ಆರಂಭಿಕ ಷೇರು ಮಾರಾಟದ ಮೂಲಕ 5200 ಕೋಟಿ ರೂಪಾಯಿ ಸಂಗ್ರಹಿಸಲು ಆನ್ಲೈನ್ ಕಾಸ್ಮೆಟಿಕ್ಸ್ ಮತ್ತು ಪರ್ಸನಲ್ ಕೇರ್ ರೀಟೇಲರ್ Nykaa ಮಾತೃಸಂಸ್ಥೆಯಾದ FSN ಇ-ಕಾಮರ್ಸ್ ಸೆಕ್ಯೂರಿಟೀಸ್ಗೆ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ (ಸೆಬಿ) ಅನುಮತಿ ನೀಡಿದೆ. ಕಂಪೆನಿಯ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು ಶುಕ್ರವಾರ ಸೆಬಿ ಜತೆಗೆ ಪ್ರಕಟಿಸಲಾಗಿದೆ. ಅದರಲ್ಲಿ ಹೇಳಿರುವ ಪ್ರಕಾರ, ಅಕ್ಟೋಬರ್ 28ರಿಂದ ನವೆಂಬರ್ 1ರ ತನಕ ಬಿಡ್ ತೆರೆದಿರುತ್ತದೆ. ಪ್ರತಿ ಷೇರಿಗೆ 1085ರಿಂದ 1125 ರೂಪಾಯಿ ಮಧ್ಯೆ ದರದ ಬ್ಯಾಂಡ್ ನಿಗದಿ ಆಗಿದೆ. FSN ಇ-ಕಾಮರ್ಸ್ ಪ್ರವರ್ತಕರಾಗಿ ಫಲ್ಗುಣಿ ನಾಯರ್ ಇದ್ದು, ಖಾಸಗಿ ಈಕ್ವಿಟಿ ಸಂಸ್ಥೆ ಟಿಪಿಜಿ ಬೆಂಬಲ ಇದೆ. ಕಂಪೆನಿ ಮೌಲ್ಯಮಾಪನ 700 ಕೋಟಿ ಅಮೆರಿಕನ್ ಡಾಲರ್ (52,315.55 ಕೋಟಿ ರೂಪಾಯಿ) ಆಗಲಿದೆ.
Nykaaದಿಂದ ಈ ವರ್ಷ ಆಗಸ್ಟ್ ತಿಂಗಳಲ್ಲಿ ಐಪಿಒಗೆ ಡ್ರಾಫ್ಟ್ ಪ್ರಾಸ್ಪೆಕ್ಟಸ್ ಫೈಲ್ ಮಾಡಿತ್ತು. ಮುಂಬರುವ ಐಪಿಒದಲ್ಲಿ ಹೊಸದಾಗಿ ಷೇರು ವಿತರಣೆ ಮಾಡುವ ಮೂಲಕ 630 ಕೋಟಿ ರೂಪಾಯಿ, ಆಫರ್ ಫಾರ್ ಸೇಲ್ (OFS) ಮೂಲಕ 4.197 ಕೋಟಿ ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಅಂತಿಮ ಪ್ರಾಸ್ಪೆಕ್ಟಸ್ನಲ್ಲಿ ತಿಳಿಸಲಾಗಿದೆ. ಟಿಪಿಜಿ ಗ್ರೋಥ್ IV SF Pte, ಲೈಟ್ಹೌಸ್ ಇಂಡಿಯಾ ಫಂಡ್, ಯೋಗೇಶ್ ಏಜೆನ್ಸಿಸ್ ಅಂಡ್ ಇನ್ವೆಸ್ಟ್ಮೆಂಟ್ಸ್, ಜೆಎಂ ಫೈನಾನ್ಷಿಯಲ್ ಸೇರಿದಂತೆ ಈಗಾಗಲೇ ಇರುವ 16 ಹೂಡಿಕೆದಾರರು ತಮ್ಮ ಷೇರುಗಳನ್ನು ಐಪಿಒದಲ್ಲಿ ಮಾರಾಟ ಮಾಡುತ್ತಾರೆ.
ಇನ್ನು Nykaa ಉದ್ಯೋಗಿಗಳು ತಮ್ಮ ಬಳಿ ಇರುವ ಸ್ಟಾಕ್ ಆಪ್ಷನ್ನಲ್ಲಿ 2,50,000 ಷೇರುಗಳನ್ನು ಮುಂಬರುವ ಐಪಿಒದಲ್ಲಿ ಮಾರಾಟ ಮಾಡಬಹುದು. ಕಂಪೆನಿಯು ಅರ್ಹ ಸಿಬ್ಬಂದಿಗೆ ಆಫರ್ ದರದ ಮೇಲೆ ಶೇಕಡಾ 10ರಷ್ಟರ ತನಕ ರಿಯಾಯಿತಿ ಇದೆ. ಷೇರು ಮಾರಾಟದಿಂದ ಬಂದ ಹಣವನ್ನು ಬ್ರ್ಯಾಂಡ್ ಪ್ರಚಾರಕ್ಕಾಗಿ, ಇದರ ಜತೆಗೆ ಬಾಕಿ ಇರುವ ಸಾಲ ತೀರಿಸಲು ಮತ್ತು ಭವಿಷ್ಯದ ಬಂಡವಾಳ ವೆಚ್ಚಕ್ಕಾಗಿ ಬಳಸಲಾಗುವುದು. ಪ್ರವರ್ತಕರು, ಸ್ಥಾಪಕರು ಮತ್ತು ಸಿಇಒ ಫಲ್ಗುಣಿ ನಾಯರ್ ಅವರು ಸದ್ಯಕ್ಕೆ ಶೇ 50ಕ್ಕೂ ಹೆಚ್ಚು ಷೇರನ್ನು ಹೊಂದಿದ್ದಾರೆ. ಭಾರತದಲ್ಲಿ ಬೇರೆ ಯಾವುದೇ ಲಿಸ್ಟೆಡ್ ಕಂಪೆನಿಯು Nykaa ಮಾಡುವಂಥ ವ್ಯಾಪಾರವನ್ನು ಮಾಡುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: Paytm IPO: ಪೇಟಿಎಂನ 16,600 ಕೋಟಿ ರೂಪಾಯಿಯ ಐಪಿಒಗೆ ಸೆಬಿಯಿಂದ ಅನುಮತಿ