲಾಳಿಗಳು ಬೇರೆಯವರಿಗಿಂತ ಅನ್ಯಾಯದ ಮಾರ್ಗದಲ್ಲಿ ಲಾಭವನ್ನು ಗಳಿಸಿದ ಕೋ-ಲೊಕೇಷನ್ ಹಗರಣ ಎಂದು ಕರೆಯುವ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದೆ. ದೆಹಲಿ ಮೂಲದ ಬ್ರೋಕರೇಜ್ ಸಂಸ್ಥೆ ಒಪಿಜಿ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (Sebi) ಹಾಗೂ ಎನ್ಎಸ್ಇನೊಂದಿಗೆ ಹೆಸರಿಸದ ಅಧಿಕಾರಿಗಳ ವಿರುದ್ಧ 2018ರಲ್ಲಿ ಪ್ರಕರಣ ದಾಖಲಿಸಿದೆ.
ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ, ಮಂಡಳಿಯ ಮಾಜಿ ಉಪಾಧ್ಯಕ್ಷ ರವಿ ನಾರಿನ್ ಅವರನ್ನು ಸಿಬಿಐ ಕಳೆದ ಶುಕ್ರವಾರದಿಂದ ವಿಚಾರಣೆ ನಡೆಸುತ್ತಿದೆ. “ಈ ಪ್ರಕರಣದಲ್ಲಿ ಹೆಚ್ಚಿನ ಬಂಧನಗಳನ್ನು ಮಾಡಲಾಗುವುದು,” ಎಂದು ಮೂಲಗಳು ಹೇಳಿವೆ. ಸೆಬಿ ಆದೇಶದ ಅನುಸಾರವಾಗಿ ಹೊರಹೊಮ್ಮಿರುವ ಇತ್ತೀಚಿನ ಸತ್ಯದ ಬೆಳಕಿನಲ್ಲಿ ಮೂಲ ಎಫ್ಐಆರ್ ಅನ್ನು ವಿಸ್ತರಿಸಲಾಗಿದೆ. ಸುಬ್ರಮಣಿಯನ್ ಅವರನ್ನು ನೇಮಿಸಿಕೊಳ್ಳುವಲ್ಲಿ ಆಡಳಿತ ಲೋಪವಾಗಿದೆ ಮತ್ತು ಚಿತ್ರಾ ರಾಮಕೃಷ್ಣ ಅವರು ಅಪರಿಚಿತ ಮೂರನೇ ವ್ಯಕ್ತಿಗೆ ವಿನಿಮಯ ಕೇಂದ್ರದ ಹಣಕಾಸು ಡೇಟಾವನ್ನು ಸೋರಿಕೆ ಮಾಡಿದ್ದಾರೆ ಎಂದು ಸೆಬಿ ಆದೇಶ ಆರೋಪಿಸಿದೆ.
2017ರ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪತ್ರಕರ್ತ ಶಂತನು ಗುಹಾ ರೇ ಅವರು ಸಲ್ಲಿಸಿದ ನಂತರ ತನಿಖೆ ನಡೆದಿದ್ದು, ಅವರು ಆಲ್ಗೋ-ಟ್ರೇಡಿಂಗ್‌ನಲ್ಲಿ ವಂಚನೆ ಮತ್ತು ಅಕ್ರಮದ ಆರೋಪಗಳ ಬಗ್ಗೆ ತನಿಖೆಯ ವ್ಯಾಪ್ತಿಯನ್ನು ಏಜೆನ್ಸಿಯು ವಿಸ್ತರಿಸಬೇಕೆಂದು ಒತ್ತಾಯಿಸಿದ್ದರು. 2019ರ ಮೇ ತಿಂಗಳಲ್ಲಿ ಸಿಬಿಐ ತನ್ನ ತನಿಖೆಯು ಇನ್ನು ಮುಂದೆ ಮೂಲ ದೂರಿಗೆ ಸೀಮಿತವಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿತ್ತು. ಜುಲೈನಲ್ಲಿ ಸಂಸತ್ತಿಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ಸಿಬಿಐ ತನಿಖೆ ಇನ್ನೂ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: NSE Scam: ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣಗೆ ಸಹಾಯ ಮಾಡುತ್ತಿದ್ದ ನಿಗೂಢ ಬಾಬಾ ಯಾರು?; ರಹಸ್ಯದ ಬೆನ್ನತ್ತಿದ ಸಿಬಿಐ