Paytm IPO: ಪೇಟಿಎಂನ 16,600 ಕೋಟಿ ರೂಪಾಯಿಯ ಐಪಿಒಗೆ ಸೆಬಿಯಿಂದ ಅನುಮತಿ
16,600 ಕೋಟಿ ರೂಪಾಯಿಯ ಪೇಟಿಎಂ ಐಪಿಒಗೆ ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಫಿನ್ಟೆಕ್ ಪ್ಲಾಟ್ಫಾರ್ಮ್ ಆದ ಪೇಟಿಎಂನ ಮಾತೃಸಂಸ್ಥೆ One97 ಕಮ್ಯುನಿಕೇಷನ್ಸ್ಗೆ 16,600 ಕೋಟಿ ರೂಪಾಯಿಯ ಆರಂಭಿಕ ಸಾರ್ವಜನಿಕ ಕೊಡುಗೆಯ (IPO) ಅನುಮತಿ ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ (SEBI) ದೊರೆತಿದೆ ಎಂದು ಈ ಬಗ್ಗೆ ಮಾಹಿತಿ ಇರುವ ಮೂಲಗಳಿಂದ ತಿಳಿದುಬಂದಿದೆ. 8300 ಕೋಟಿ ರೂಪಾಯಿ ಪ್ರಾಥಮಿಕ ಷೇರು ಮಾರಾಟ ಹಾಗೂ 8300 ಕೋಟಿ ರೂಪಾಯಿ ಆಫರ್ ಫಾರ್ ಸೇಲ್ (OFS) ಮೂಲಕ, ಅಂದರೆ ಈಗಾಗಲೇ ಇರುವ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಂಗ್ರಹಿಸುತ್ತಾರೆ. ನವೆಂಬರ್ ಮಧ್ಯ ಭಾಗದಲ್ಲಿ ಲಿಸ್ಟಿಂಗ್ ಮಾಡುವುದಕ್ಕೆ ಕಂಪೆನಿ ಯೋಜನೆ ಹಾಕಿಕೊಂಡಿದೆ. ಕರಡನ್ನು ಜುಲೈ ತಿಂಗಳಲ್ಲಿ ಫೈಲ್ ಮಾಡಲಾಗಿತ್ತು. ಷೇರು ಮಾರಾಟದ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಕಂಪೆನಿಯು ಗ್ರಾಹಕರು ಮತ್ತು ವರ್ತಕರ ಸ್ವಾಧೀನ, ಹೊಸ ಉದ್ಯಮಗಳಿಗೆ, ಖರೀದಿ ಮತ್ತು ಸ್ಟ್ರಾಟೆಜಿಕ್ ಸಹಭಾಗಿತ್ವಕ್ಕಾಗಿ ಬಳಸಲಾಗುತ್ತದೆ.
ಭಾರತದಲ್ಲಿ ಈ ವರೆಗಿನ ಅತಿ ದೊಡ್ಡ ಐಪಿಒ ಇದಾಗಲಿದೆ. ಈ ಹಿಂದಿನ ದಾಖಲೆ ಕೋಲ್ ಇಂಡಿಯಾ ಹೆಸರಿನಲ್ಲಿತ್ತು. ಹತ್ತು ವರ್ಷದ ಹಿಂದೆ 15000 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. One97 ಕಮ್ಯುನಿಕೇಷನ್ಸ್ ಸ್ಥಾಪನೆ ಮಾಡಿರುವುದು 2000ನೇ ಇಸವಿಯಲ್ಲಿ, ವಿಜಯ್ ಶೇಖರ್ ಶರ್ಮಾ ಸ್ಥಾಪಕರು. ಈ ಕಂಪೆನಿ ತನ್ನ ಪಯಣ ಆರಂಭಿಸಿದ್ದು ಮೌಲ್ಯವರ್ಧಿತ ಸೇವೆ ಒದಗಿಸುವುದರೊಂದಿಗೆ. ಆ ನಂತರದ ವರ್ಷಗಳಲ್ಲಿ ಆನ್ಲೈನ್ ಮೊಬೈಲ್ ಪೇಮೆಂಟ್ಸ್ ಸಂಸ್ಥೆಯಾಗಿ ಬದಲಾಯಿತು. VAS ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತಾ ದಶಕವೇ ಕಳೆದುಹೋಗಿದೆ. 2010ನೇ ಇಸವಿಯಲ್ಲಿ ಮೊಬೈಲ್ ರೀಚಾರ್ಜ್ ಪ್ಲಾಟ್ಫಾರ್ಮ್ ಶುರು ಮಾಡಲಾಯಿತು. ಅಲ್ಲಿಯ ತನಕ ಗ್ರಾಹಕರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಮಾಡುವುದಕ್ಕೆ ಆಫ್ಲೈನ್ ಸ್ಟೋರ್ಗಳಲ್ಲಿ ಹಣ ಪಾವತಿಸಬೇಕಿತ್ತು.
ಆಸಕ್ತಿಕರ ಸಂಗತಿ ಏನೆಂದರೆ, One97 ಕಮ್ಯುನಿಕೇಷನ್ಸ್ ಸಾರ್ವಜನಿಕ ವಿತರಣೆ ಮುಂದಾಗುತ್ತಿರುವುದು ಇದು ಮೊದಲೇನಲ್ಲ. 2010ನೇ ಇಸವಿಯಲ್ಲಿ 120 ಕೋಟಿ ರೂಪಾಯಿ ಸಂಗ್ರಹಿಸಬೇಕು ಅಂದುಕೊಂಡಿತ್ತು. ಆದರೆ ಮಾರುಕಟ್ಟೆ ಏರಿಳಿತ ವಿಪರೀತ ಇದ್ದುದರಿಂದ ಉದ್ದೇಶ ಕೈಬಿಟ್ಟಿತು. ಸದ್ಯಕ್ಕೆ ಪೇಟಿಎಂ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಇಂಟರ್ನೆಟ್ ಕಂಪೆನಿ/ ಕೊನೆಯದಾಗಿ 2019ರ ನವೆಂಬರ್ನಲ್ಲಿ ಬಂಡವಾಳ ಸಂಗ್ರಹಿಸಿದಾಗ ಅದರ ಮೌಲ್ಯ 1600 ಕೋಟಿ ಅಮೆರಿಕನ್ ಡಾಲರ್ ಇತ್ತು. ಈ ಕಂಪೆನಿಯಲ್ಲಿ ಟಿ ರೋವೆ ಪ್ರೈಸ್, ಡಿಸ್ಕವರಿ ಕ್ಯಾಪಿಟಲ್, ಡಿ1 ಕ್ಯಾಪಿಟಲ್, ಆ್ಯಂಟ್ ಫೈನಾನ್ಷಿಯಲ್, ಆಲಿಬಾಬ ಸಿಂಗಾಪೂರ್, ಎಲಿವೇಷನ್ ಕ್ಯಾಪಿಟಲ್, ಸಾಫ್ಟ್ಬ್ಯಾಂಕ್ ವಿಷನ್ ಫಂಡ್ ಮತ್ತು ಬಿಎಚ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಹೂಡಿಕೆ ಮಾಡಿವೆ. ಕಂಪೆನಿಯು 2020-21ರ ಹಣಕಾಸು ವರ್ಷದಲ್ಲಿ 3186 ಕೋಟಿ ರೂ. ಆದಾಯ ಗಳಿಸಿತ್ತು. ಅದರ ಹಿಂದಿನ ವರ್ಷದಲ್ಲಿ 3540 ಕೋಟಿ ಆದಾಯ ಪಡೆದಿತ್ತು. ಇನ್ನು ನಷ್ಟ ಎಂದು 1701 ಕೋಟಿ ರೂಪಾಯಿ ಹಾಗೂ ಅದರ ಹಿಂದಿನ ವರ್ಷ 2942 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ಇದನ್ನೂ ಓದಿ: Paytm IPO: ಪೇಟಿಎಂ ಐಪಿಒಗೆ ತಡೆ ನೀಡುವಂತೆ ಮಾಜಿ ನಿರ್ದೇಶಕರಿಂದ ಒತ್ತಾಯ; ಒತ್ತಡದಲ್ಲಿ ಸಿಲುಕಿಕೊಂಡ ಕಂಪೆನಿ