OLX Layoff: ಒಎಲ್​ಎಕ್ಸ್​ನಲ್ಲೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,500 ಮಂದಿ

|

Updated on: Jan 31, 2023 | 12:26 PM

ಜಾಗತಿಕವಾಗಿ ಶೇ 15ರಷ್ಟು, ಅಂದರೆ 1,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಒಎಲ್​​​ಎಕ್ಸ್ ಗ್ರೂಪ್ ಘೋಷಿಸಿದೆ.

OLX Layoff: ಒಎಲ್​ಎಕ್ಸ್​ನಲ್ಲೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,500 ಮಂದಿ
ಒಎಲ್​ಎಕ್ಸ್ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ಟೆಕ್​​ ಕಂಪನಿಗಳಲ್ಲಿ ಉದ್ಯೋಗ ಕಡಿತ ಮುಂದುವರಿದಿರುವ ಬೆನ್ನಲ್ಲೇ ಜಾಗತಿಕವಾಗಿ ಶೇ 15ರಷ್ಟು, ಅಂದರೆ 1,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ (Layoff) ಒಎಲ್​​​ಎಕ್ಸ್ ಗ್ರೂಪ್ (OLX Group) ಘೋಷಿಸಿದೆ. ಬೇಡಿಕೆ ಕುಸಿತದ ಕಾರಣ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸ್ಥೂಲ ಆರ್ಥಿಕತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಒಎಲ್​ಎಕ್ಸ್ ವಕ್ತಾರರು ತಿಳಿಸಿದ್ದಾರೆ. ಉದ್ಯೋಗ ಕಡಿತದ ಬಗ್ಗೆ ವಿಷಾದವಿದೆ. ಕಂಪನಿಗೆ ಅಮೂಲ್ಯ ಕೊಡುಗೆ ನೀಡಿದ್ದವರನ್ನು ವಜಾಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಭವಿಷ್ಯದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಇದು ನಮಗೆ ಅನಿವಾರ್ಯ ನಿರ್ಧಾರವಾಗಿದೆ. ವಜಾ ಪ್ರಕ್ರಿಯೆಯ ವೇಳೆ ನಮ್ಮ ಉದ್ಯೋಗಿಗಳನ್ನು ನ್ಯಾಯಯುತವಾಗಿ ಮತ್ತು ಘನತೆಯಿಂದ ನಡೆಸಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಕಡಿತವು ಒಎಲ್​ಎಕ್ಸ್ ಆಟೋಸ್ ಹಾಗೂ ಒಎಲ್​ಎಕ್ಸ್​ನ ಭಾರತದ ಘಟಕದ ಮೇಲೂ ಪರಿಣಾಮ ಬೀರಲಿವೆ. 2006ರಲ್ಲಿ ಆರಂಭವಾಗಿದ್ದ ಕಂಪನಿ 2009ರಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು.

ಸೋಮವಾರವಷ್ಟೇ ಡಚ್ ಕಂಪನಿ ಫಿಲಿಪ್ಸ್ ಎರಡನೇ ಸುತ್ತಿನಲ್ಲಿ 6,000 ಉದ್ಯೋಗಿಗಳ ವಜಾ ನಿರ್ಧಾರ ಪ್ರಕಟಿಸಿತ್ತು. ಲಾಭದಲ್ಲಿ ಕುಸಿತ, ರೋಗಿಗಳಿಗೆ ನಿದ್ರೆ ಸಂದರ್ಭದಲ್ಲಿ ಉಸಿರಾಟಕ್ಕೆ ಅನುವು ಮಾಡಿಕೊಡುವ ಸಾಧನಗಳಲ್ಲಿ ಲೋಪ ಇದ್ದು ಅದನ್ನು ವಾಪಸ್ ಪಡೆಯಬೇಕಾಗಿ ಬಂದುದು ಇತ್ಯಾದಿ ಕಾರಣಗಳಿಂದ ಕಂಪನಿಯು ಉದ್ಯೋಗ ಕಡಿತದ ಮೊರೆ ಹೋಗಿತ್ತು.

ಇದನ್ನೂ ಓದಿ: Philips Layoff: ಮತ್ತೆ 6,000 ಉದ್ಯೋಗಿಗಳ ವಜಾಗೊಳಿಸಿದ ಫಿಲಿಪ್ಸ್

ಇತ್ತೀಚೆಗಷ್ಟೇ ಅಲ್ಫಾಬೆಟ್​​ನ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್​​ನ ಜರ್ಮನ್ ಸಾಫ್ಟ್​ವೇರ್ ಕಂಪನಿ ಎಸ್​ಎಪಿ ಉದ್ಯೋಗ ಕಡಿತ ಘೋಷಿಸಿದ್ದವು. ಇದೀಗ ಒಎಲ್​ಎಕ್ಸ್​ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ್ದು, 2023ರಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರಿಯುವ ಸೂಚನೆ ನೀಡಿದೆ. ಕಳೆದ ವಾರ ಇಂಟರ್​ನ್ಯಾಷನಲ್ ಬ್ಯುಸಿನೆಸ್ ಮಷಿನ್ಸ್ ಕಾರ್ಪೊರೇಷನ್ 3,900 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

2023ರ ಮೊದಲ 15 ದಿನಗಳಲ್ಲಿ ಜಾಗತಿಕವಾಗಿ 91 ಕಂಪನಿಗಳು 24,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದೀಗ 2023ರ ಜನವರಿ ತಿಂಗಳ ಉತ್ತರಾರ್ಧದಲ್ಲಿಯೂ ಉದ್ಯೋಗ ಕಡಿತ ಮುಂದುವರಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ