LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್ಐಸಿ
ಅದಾನಿ ಸಮೂಹದ 30,127 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ ಜನವರಿ 27ರಂದು 56,142 ಕೋಟಿ ರೂ. ಆಗಿತ್ತು ಎಂದು ಎಲ್ಐಸಿ ಪ್ರಕಟಣೆ ತಿಳಿಸಿದೆ. ಆದರೆ, ಜನವರಿ 27ರ ನಂತರ ಅದಾನಿ ಸಮೂಹದಲ್ಲಿ ಎಲ್ಐಸಿಯ ಎಷ್ಟು ಪಾಲು ಬಂಡವಾಳದ ಮೌಲ್ಯ ಎಷ್ಟಾಗಿದೆ ಎಂಬ ಲೆಕ್ಕಾಚಾರವನ್ನು ಎಲ್ಐಸಿ ನೀಡಿಲ್ಲ ಎಂಬುದು ಗಮನಾರ್ಹ.
ನವದೆಹಲಿ: ಅದಾನಿ ಸಮೂಹದ (Adani Group) ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಬಗ್ಗೆ ಭಾರತೀಯ ಜೀವ ವಿಮಾ ನಿಗಮ (LIC) ಕೊನೆಗೂ ಮೌನ ಮುರಿದಿದೆ. ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಸಮೂಹದ ಮೇಲೆ ಮಾಡಿರುವ ಆರೋಪದ ಬಳಿಕ ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಇದರಿಂದಾಗಿ ಆ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಎಲ್ಐಸಿಗೂ ಭಾರೀ ನಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎಲ್ಐಸಿ ಮೌನ ತಳೆದಿತ್ತು. ಈ ವಿಚಾರವಾಗಿ ಸೋಮವಾರ ಸ್ಪಷ್ಟನೆ ನೀಡಿರುವ ಎಲ್ಐಸಿ, ತಾನು ನಿರ್ವಹಿಸುತ್ತಿರುವ ಒಟ್ಟು ಸ್ವತ್ತಿನ ಶೇ 1ಕ್ಕಿಂತಲೂ ಕಡಿಮೆ ಮೊತ್ತವನ್ನು ಮಾತ್ರ ಅದಾನಿ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ತಿಳಿಸಿದೆ.
ಅದಾನಿ ಸಮೂಹದ 30,127 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ ಜನವರಿ 27ರಂದು 56,142 ಕೋಟಿ ರೂ. ಆಗಿತ್ತು ಎಂದು ಎಲ್ಐಸಿ ಪ್ರಕಟಣೆ ತಿಳಿಸಿದೆ. 2022ರ ಸೆಪ್ಟೆಂಬರ್ 30ರ ಲೆಕ್ಕಾಚಾರದ ಪ್ರಕಾರ, ಒಟ್ಟಾರೆಯಾಗಿ 41.66 ಲಕ್ಷ ಕೋಟಿ ಮೌಲ್ಯದ ಸಂಪತ್ತನ್ನು ಎಲ್ಐಸಿ ನಿರ್ವಹಿಸುತ್ತಿದೆ. ಇದರಂತೆ ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಶೇ 0.975 ಆಗಿದೆ ಎಂದು ಎಲ್ಐಸಿ ಪ್ರಕಟಣೆ ತಿಳಿಸಿದೆ.
ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್ಐಸಿ ಹೊಂದಿರುವ ಡೆಬ್ಟ್ ಸೆಕ್ಯುರಿಟೀಸ್ ರೇಟಿಂಗ್, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಹೂಡಿಕೆ ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ
ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಮಾಡಿರುವ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆ ತಿರುಚಿದ ಆರೋಪದ ನಂತರ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಜನವರಿ 27ರ ನಂತರ ಈವರೆಗೆ ಒಟ್ಟಾರೆಯಾಗಿ ಅದಾನಿ ಸಮೂಹ ಕಂಪನಿಗಳು ಒಟ್ಟು 5.56 ಲಕ್ಷ ಕೋಟಿ ರೂ. ಸಂಪತ್ತನ್ನು ಕಳೆದುಕೊಂಡಿವೆ. ಜನವರಿ 27ರ ನಂತರ ಅದಾನಿ ಸಮೂಹದಲ್ಲಿ ಎಲ್ಐಸಿಯ ಎಷ್ಟು ಪಾಲು ಬಂಡವಾಳದ ಮೌಲ್ಯ ಎಷ್ಟಾಗಿದೆ ಎಂಬ ಲೆಕ್ಕಾಚಾರವನ್ನು ಎಲ್ಐಸಿ ನೀಡಿಲ್ಲ ಎಂಬುದು ಗಮನಾರ್ಹ.
ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಎಲ್ಐಸಿಗೂ ದೊಡ್ಡ ಹೊಡೆತ ನೀಡಿದೆ. ಎರಡೇ ದಿನಗಳಲ್ಲಿ ಎಲ್ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು. ಆ ಬಳಿಕ ಪ್ರತಿಕ್ರಿಯಿಸಿದ್ದ ಎಲ್ಐಸಿ, ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವುದರಿಂದ ನಮಗೂ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿತ್ತು. ಆದರೆ, ಹೂಡಿಕೆಯ ಮೊತ್ತದ ವಿವರಕ್ಕೆ ಸಂಬಂಧಿಸಿ ಮೌನ ತಾಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Tue, 31 January 23