ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಅಂತಿದ್ದೀರಾ? ಅದಕ್ಕಾಗಿ ಮಾರ್ಕೆಟ್ನಲ್ಲಿ ಹುಡುಕಾಟ ನಡೆಸಿದ್ದೀರಾ? ಹಾಗೆ ನೀವು ಮಾರುಕಟ್ಟೆಯಲ್ಲಿ ಹುಡುಕುತ್ತಾ ಹೋದರೆ ನಿರಾಶೆಗೊಳ್ಳುತ್ತೀರಿ. ಏಕೆಂದರೆ ಓಲಾ ಎಲೆಕ್ಟ್ರಿಕ್ S1 ಮತ್ತು S1 Pro ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಖರೀದಿ ವಿಂಡೋವನ್ನು ಇಂದು (ಸೆಪ್ಟೆಂಬರ್ 8, 2021, ಬುಧವಾರ) ತೆರೆಯಲಾಗಿದೆ. 1 ಲಕ್ಷದ ಆರಂಭಿಕ ಬೆಲೆಯಲ್ಲಿ 2021ರ ಆಗಸ್ಟ್ 15ರಂದು ಬಿಡುಗಡೆಯಾದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಭರವಸೆ ನೀಡುತ್ತಿವೆ ಮತ್ತು ಪ್ರಬಲವಾದ ಆರಂಭಿಕ ಪ್ರತಿಕ್ರಿಯೆಯನ್ನು ಸಹ ಪಡೆದಿವೆ. ಜುಲೈ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಪ್ರೀ ಬುಕಿಂಗ್ ತೆರೆದಿದೆ ಮತ್ತು 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಾಯ್ದಿರಿಸಲಾಗಿದೆ. ಈಗ ಸಂಪೂರ್ಣ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸುವವರಿಗೆ ಕಂಪೆನಿಯು ವಿಂಡೋವನ್ನು ತೆರೆದಿದ್ದು, ನೇರವಾಗಿ ಮನೆಗೆ ಮಾರಾಟದ ಮಾದರಿಯನ್ನು ಅನುಸರಿಸುತ್ತಿದೆ. ಅಂದರೆ, ನಿರೀಕ್ಷಿತ ಖರೀದಿದಾರರು ಎಲ್ಲ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಿದ ನಂತರ, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆದ್ಯತೆ ಜಾಗದಲ್ಲಿ ಅಥವಾ ತಿಳಿಸಿದ ಸ್ಥಳದಲ್ಲಿ ನೇರವಾಗಿ ತಲುಪಿಸುವುದನ್ನು ನಿರೀಕ್ಷಿಸಬಹುದು.
ಆದರೆ, ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ ಅಥವಾ ಆಫರ್ನಲ್ಲಿ ಇರುವ ಹಲವು ಹಣಕಾಸು ಮತ್ತು ಇಎಂಐ ಸಂಬಂಧಿತ ಯೋಜನೆಗಳನ್ನು ಬಳಸುವುದು ಹೇಗೆ?
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನಿಮ್ಮ ಮಾರ್ಗದರ್ಶಿ ಇಲ್ಲಿದೆ:
ಹಂತ 1 – ಎರಡು ವೇರಿಯಂಟ್ಗಳಲ್ಲಿ ಗ್ರಾಹಕರು ತಾವು ಕಾಯ್ದಿರಿಸಿದ್ದಕ್ಕೆ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಓಲಾ ಎಲೆಕ್ಟ್ರಿಕ್ ವೆಬ್‌ಸೈಟ್‌ಗೆ ತೆರಳಿ, ಲಾಗ್ ಇನ್ ಮಾಡಬಹುದು. ಮುಂಚಿತವಾಗಿ ಒಂದು ಯೂನಿಟ್ ಖರೀದಿಸುವುದರಿಂದ ಆದ್ಯತೆ ವಿತರಣೆ ಪಡೆಯಲು ಸಹಾಯ ಮಾಡಬಹುದು. ಆದರೆ ಕಂಪೆನಿಯು ಸ್ಟಾಕ್‌ಗಳು ಕೊನೆಗೊಳ್ಳುವವರೆಗೆ ಮಾತ್ರ ಖರೀದಿ ಪ್ರಕ್ರಿಯೆ ತೆರೆದಿರುತ್ತದೆ ಎಂಬುದನ್ನು ಗಮನಿಸಬೇಕು.
ಹಂತ 2 – ಓಲಾ ಎಲೆಕ್ಟ್ರಿಕ್ S1 ಅಥವಾ ಓಲಾ ಎಲೆಕ್ಟ್ರಿಕ್ S1 Pro ವೇರಿಯಂಟ್ ಮಧ್ಯೆ ಆಯ್ಕೆ ಮಾಡಿ. ಆ ನಂತರ ಲಭ್ಯವಿರುವ 10 ಬಣ್ಣದ ಆಯ್ಕೆಗಳು ಮತ್ತು ಎರಡು ಫಿನಿಷ್ಗಳಿಂದ- ಮ್ಯಾಟ್ ಅಥವಾ ಗ್ಲಾಸ್ ಆಯ್ಕೆ ಮಾಡಿ. ಆದರೆ ಅದನ್ನು ರಿಸರ್ವೇಷನ್ ಸಮಯದಲ್ಲಿ ಆಯ್ಕೆ ಮಾಡಿರಬಹುದು. ಆದರೆ ಆಯ್ಕೆಗಳನ್ನು ಬದಲಾಯಿಸಲು ಸಾಧ್ಯವಿದೆ.
ಹಂತ 3 – ಓಲಾ ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಸುರಕ್ಷಿತ ಪಾವತಿ ಚಾನೆಲ್‌ಗಳ ಭರವಸೆ ನೀಡುತ್ತದೆ. ಸಾಲ ಮತ್ತು ಇಎಂಐ ಆಯ್ಕೆಗಳಿಗಾಗಿ ಕಂಪೆನಿಯು ಹಲವಾರು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಓಲಾ S1ಗಾಗಿ ರೂ. 2,999 ಮತ್ತು ಓಲಾ S1 Proಗೆ ರೂ. 3,199ರಿಂದ ಪ್ರಾರಂಭವಾಗುವ ಇಎಂಐಗಳೊಂದಿಗೆ ಹಣಕಾಸು ಸಹ ಲಭ್ಯವಿದೆ, ಸೌಜನ್ಯ ಓಲಾ ಫೈನಾನ್ಷಿಯಲ್ ಸರ್ವೀಸಸ್.
ನಿಮಗೆ ಹಣಕಾಸಿನ ಅಗತ್ಯವಿಲ್ಲದಿದ್ದಲ್ಲಿ ರೂ. 20,000 ಅಥವಾ ರೂ. 25,000 ಮುಂಗಡ ಪಾವತಿ- ಆಯ್ಕೆ ಮಾಡಿದ ವೇರಿಯಂಟ್ ಅವಲಂಬಿಸಿ ಮಾಡಬಹುದು. ಇನ್ವಾಯ್ಸ್ ಪಡೆದ ನಂತರ ಉಳಿದ ಮೊತ್ತವನ್ನು ಪಾವತಿಸಬಹುದು.
ಡೌನ್ಪೇಮೆಂಟ್ ಮತ್ತು ಮುಂಗಡವನ್ನು ಸಂಪೂರ್ಣವಾಗಿ ಮರುಪಾವತಿಸಬಹುದು; ಆದರೆ ಕಂಪೆನಿಯ ಕಾರ್ಖಾನೆಯಿಂದ ಯೂನಿಟ್ ಬರುವವರೆಗೆ ಮಾತ್ರ ಈ ಅವಕಾಶ. ಖರೀದಿ ವಿಧಿವಿಧಾನಗಳು ಪೂರ್ಣಗೊಂಡ ನಂತರ ವಿತರಣೆ ದಿನಾಂಕವನ್ನು ನೀಡಲಾಗುತ್ತದೆ.
ಓಲಾ ಮತ್ತು ಓಲಾ ಎಲೆಕ್ಟ್ರಿಕ್ ಆ್ಯಪ್‌ಗಳನ್ನು ಬಳಸಿಕೊಂಡು ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವಿಮೆ ಮಾಡಿಸುವುದನ್ನು ಕೂಡ ಆಯ್ಕೆ ಮಾಡಬಹುದು ಎಂಬುದನ್ನು ಗಮನಿಸುವುದು ಮುಖ್ಯ. “ನೋಂದಣಿಗಾಗಿ ‘1 ವರ್ಷದ ಸ್ವಂತ ಹಾನಿ ಮತ್ತು 5 ವರ್ಷಗಳ ಥರ್ಡ್ ಪಾರ್ಟಿಯ ಮೂಲ ಪಾಲಿಸಿಗೆ ಕಡ್ಡಾಯವಾಗಿದೆ,” ಎಂದು ಕಂಪೆನಿ ಹೇಳಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆ ಅಕ್ಟೋಬರ್‌ನಿಂದ ಆರಂಭವಾಗಲಿದೆ. ಮತ್ತು ನೀವು ಮೊದಲಿಗೆ ಉತ್ಪನ್ನಗಳನ್ನು ಅನುಭವ ಪಡೆಯಲು ಬಯಸಿದರೆ ಟೆಸ್ಟ್ ಡ್ರೈವ್ ಅನ್ನು ಸಹ ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು.
ಇದನ್ನೂ ಓದಿ: Ola Electric Scooter: ಓಲಾ ಸ್ಕೂಟರ್ ಖರೀದಿಸಬೇಕು ಅಂತಿದ್ದೀರಾ? ಸಾಲ ಸಿಗುತ್ತೆ ಈ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ
(Ola Electric Scooter Sale Start From Today How To Purchase It On Online)
Published On - 7:02 pm, Wed, 8 September 21